ಮುಖ್ಯಮಂತ್ರಿಗಳ ಸೂಚನೆ ಹೊರತಾಗಿಯೂ, 2.13 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು 'ಕರ್ತವ್ಯ' ಮೊಬೈಲ್ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕೂಡಲೇ ನೋಂದಣಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲು ಸೂಚಿಸಿದ್ದಾರೆ.

ಬೆಂಗಳೂರು (ಜೂ.18): ಮುಖ್ಯಮಂತ್ರಿ(Chief Minister of karnataka) ಅವರ ಸೂಚನೆ ಬಳಿಕವೂ ರಾಜ್ಯದಲ್ಲಿ 2,13,925 ಸರ್ಕಾರಿ ಅಧಿಕಾರಿ/ನೌಕರರು ‘ಕರ್ತವ್ಯ’ ಮೊಬೈಲ್‌ ಆ್ಯಪ್‌(Kartavya mobile app)ನಲ್ಲಿ ನೋಂದಣಿ(Register) ಮಾಡಿಕೊಂಡಿಲ್ಲ. ಈ ಬಗ್ಗೆ ಕೂಡಲೇ ಗಮನಹರಿಸಿ ನೋಂದಣಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್(Shalini Rajneesh, Chief Secretary to the State Government) ಸೂಚಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

KAAMS ಕಡ್ಡಾಯಗೊಳಿಸಿದ್ದ ಸರ್ಕಾರ

ಕಳೆದ ಜೂ.4ರಂದು ನಡೆದ ಎಲ್ಲ ಕಾರ್ಯದರ್ಶಿಗಳ ಸಭೆಯಲ್ಲಿ ಮುಖ್ಯಮಂತ್ರಿ ಅವರು ಎಲ್ಲ ಸರ್ಕಾರಿ ಅಧಿಕಾರಿಗಳು/ನೌಕರರು ನಿಗದಿತ ಸಮಯಕ್ಕೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ ಎಲ್ಲ ನೌಕರರು ಕರ್ತವ್ಯ(KAAMS) ಮೊಬೈಲ್‌ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡು ಪ್ರತಿ ದಿನ ತಮ್ಮ ಹಾಜರಾತಿ ಕಡ್ಡಾಯವಾಗಿ ದಾಖಲಿಸಬೇಕಿದೆ.

ಅಂಕಿ-ಅಂಶಗಳೇನು ಹೇಳತ್ತೆ?

ಜೂ.16ರ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಈವರೆಗೂ 2,13,925 ಅಧಿಕಾರಿ/ನೌಕರರು ಕರ್ತವ್ಯ ಮೊಬೈಲ್‌ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಹೀಗಾಗಿ ವೈಯಕ್ತಿಕ ಗಮನಹರಿಸಿ, ತಮ್ಮ ಜಿಲ್ಲೆಯಲ್ಲಿ ಈವರೆಗೂ ಕರ್ತವ್ಯ ಮೊಬೈಲ್‌ ಆ್ಯಪ್‌ನಲ್ಲಿ ನೋಂದಣಿಯಾಗದ ಅಧಿಕಾರಿ/ನೌಕರರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಈ ಬಗ್ಗೆ ಕೈಗೊಂಡ ಕ್ರಮದ ವರದಿಯನ್ನು ಏಳು ದಿನಗಳೊಳಗೆ ತಮಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.