ರಾಜ್ಯದಲ್ಲಿ ಹೊಸದಾಗಿ ಇನ್ನೂ 184 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರು (ಮೇ.25): ರಾಜ್ಯದಲ್ಲಿ ಹೊಸದಾಗಿ ಇನ್ನೂ 184 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದ ಹಿನಕಲ್‌ನಲ್ಲಿ 9 ಇಂದಿರಾ ಕ್ಯಾಂಟೀನ್‌ಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಮೊದಲ ಬಾರಿ ಮುಖ್ಯಮಂತ್ರಿಯಾಗಿ ಇಂದಿರಾ ಕ್ಯಾಂಟೀನ್‌ಗಳನ್ನು ಬಡವರು, ಕೂಲಿ ಕಾರ್ಮಿಕರು, ಆಸ್ಪತ್ರೆಗಳಿಗೆ ಬರುವ ಜನರ ಹಸಿವನ್ನು ಕಡಿಮೆ ದರದಲ್ಲಿ ನೀಗಿಸುವ ಉದ್ದೇಶದಿಂದ ಆರಂಭಿಸಿದೆ ಎಂದರು.

2017ರಲ್ಲಿ ರಾಹುಲ್ ಗಾಂಧಿಯವರನ್ನು ಕರೆಸಿ ಇಂದಿರಾ ಕ್ಯಾಂಟೀನ್ ಆರಂಭಿಸಿದೆವು. ಆದರೆ ನಂತರ ಅವಧಿಯಲ್ಲಿ ಬಡವರ ಕ್ಯಾಂಟೀನ್‌ಗಳು ಸೊರಗಿದವು. ಈಗ ನಾವೇ ಮತ್ತೆ ಅಧಿಕಾರಕ್ಕೆ ಬಂದು ಹಿನಕಲ್‌ನಲ್ಲೇ ಇಂದಿರಾ ಕ್ಯಾಂಟೀನ್‌ಗಳನ್ನು ಉದ್ಘಾಟಿಸಿದ್ದು, ಹೊಸದಾಗಿ 184 ಕ್ಯಾಂಟೀನ್‌ಗಳನ್ನು ಆರಂಭಿಸುತ್ತಿದ್ದೇವೆ ಎಂದು ಅವರು ಹೇಳಿದರು.

‘ರಾಜಕೀಯವಾಗಿ ಶಕ್ತಿ ಕೊಟ್ಟ ಹಿನಕಲ್‌ ಪೂರ್ಣ ಅಭಿವೃದ್ಧಿ’: ಹಿನಕಲ್ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಗ್ರಾಮ. ಹಂತ ಹಂತವಾಗಿ ಹಿನಕಲ್ ಸಂಪೂರ್ಣ ಅಭಿವೃದ್ಧಿಗೆ ನಾನು ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಹಿನಕಲ್ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಗ್ರಾಮ. ಈ ಗ್ರಾಮದ ಅಭಿವೃದ್ಧಿಗೆ ಅಗತ್ಯ ಇರುವ ಎಲ್ಲವನ್ನೂ ಹಂತ ಹಂತವಾಗಿ ಮಾಡಲಾಗುವುದು.

ಎಂಜಿನಿಯರ್‌ಗಳ ನೇಮಕಾತಿ, ಪಿಯುಸಿ ಕಾಲೇಜು ಸೇರಿ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನೂ ನೆರವೇರಿಸಲಾಗುವುದು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಕೆ. ಹರೀಶ್ ಗೌಡ, ಡಿ. ರವಿಶಂಕರ್, ಡಾ. ಯತೀಂದ್ರ ಸಿದ್ದರಾಮಯ್ಯ, ಡಾ.ಡಿ. ತಿಮ್ಮಯ್ಯ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್ ಮೊದಲಾದವರು ಇದ್ದರು.