ಬೆಂಗಳೂರು ಜಿಲ್ಲೆಯಲ್ಲಿ 18,048 ಪಡಿತರ ಕಾರ್ಡ್ ರದ್ದು

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಐದು ತಾಲೂಕುಗಳಲ್ಲಿ ಅನರ್ಹತೆ ಆಧಾರದ ಮೇಲೆ 18,048 ಪಡಿತರ ಕಾರ್ಡ್‌ಗಳನ್ನು (ಆದ್ಯತಾ ಕುಟುಂಬ ಕಾರ್ಡ್) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರದ್ದುಪಡಿಸಿದೆ. 

18048 Ration Cards Canceled in Bengaluru District gvd

ಬೆಂಗಳೂರು (ನ.06): ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಐದು ತಾಲೂಕುಗಳಲ್ಲಿ ಅನರ್ಹತೆ ಆಧಾರದ ಮೇಲೆ 18,048 ಪಡಿತರ ಕಾರ್ಡ್‌ಗಳನ್ನು (ಆದ್ಯತಾ ಕುಟುಂಬ ಕಾರ್ಡ್) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರದ್ದುಪಡಿಸಿದೆ. ಇದರಲ್ಲಿ ಆದಾಯ ತೆರಿಗೆ ಪಾವತಿದಾರರು ಎಂಬ ಕಾರಣಕ್ಕಾಗಿ 12,193 ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಸರ್ಕಾರಿ/ ಅರೆ ಸರ್ಕಾರಿ ನೌಕರರ 228 ಕಾರ್ಡ್ ಹಾಗೂ ಮೃತಪಟ್ಟಿರುವ ವ್ಯಕ್ತಿಗಳ ಹೆಸರಿನಲ್ಲಿ 5,447 ಕಾರ್ಡ್‌ಗಳನ್ನು ಕಳೆದ ತಿಂಗಳು ರದ್ದುಪಡಿಸಲಾಗಿದೆ.

ಕಾರ್ಡ್ ರದ್ದಾಗಿರುವವರಲ್ಲಿ ಅನೇಕರು ಬ್ಯಾಂಕ್ ಸಾಲ ಪಡೆಯುವ ಉದ್ದೇಶದಿಂದ ಐಟಿ ರಿಟರ್ನ್ ಸಲ್ಲಿಕೆ ಮಾಡಿದವರಿದ್ದಾರೆ. ಕಾರು ಖರೀದಿ, ಮನೆ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯ ಪಡೆಯಲು ಐಟಿ ರಿಟರ್ನ್ ಸಲ್ಲಿಕೆ ಮಾಡುವುದನ್ನು ಅನೇಕ ಬ್ಯಾಂಕ್‌ಗಳು ಕಡ್ಡಾಯಗೊಳಿಸಿವೆ. ಈ ರೀತಿಯ ಸಾಲಕ್ಕಾಗಿ ಅನೇಕರು ಐಟಿ ರಿಟರ್ನ್ ಸಲ್ಲಿಕೆ ಮಾಡಿದ್ದಾರೆ. ಈ ಮಾಹಿತಿ ಮತ್ತು ಇನ್ನಿತರ ಐಟಿ ಪಾವತಿದಾರರು ಸೇರಿ ಒಟ್ಟು 12,193 ಕಾರ್ಡ್‌ಗಳು ರದ್ದಾಗಿವೆ ಎಂದು ಇಲಾಖೆಯ ಅಧಿಕಾರಿ ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಕುರಿತಾದ ಎಚ್‌ಆರ್‌ಎಂಎಸ್ ಮಾಹಿತಿ ಆಧಾರಿಸಿ ರೇಷನ್‌ ಕಾರ್ಡ್ ಹೊಂದಿದ್ದ ಸರ್ಕಾರಿ ನೌಕರರು ಮತ್ತು ನಮ್ಮ ಇಲಾಖೆಗೆ ಲಭ್ಯವಾದ ಮಾಹಿತಿ ಆಧರಿಸಿ ಮೃತರ ಹೆಸರಿನಲ್ಲಿದ್ದ 5,447 ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಆನೇಕಲ್, ಬೆಂಗಳೂರು ಪೂರ್ವ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಯಲಹಂಕ ವ್ಯಾಪ್ತಿಯಲ್ಲಿ 18,048 ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 5 ಲಕ್ಷಕ್ಕೂ ಅಧಿಕ ಕಾರ್ಡ್‌ಗಳು ಚಾಲ್ತಿಯಲ್ಲಿದ್ದು, 20 ಲಕ್ಷಕ್ಕೂ ಅಧಿಕ ಫಲಾನುಭವಿಗಳಿದ್ದಾರೆ. 

ಸಚಿವ ತಿಮ್ಮಾಪುರ ರಾಜೀನಾಮೆಗೆ ನ.20ಕ್ಕೆ ಮದ್ಯ ಮಾರಾಟ ಬಂದ್‌

ಸಕಾರಣವಿಲ್ಲದೇ ಕಾರ್ಡ್ ರದ್ದಾಗಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಮೀಪದ ಆಹಾರ ಮತ್ತು ನಾಗರಿಕ ಸರಬರಾಜು ಕಚೇರಿಗೆ ಭೇಟಿ ನೀಡಿ ಕಾರ್ಡ್‌ಗಳನ್ನು ಹೊಸದಾಗಿ ಪಡೆಯಲು ಅರ್ಜಿ ಸಲ್ಲಿಸಬಹುದು.
-ಶಾಂತಗೌಡ ಗುಣಕಿ, ಉಪ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೆಂಗಳೂರು ನಗರ ಜಿಲ್ಲೆ.

Latest Videos
Follow Us:
Download App:
  • android
  • ios