ರಾಜ್ಯದಲ್ಲಿ ಮೇ ತಿಂಗಳಲ್ಲಿ 33 ಕೊರೋನಾ ಸೋಂಕು ಪ್ರಕರಣ ದೃಢಪಟ್ಟಿದ್ದು, ಪ್ರಸ್ತುತ 16 ಸಕ್ರಿಯ ಕೊರೋನಾ ಸೋಂಕು ಪ್ರಕರಣ ವರದಿಯಾಗಿವೆ. ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಜತೆಗೆ ತೀವ್ರ ಲಕ್ಷಣಗಳು ಪತ್ತೆಯಾಗಿಲ್ಲ. 

ಬೆಂಗಳೂರು (ಮೇ.22): ರಾಜ್ಯದಲ್ಲಿ ಮೇ ತಿಂಗಳಲ್ಲಿ 33 ಕೊರೋನಾ ಸೋಂಕು ಪ್ರಕರಣ ದೃಢಪಟ್ಟಿದ್ದು, ಪ್ರಸ್ತುತ 16 ಸಕ್ರಿಯ ಕೊರೋನಾ ಸೋಂಕು ಪ್ರಕರಣ ವರದಿಯಾಗಿವೆ. ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಜತೆಗೆ ತೀವ್ರ ಲಕ್ಷಣಗಳು ಪತ್ತೆಯಾಗಿಲ್ಲ. ಹೀಗಾಗಿ ರೂಪಾಂತರಿ ಆತಂಕ ಬೇಡ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಸಕ್ರಿಯವಾಗಿರುವ 16 ಪ್ರಕರಣಗಳಲ್ಲೂ ಎಲ್ಲರೂ ಮನೆಯಲ್ಲೇ ಸ್ವಯಂ ನಿಗಾದಲ್ಲಿ ಇದ್ದಾರೆ. ಯಾರಿಗೂ ತೀವ್ರ ರೋಗ ಲಕ್ಷಣಗಳು ಇಲ್ಲ. ಯಾರೊಬ್ಬರೂ ಆಸ್ಪತ್ರೆಗೆ ದಾಖಲಾಗಿಲ್ಲ. ಇದು ರೂಪಾಂತರಿ ಸೋಂಕು ಎಂದು ಹೇಳಲು ಯಾವುದೇ ಲಕ್ಷಣಗಳು ಗೋಚರವಾಗಿಲ್ಲ. ಹೀಗಾಗಿ ಅನಗತ್ಯ ಆತಂಕ ಬೇಡ. ಆದರೆ ಮುನ್ನೆಚ್ಚರಿಕಾ ಕ್ರಮಗಳು ಕೈಗೊಳ್ಳುವುದು ಉತ್ತಮ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಾವುದೇ ಭಯ ಬೇಡ-ಸಚಿವ: ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ 16 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಬೇರೆ ಬೇರೆ ದೇಶಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಆದರೆ ನಮ್ಮಲ್ಲಿ ಅಂತಹ ಯಾವುದೇ ಲಕ್ಷಣಗಳು ಪತ್ತೆಯಾಗಿಲ್ಲ. ಹೀಗಾಗಿ ಅನಗತ್ಯವಾಗಿ ಆತಂಕಪಡುವುದು ಬೇಡ ಎಂದು ಹೇಳಿದರು. ಯಾವಾಗ ಪರೀಕ್ಷೆ ನಡೆಸಿದರೂ ಕೊರೋನಾ ಸೋಂಕು ಇದ್ದೇ ಇರುತ್ತದೆ. ಯಾವ ರೋಗ ಲಕ್ಷಣ ಇದ್ದು ಪರೀಕ್ಷೆ ನಡೆಸಿದರೂ ಸೋಂಕು ಪಾಸಿಟಿವ್‌ ಬರುತ್ತದೆ. ಇದನ್ನು ಸೋಂಕಿನ ತೀವ್ರತೆ ಎಂದು ಹೇಳಲು ಆಗುವುದಿಲ್ಲ. ನಮ್ಮಲ್ಲಿ ಅಂತಹ ಯಾವುದೇ ತೊಂದರೆ ಉಂಟಾಗಿಲ್ಲ. ನಾವು ಕೇಂದ್ರ ಸರ್ಕಾರದ ಜತೆ ಸತತ ಸಂಪರ್ಕದಲ್ಲಿದ್ದು, ಅನಗತ್ಯವಾದ ಭೀತಿ ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಮೇ ತಿಂಗಳಲ್ಲಿ ಹೆಚ್ಚಳ: ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣ ತೀವ್ರ ನಿಯಂತ್ರಣದಲ್ಲಿವೆ. ಜನವರಿಯಲ್ಲಿ 3 ಪ್ರಕರಣ, ಫೆಬ್ರವರಿಯಲ್ಲಿ 1, ಮಾರ್ಚ್‌ 3, ಏಪ್ರಿಲ್‌ ತಿಂಗಳಲ್ಲಿ 3 ಪ್ರಕರಣ ಮಾತ್ರ ವರದಿಯಾಗಿದೆ. ಆದರೆ ಮೇ ತಿಂಗಳಲ್ಲಿ 33 ಪ್ರಕರಣ ವರದಿಯಾಗಿದ್ದು, ಪ್ರಸ್ತುತ 16 ಪ್ರಕರಣ ಸಕ್ರಿಯವಾಗಿದೆ. ಈ ತಿಂಗಳಲ್ಲಿ ಹೆಚ್ಚು ಪ್ರಕರಣ ವರದಿಯಾಗಿದೆ ಎಂಬ ಕಾರಣಕ್ಕೆ ಎಚ್ಚರವಹಿಸಬೇಕು ಎಂದು ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಕಳೆದ ಕೊರೋನಾ ಅಲೆಗಳಿಂದ ಎಲ್ಲರಿಗೂ ಕೊರೋನಾ ಕುರಿತು ಜಾಗೃತಿ ಇದೆ. 10 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಸುರಕ್ಷತಾ ಕ್ರಮಗಳ ಬಗ್ಗೆ ಅರಿವಿದೆ. ಹೀಗಾಗಿ ಆತಂಕ ಪಡದೆ ಎಚ್ಚರವಹಿಸಬೇಕು ಎಂದು ಸಂಯೋಜಿತ ಕಾಯಿಲೆಗಳ ನಿಗಾ ಯೋಜನೆ ನಿರ್ದೇಶಕ ಡಾ.ಅನ್ಸರ್‌ ಅಹಮದ್‌ ಸಲಹೆ ನೀಡಿದರು.

