ಬೆಂಗಳೂರು(ಫೆ.19): ನಾಳೆ(ಫೆ.20)ಯಿಂದ ಬೆಂಗಳೂರಿನಲ್ಲಿ ಏರ್ ಶೋ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ಆಘಾತಕಾರಿ ಸುದ್ದಿಯೊಂದು ನಗರದ ಜನತೆಯನ್ನು ತಲ್ಲಣಗೊಳಿಸಿದೆ.

ಏರ್​ ಶೋ ಆರಂಭಕ್ಕೂ ಮುನ್ನವೇ ಲಘು ವಿಮಾನ ಅಪಘಾತವಾಗಿದ್ದು, ಯಲಹಂಕದಲ್ಲಿ ತಾಲೀಮು ನಡೆಸುವ ವೇಳೆ ಸೂರ್ಯ ಕಿರಣ್​ ಹೆಸರಿನ ಎರಡು ಲಘು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ.

"

ತಾಲೀಮು ವೇಳೆ ಪರಸ್ಪರ ಡಿಕ್ಕಿ ಹೊಡೆದುಕೊಂಡ ಎರಡು ಲಘು ವಿಮಾನಗಳು, ಮನೆಯೊಂದರ ಮೇಲೆ ಬಿದ್ದಿದ್ದು ಪೈಲೆಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ಗಾಯಗೊಂಡಿರುವ ಓರ್ವ ಪೈಲೆಟ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಮಾನಗಳು ಮನೆ ಮೇಲೆ ಬಿದ್ದ ಪರಿಣಾಮ ಮನೆ ಕೂಡ ಧಗಧಗ ಹೊತ್ತಿ ಉರಿಯುತ್ತಿದ್ದು, ಮನೆಯವರು ಕೂಡ ಸುರಕ್ಷಿತವಾಗಿದ್ದಾರೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.

ಇನ್ನು 12ನೇ ಏರೋ ಇಂಡಿಯಾ ಶೋಗೆ ದಿನಗಣನೆ ಆರಂಭವಾಗಿದ್ದು, ಫೆ. 20ರಂದು ಉದ್ಘಾಟನೆಗೊಳ್ಳಲಿದೆ. ಐದು ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ ಯುದ್ಧ ಸಾಮಗ್ರಿಗಳ ಪ್ರದರ್ಶನ, ಯುದ್ಧ ಹಾಗೂ ನಾಗರೀಕ ಸೇವಾ ವಿಮಾನಗಳು ಶಕ್ತಿ ಪ್ರದರ್ಶನ ಮಾಡಲಿವೆ.