ಬೆಂಗಳೂರು(ಜು.09): ನಗರದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ನಿರ್ವಹಣೆಗೆ ಮುಂದಿನ ಆರು ತಿಂಗಳ ಅವಧಿಗೆ 300 ವೈದ್ಯರು ಸೇರಿ 1700 ಜನ ಆರೋಗ್ಯ ಸಿಬ್ಬಂದಿಯನ್ನು ತಾತ್ಕಾಲಿಕ ಸೇವೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಬಿಬಿಎಂಪಿಗೆ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ.

10 ಸಾವಿರ ಸೋಂಕಿತರ ನಿರ್ವಹಣೆಗೆ ಈ ನೇಮಕಾತಿ ಆದೇಶ ಮಾಡಲಾಗಿದ್ದು, ಪ್ರತಿ ನೂರು ರೋಗಿಗಳ ನಿರ್ವಹಣೆಗೆ ಒಬ್ಬರಂತೆ ಒಟ್ಟು 300 ವೈದ್ಯರು, ಪ್ರತಿ 50 ರೋಗಿಗಳಿಗೆ ಒಬ್ಬರಂತೆ ಒಟ್ಟು 600 ಸಿಬ್ಬಂದಿ, ಪ್ರತಿ ನೂರು ರೋಗಿಗೆ ಒಬ್ಬರಂತೆ 200 ಜನ ಸಹಾಯಕ ಸಿಬ್ಬಂದಿ ಮತ್ತು ಪ್ರತಿ ನೂರು ರೋಗಿಗೆ ಮೂವರ ಲೆಕ್ಕದಲ್ಲಿ 600 ಡಿ ಗ್ರೂಪ್‌ ನೌಕರರ ನೇಮಕ ಮಾಡಿಕೊಳ್ಳಲು ನಗರಾಭಿವೃದ್ಧಿ ಇಲಾಖೆಯು ಪಾಲಿಕೆಗೆ ಅನುಮತಿ ನೀಡಿದೆ.

ಕೊರೋನಾ ಕಂಟಕ: ಬೆಂಗಳೂರಲ್ಲಿ ಒಂದೇ ದಿನ 115 ಮಂದಿ ಐಸಿಯುಗೆ ದಾಖಲು

ಈ ನೇಮಕಾತಿಯಲ್ಲಿ ವೈದ್ಯರಿಗೆ ಮಾಸಿಕ 45 ಸಾವಿರ ರು., ಸ್ಟಾಫ್‌ಡ ನರ್ಸ್‌ಗಳಿಗೆ 20 ಸಾವಿರ ರು., ಸಹಾಯಕ ಸಿಬ್ಬಂದಿಗೆ 15 ಸಾವಿರ ರು. ಮತ್ತು ಡಿ ದರ್ಜೆ ಸಿಬ್ಬಂದಿಗೆ 12 ಸಾವಿರ ರು. ಮಾಸಿಕ ವೇತನ ನೀಡಬೇಕು. ಇದಕ್ಕೆ ಒಟ್ಟು 21.42 ಕೋಟಿ ರು. ವೆಚ್ಚವಾಗಲಿದ್ದು ಈ ಮೊತ್ತವನ್ನು ಬಿಬಿಎಂಪಿ ತನ್ನ ಬೊಕ್ಕಸದಿಂದಲೇ ಬರಿಸಬೇಕು ಎಂದು ಷರತ್ತು ವಿಧಿಸಿ 1700 ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ.