ತಲಾ 3 ಕೋಟಿ ಕೊಡದಿದ್ದರೆ ನೈಸ್‌ನಿಂದ ಸಂಪುಟ ಸಮಿತಿ,  ಸುಪ್ರೀಂಕೋರ್ಟ್‌ಗೆ ಮನವಿ ಮಾಡಿ ರೈತರಿಗೆ ವಾಪಸ್‌: ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ 

ಬೆಂಗಳೂರು(ಮಾ.28): ನೈಸ್‌ ಸಂಸ್ಥೆಯು ಟೌನ್‌ಶಿಪ್‌ಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸದಿದ್ದರೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿ ರೈತರಿಗೆ ಭೂಮಿ ವಾಪಸ್‌ ಕೊಡಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸಂಪುಟ ಉಪಸಮಿತಿ ಸಭೆಯ ಬಳಿಕ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ಅವರೊಂದಿಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಟೌನ್‌ಶಿಪ್‌ಗಾಗಿ ನೈಸ್‌ ಸಂಸ್ಥೆಯು ಭೂಮಿ ಸ್ವಾಧೀನಪಡಿಸಿಕೊಂಡ ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು. 2013ರಲ್ಲಿ ಕೆಐಎಡಿಬಿ ನಿಗದಿಪಡಿಸಿದ ದರದಲ್ಲಿ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಸುಪ್ರೀಂಕೋರ್ಚ್‌ಗೆ ಮನವಿ ಮಾಡಿ ರೈತರಿಗೆ ಭೂಮಿ ವಾಪಸ್‌ ಕೊಡಿಸಲು ಕ್ರಮ ಜರುಗಿಸಲಾಗುವುದು. ಈ ಸಂಬಂಧ ಸಂಪುಟ ಉಪ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನೈಸ್‌ ರೋಡ್‌ ಮಾದರಿ ಎಂಟ್ರಿ, ಎಗ್ಸಿಟ್‌ ರಸ್ತೆ ನಿರ್ಮಾಣ: ಸಂಸದ ಪ್ರತಾಪ್‌ ಸಿಂಹ

26 ವರ್ಷದ ಹಿಂದೆ ಟೌನ್‌ಶಿಪ್‌ಗೆ 1,906 ಎಕರೆ ಜಾಗವನ್ನು ವಶಪಡಿಸಿಕೊಳ್ಳಲಾಗಿತ್ತು. ಇದಕ್ಕೆ ಭೂ ಪರಿಹಾರ ಇನ್ನೂ ಇತ್ಯರ್ಥವಾಗಿಲ್ಲ. 2013ರಲ್ಲಿ ಕೆಐಎಡಿಬಿ ಹೊಸ ದರ ಅಂತಿಮಗೊಳಿಸಿದ್ದು, ಅದರಂತೆ ನೈಸ್‌ ಸಂಸ್ಥೆ ಪರಿಹಾರ ನೀಡಬೇಕು. ನಗರ ಪ್ರದೇಶದಲ್ಲಿ 1:2 ಮತ್ತು ಗ್ರಾಮಾಂತರ ಭಾಗದಲ್ಲಿ 1:4ರಂತೆ ಪರಿಹಾರ ನೀಡಬೇಕು ಎಂಬ ತೀರ್ಮಾನವಾಗಿದೆ. ಒಂದು ಎಕರೆಗೆ ಮೂರು ಕೋಟಿ ರು.ಗಿಂತ ಅಧಿಕ ಪರಿಹಾರವನ್ನು ಕೆಐಎಡಿಬಿ ನಿಗದಿ ಮಾಡಿಸಿದೆ. ಆದರೆ, ನೈಸ್‌ ಸಂಸ್ಥೆಯು 41 ಲಕ್ಷ ರು.ಗೆ ಸೀಮಿತಗೊಳಿಸಿದೆ. ಈ ಮೂಲಕ ರೈತರಿಗೆ ಅನ್ಯಾಯ ಮಾಡಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ರೈತರ ಪರವಾಗಿ ನಿಲ್ಲಲು ತೀರ್ಮಾನಿಸಲಾಗಿದೆ ಎಂದರು.
ಸುಮಾರು ವರ್ಷಗಳಿಂದ ರೈತರಿಗೆ ಪರಿಹಾರ ಸಿಗದೆ ಅನ್ಯಾಯವಾಗಿದೆ. ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. 2013ರಲ್ಲಿ ಕೆಐಎಡಿಬಿ ನಿಗದಿಪಡಿಸಿದ ಬೆಲೆ ನೀಡದಿದ್ದರೆ ಸುಪ್ರೀಂಕೋರ್ಚ್‌ಗೆ ಮನವಿ ಮಾಡಿ ಜಮೀನು ವಾಪಸ್‌ ಕೊಡಿಸುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಭೂಸ್ವಾಧೀನವಾದಾಗಿನಿಂದ ಈವರೆಗೆ ಎಷ್ಟುಮೊತ್ತ ರೈತರಿಗೆ ನೀಡಬೇಕು, ಬಡ್ಡಿ ಸಮೇತ ಎಷ್ಟುಪರಿಹಾರ ಒದಗಿಸಬೇಕು ಎಂಬುದನ್ನು ನಿಖರವಾಗಿ ಲೆಕ್ಕ ಹಾಕಿ ಎರಡು ದಿನದಲ್ಲಿ ವರದಿಯನ್ನು ಸಂಪುಟ ಸಭೆಗೆ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನುಡಿದರು.