ಆಂಧ್ರಕ್ಕೆ ರಾಜ್ಯದಿಂದ 4 ಕುಮ್ಕಿ ಆನೆ ಹಸ್ತಾಂತರ: ಪವನ್‌ ಕಲ್ಯಾಣ್‌ ಹೇಳಿದ್ದೇನು?

ಆತಂಕ ಬೇಡ ಎಚ್ಚರವಿರಲಿ: ಏಷ್ಯಾದ ಕೆಲ ಭಾಗಗಳಲ್ಲಿ, ವಿಶೇಷವಾಗಿ ಸಿಂಗಾಪುರ ಮತ್ತು ಹಾಂಗ್‌ಕಾಂಗ್‌ನಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು ಪ್ರಕರಣಗಳಿಂದ ರಾಜ್ಯದಲ್ಲೂ ಆತಂಕ ಸೃಷ್ಟಿಯಾಗಿದೆ. ಆದರೆ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಭಾರತದಾದ್ಯಂತ ಮೇ19 ರ ವೇಳೆಗೆ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 257 ಇದೆ. ಇವುಗಳಲ್ಲಿ ಹೆಚ್ಚಿನವು ಸೌಮ್ಯವಾಗಿದ್ದು, ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಹೀಗಾಗಿ ಆತಂಕ ಬೇಡ ಎಚ್ಚರವಿರಲಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯಾದ್ಯಂತ ಆಸ್ಪತ್ರೆಗಳು ಇನ್‌ಫ್ಲ್ಯುಯೆಂಜಾ ಮಾದರಿಯ ಅನಾರೋಗ್ಯ ಮತ್ತು ತೀವ್ರವಾದ ಉಸಿರಾಟದ ಸೋಂಕುಗಳ ಪ್ರಕರಣಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂ (IDSP) ಮತ್ತು ICMR ಮಾರ್ಗಸೂಚಿ ಪ್ರಕಾರ ಎಂದಿನಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.