ಬೆಂಗಳೂರು(ಆ.02):ನಗರದಲ್ಲಿ ಕೊರೋನಾ ಸೋಂಕಿತರ ಹೋಂ ಐಸೋಲೇಷನ್‌ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಆರೈಕೆ ಕೇಂದ್ರದಲ್ಲಿ ಸೋಂಕಿತರ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ. ಇನ್ನು ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ(ಬಿಐಇಸಿ)ದಲ್ಲಿ 1,500 ಸೋಂಕಿತರ ಆರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಕೇವಲ 171 ಸೋಂಕಿತರನ್ನು ದಾಖಲಿಸಲಾಗಿದೆ.

"

ರಾಜ್ಯ ಸರ್ಕಾರ ಕೊರೋನಾ ಸೋಂಕಿನ ಲಕ್ಷಣ ಇಲ್ಲದವರಿಗೆ ಮತ್ತು ಮಧ್ಯಮ ಸೋಂಕಿತರು ಮನೆಯಲ್ಲಿಯೇ ಪ್ರತ್ಯೇಕವಾಗಿ ಇದ್ದು ಆರೈಕೆ ಮಾಡಿಕೊಳ್ಳಬಹುದು ಎಂದು ಆದೇಶ ಮಾಡಿತ್ತು. ಸ್ಲಂ, ಮನೆಯಲ್ಲಿ ಪತ್ಯೇಕ ಕೊಠಡಿ, ಶೌಚಾಲಯ ವ್ಯವಸ್ಥೆ ಇಲ್ಲದ ಸೋಂಕಿತರನ್ನು ಮಾತ್ರ ಆರೈಕೆ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿದೆ. ಹೀಗಾಗಿ, ಆರೈಕೆ ಕೇಂದ್ರಕ್ಕೆ ಹೋಗಿ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ. ಜುಲೈ ನಿಂದ ಈವರೆಗೆ ಒಟ್ಟು 18,661 ಸೋಂಕಿನಿಂದ ಹೋಂ ಐಸೋಲೇಷನ್‌ಗೆ ಒಳಗಾಗಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊನೆಗೂ BIEC ಕೋವಿಡ್‌ ಸೆಂಟರ್‌ಗೆ ಸಿಕ್ತು ಉದ್ಘಾಟನಾ ಭಾಗ್ಯ; ಸೋಂಕಿತರಿಗೆ 1100 ಬೆಡ್‌ಗಳು ಲಭ್ಯ

ಇನ್ನು ಕಳೆದ ಸೋಮವಾರ ಬಿಐಇಸಿ ಆರೈಕೆ ಕೇಂದ್ರದಲ್ಲಿ 1,500 ಹಾಸಿಗೆಗಳನ್ನು ಸೋಂಕಿತರ ಆರೈಕೆಗೆ ಮುಕ್ತಗೊಳಿಸಲಾಗಿದೆ. ಅದರಲ್ಲಿ ಕೇವಲ 171 ಮಂದಿಗೆ ಮಾತ್ರ ಆರೈಕೆ ನೀಡಲಾಗುತ್ತಿದೆ. ಇನ್ನೂ 1,329 ಹಾಸಿಗೆ ಖಾಲಿಯಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ಖಾಸಗಿ ಆಸ್ಪತ್ರೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು, ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ಗಳು ಸಹ ಕೊರೋನಾ ಸೋಂಕಿತರಿಗಾಗಿ ಆರೈಕೆ ಕೇಂದ್ರಗಳನ್ನು ಆರಂಭಿಸಿದ್ದಾರೆ. ಹೀಗಾಗಿ, ಬಿಬಿಎಂಪಿ ಆರೈಕೆ ಕೇಂದ್ರಗಳಿಗೆ ದಾಖಲಾಗುವವರ ಸಂಖ್ಯೆ ಇಳಿಮುಖವಾಗಿದೆ.

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಸೋಂಕಿತರಿಗೆ ಕಡ್ಡಾಯ ಹೋಂ ಐಸೋಲೇಷನ್‌ ಆಗಿ ಎಂದು ಯಾರಿಗೂ ಹೇಳಿಲ್ಲ. ಯಾರಿಗೆ ಮನೆಯಲ್ಲೇ ಹೋಂ ಐಸೋಲೇಷನ್‌ ಆಗಲು ಸಾಧ್ಯವಿದ್ದು, ಅವರು ಪ್ರತ್ಯೇಕವಾಗಿರಲು ಎಲ್ಲ ಅವಕಾಶವಿದೆಯೋ ಅವರಿಗೆ ಮಾತ್ರ ಹೋಂ ಐಸೋಲೇಷನ್‌ನಲ್ಲಿ ಇರಲು ಸೂಚಿಸಲಾಗುತ್ತಿದೆ. ಉಳಿದವರನ್ನು ನಗರದ ಕೋವಿಡ್‌ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.