ಈಶಾ ಪ್ರತಿಷ್ಠಾನ ನಡೆಸುತ್ತಿರುವ ‘ಕಾವೇರಿ ಕೂಗು’ ಗ್ರಾಮ ಸಂಪರ್ಕ ಅಭಿಯಾನ ಎರಡು ತಿಂಗಳಲ್ಲಿ ಕಾವೇರಿ ಕೊಳ್ಳದ ಜಿಲ್ಲೆಗಳ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ 1,800 ಪ್ರಚಾರ ಕಾರ್ಯಕ್ರಮ

 ಬೆಂಗಳೂರು (ಆ.10): ಈಶಾ ಪ್ರತಿಷ್ಠಾನ ನಡೆಸುತ್ತಿರುವ ‘ಕಾವೇರಿ ಕೂಗು’ ಗ್ರಾಮ ಸಂಪರ್ಕ ಅಭಿಯಾನದ ಅಡಿಯಲ್ಲಿ ಮುಂದಿನ ಎರಡು ತಿಂಗಳಲ್ಲಿ ಕಾವೇರಿ ಕೊಳ್ಳದ ಜಿಲ್ಲೆಗಳ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ 1,800 ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಸ್ವಯಂಸೇವಕ ಸ್ವಾಮಿ ತವಿಸಾ ತಿಳಿಸಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪರಿಷತ್‌ ಸಿಇಒಗಳ ಸಹಾಯದೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ (ಆರ್‌ಡಿಪಿಆರ್‌), ಅರಣ್ಯ, ತೋಟಗಾರಿಕೆ ಮತ್ತು ರೇಷ್ಮೆ ಕೃಷಿ ಇಲಾಖೆಗಳ ಸಹಯೋಗದಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದ್ದಾರೆ.

ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಅರಣ್ಯ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಸಹ ಯೋಗದಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನಡೆಯುವ ಅಭಿಯಾನ 9 ಜಿಲ್ಲೆಗಳ 57 ತಾಲೂಕುಗಳಲ್ಲಿ ನಡೆಯಲಿದೆ. 24 ಲಕ್ಷಕ್ಕೂ ಅಧಿಕ ರೈತರನ್ನು ತಲುಪಲಿದೆ. ತರಬೇತಿ ಪಡೆದಿರುವ ನೂರಾರು ಕಾವೇರಿ ಕೂಗಿನ ಸ್ವಯಂ ಸೇವಕರು ಗ್ರಾಮಗಳ ಸಂಪರ್ಕ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕಾವೇರಿ ಕೂಗು ಭಾಗ 2ರಲ್ಲಿ 3.5 ಕೋಟಿ ಸಸಿ ನೆಡುವ ಗುರಿ

ಈಗಾಗಲೇ ಗ್ರಾಮ ಪಂಚಾತ್‌ ಮಟ್ಟದಲ್ಲಿ 890 ಮರ ಮಿತ್ರರನ್ನು ನೇಮಿಸಲಾಗಿದೆ. ರೈತರು ಸ್ಟೇಟ್‌ ಆಫ್‌ ದ ಆರ್ಟ್‌ ಮೊಬೈಲ್‌ ಆ್ಯಪ್‌ನ ಮೂಲಕ ಸಸಿ ನೆಡುವ ಕುರಿತಂತೆ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ. ಮರ ಬೇಸಾಯದ ಬಗ್ಗೆ ಹೆಚ್ಚಿನ ಮಾಹಿತಿಯು ಕೂಡ ಇದರಲ್ಲಿ ದೊರೆಯಲಿದೆ. ಹಾಗೆಯೇ ಸಸಿನೆಟ್ಟಬಗ್ಗೆ ಸಮೀಕ್ಷೆಯನ್ನು ಕೂಡ ನಡೆಸಲಾಗುವುದು ಎಂದರು.

ಗ್ರಾಮ ಸಂಪರ್ಕ ಅಭಿಯಾನದಡಿ 5 ಕೋಟಿ ಸಸಿಗಳನ್ನು ನಡುವ ಗುರಿ ಹೊಂದಲಾಗಿದೆ. ಈ ಸಂಬಂಧ ಈಗಾಗಲೇ 151ಗ್ರಾಮ ಪಂಚಾಯ್ತಿಗಳಲ್ಲಿ ಸಭೆ ನಡೆಸಲಾಗಿದೆ. ಮರ ಮಿತ್ರ ಸ್ವಯಂ ಸೇವಕರು ಗ್ರಾಮಾಂತರ ಪ್ರದೇಶಗಳಲ್ಲಿ ರೈತರಿಗೆ ಸಹಾಯ ಮಾಡಲಿದ್ದಾರೆ. ಖಾಸಗಿ ಕೃಷಿ ಭೂಮಿಯಲ್ಲಿ ಮರ ಬೇಸಾಯ ಆಧಾರಿತ ಕೃಷಿ ಪದ್ಧತಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

ಮರ ಬೇಸಾಯ ಪದ್ಧತಿ ಮೂಲಕ ರೈತರು ತಮ್ಮ ಆದಾಯವನ್ನು ಮತ್ತಷ್ಟುದ್ವಿಗುಣ ಗೊಳಿಸಿ ಕೊಳ್ಳಬಹುದಾಗಿದೆ. ಹಾಗೆಯೇ ಮಣ್ಣಿನ ಫಲವತ್ತತೆ ಕೂಡ ಹೆಚ್ಚಾಗಲಿದೆ. ಸರ್ಕಾರ ಕೂಡ ಸಸಿ ನಡುವಿಕೆಯನ್ನು ಪ್ರೋತ್ಸಾಹಿಸಲಿದೆ. 2022ರ ವೇಳೆಗೆ ಈ ಅಭಿಯಾನದಡಿ ಮತ್ತಷ್ಟುಸಾಧನೆ ಮಾಡಲಾಗುವುದು ಎಂದು ಹೇಳಿದರು. ಈಶಾ ಫೌಂಡೇಶನನ ಯೋಜನಾ ನಿರ್ದೇಶಕ ಅಂಬರೀಶ್‌, ಪ್ರವೀಣಾ ಶ್ರೀಧರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.