ಟೋಲ್‌ ಬಗ್ಗೆಯೂ ಸರ್ಕಾರ ಆಕ್ಷೇಪ:

ಇದೇ ವೇಳೆ ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಿರುವ ಪ್ರಕರಣಗಳ ಮೇಲೆ ನಿಗಾವಹಿಸಲು ಸರ್ಕಾರ ವಕೀಲರನ್ನು ನೇಮಕ ಮಾಡಿದೆ. ಟೋಲ್‌ ದರ ಸಂಬಂಧ ನೈಸ್‌ ಸಂಸ್ಥೆಯವರು ಸುಪ್ರೀಂಕೋರ್ಟ್‌ನಲ್ಲಿ ತಡೆ ತಂದಿದ್ದಾರೆ. ತಡೆ ತೆರವು ಸಂಬಂಧ ವಕೀಲರ ಜತೆ ಚರ್ಚಿಸಲಾಗಿದೆ. ಸಂಪೂರ್ಣ ಸಿಮೆಂಟ್‌ ರಸ್ತೆ ಮಾಡಿ ನಂತರ ಟೋಲ್‌ ಸಂಗ್ರಹಿಸಬೇಕಿತ್ತು. ಸುಪ್ರೀಂಕೋರ್ಚ್‌ನಲ್ಲಿ ನೈಸ್‌ ಸಂಸ್ಥೆ ದಾಖಲಿಸಿರುವ ಪ್ರಕರಣಗಳು ಒಂದೊಂದಾಗಿ ವಜಾವಾಗುತ್ತಿವೆ ಎಂದು ಹೇಳಿದರು.

ಏನಿದು ಕೇಸ್‌?

- ಟೌನ್‌ಶಿಪ್‌ಗಾಗಿ 26 ವರ್ಷದ ಹಿಂದೆ 1906 ಎಕೆ ನೈಸ್‌ ಕಂಪನಿ ಸ್ವಾಧೀನಕ್ಕೆ
- ಅದಕ್ಕೆ ನೀಡಬೇಕಾದ ಭೂ ಪರಿಹಾರದ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ
- 1 ಎಕರೆಗೆ 3 ಕೋಟಿ ರು.ಗಿಂತ ಅಧಿಕ ಪರಿಹಾರ ಕೆಐಎಡಿಬಿಯಿಂದ ನಿಗದಿ
- ನೈಸ್‌ 41 ಲಕ್ಷ ರು. ನೀಡುವುದಾಗಿ ಹೇಳಿದೆ. ಆದರೆ ಸರ್ಕಾರ ಮಣಿದಿಲ್ಲ
- ರೈತರ ಪರವಾಗಿ ನಿಲ್ಲಲು ಸಂಪುಟ ಉಪಸಮಿತಿ ಸಭೆಯಲ್ಲಿ ತೀರ್ಮಾನ