ರಾಜ್ಯದಲ್ಲಿ 2.3 ಲಕ್ಷ ಜನಕ್ಕೆ ಲಸಿಕೆ: ದೇಶದಲ್ಲೇ ಗರಿಷ್ಠ| ಲಸಿಕೆ ವಿತರಣೆಯಲ್ಲಿ ಕರ್ನಾಟಕದ ಪಾಲು ಶೇ.11.79| ದೇಶಾದ್ಯಂತ ಇದುವರೆಗೆ 19.5 ಲಕ್ಷ ಮಂದಿಗೆ ಲಸಿಕೆ

ಬೆಂಗಳೂರು(ಜ.26): ಕೊರೋನಾ ಲಸಿಕೆ ಅಭಿಯಾನದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು, 10ನೇ ದಿನವಾದ ಸೋಮವಾರ 43,371 ಮಂದಿಗೆ ಲಸಿಕೆ ಹಾಕಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ಲಸಿಕೆ ಪಡೆದವರ ಸಂಖ್ಯೆ 2,30,119ಕ್ಕೇರಿಕೆಯಾಗಿದೆ. ತನ್ಮೂಲಕ 2 ಲಕ್ಷ ಮಂದಿಗೆ ಲಸಿಕೆ ಹಾಕಿದ ದೇಶದ ಮೊದಲ ರಾಜ್ಯ ಎಂಬ ಹಿರಿಮೆಗೆ ಕರ್ನಾಟಕ ಪಾತ್ರವಾಗಿದೆ.

ರಾಜ್ಯದಲ್ಲಿ ಸೋಮವಾರ 85,422 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದ ಆರೋಗ್ಯ ಇಲಾಖೆ 43,371 ಮಂದಿಗೆ ಲಸಿಕೆ ನೀಡಿದೆ. ಮೊದಲ ದಿನದಿಂದ ಈವರೆಗೆ 5,215 ಲಸಿಕೆ ವಿತರಣೆ ಸೆಷನ್‌ ನಡೆದಿದ್ದು, ಇದರಲ್ಲಿ ಸೋಮವಾರದವರೆಗೆ 4,20,274 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಶೇ.54.75 ರಷ್ಟುಸಾಧನೆಯೊಂದಿಗೆ 2.30 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ.

ದೇಶದಲ್ಲಿ ರಾಜ್ಯದ ಪಾಲು 11.79%:

ಸೋಮವಾರದವರೆಗೆ 19,50,183 ಮಂದಿಗೆ ದೇಶಾದ್ಯಂತ ಲಸಿಕೆ ಹಾಕಲಾಗಿದೆ. ಈ ಪೈಕಿ ಕರ್ನಾಟಕ 2,30,119 ಮಂದಿಗೆ ಲಸಿಕೆ ಹಾಕುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿ ಕ್ರಮವಾಗಿ ಒಡಿಶಾ (1,77,090) ಆಂಧ್ರಪ್ರದೇಶ (1,55,453) ಇವೆ. ದೇಶದಲ್ಲಿ ಈವರೆಗೆ ಲಸಿಕೆ ಪಡೆದಿರುವವರ ಸಂಖ್ಯೆಯಲ್ಲಿ ಕರ್ನಾಟಕದವರೇ ಶೇ.11.79ರಷ್ಟಿದ್ದಾರೆ. ಉಳಿದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇರಿ ಶೇ.88.21 ರಷ್ಟುಮಂದಿಗೆ ಲಸಿಕೆ ಹಾಕಲಾಗಿದೆ.

ಟಾಪ್‌ 3 ರಾಜ್ಯ: ರಾಜ್ಯ ಲಸಿಕೆ ಪಡೆದವರು

ಕರ್ನಾಟಕ 2,30,119

ಒಡಿಶಾ 1,77,090

ಆಂಧ್ರಪ್ರದೇಶ 1,55,453