ಬೆಂಗಳೂರು(ಆ.05): ಮಂಗಳವಾರ ನಗರದಲ್ಲಿ ಹೊಸದಾಗಿ ಪತ್ತೆಯಾದ ಕೊರೋನಾ ಸೋಂಕಿತರಿಗಿಂತ ದುಪ್ಪಟ್ಟು ಹಾಗೂ ದಾಖಲೆಯ ಸಂಖ್ಯೆಯಲ್ಲಿ 4,274 ಸೋಂಕಿತರು ಗುಣಮುಖರಾಗಿದ್ದಾರೆ. 2,035 ಹೊಸ ಸೋಂಕಿತರು ಪತ್ತೆಯಾದರೆ, 4,274 ಮಂದಿ ಗುಣಮುಖರಾಗಿ ಆಸ್ಪತ್ರೆ ಮತ್ತು ಆರೈಕೆ ಕೇಂದ್ರದಿಂದ ಬಿಡುಗಡೆ ಹೊಂದಿದ್ದಾರೆ. ಸೋಮವಾರ 2,693 ಮಂದಿ ಗುಣಮುಖರಾಗಿ ಬಿಡುಗಡೆ ಆಗಿದ್ದು ದಾಖಲೆ ಆಗಿತ್ತು.

ವಾರದಲ್ಲಿ 15 ಸಾವಿರ ಮಂದಿ ಗುಣ:

ಕಳೆದ ಎರಡು ವಾರದಿಂದ ಬೆಂಗಳೂರಿನಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವವ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಕೇವಲ ಒಂದು ವಾರದಲ್ಲಿ 15,124 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಗುಣಮುಖರಾದವರ ಸಂಖ್ಯೆ 27,877ಕ್ಕೆ ಏರಿಕೆಯಾಗಿದೆ.

ಕೊರೋನಾ ಸಾವಿನ ನಿಖರ ಕಾರಣ ತಿಳಿಯಲು ಸಮಿತಿ ರಚನೆ: ಡಿಸಿಎಂ ಅಶ್ವತ್ಥನಾರಾಯಣ

ಮಂಗಳವಾರ ಹೊಸದಾಗಿ ಪತ್ತೆಯಾದ 2,035 ಸೋಂಕಿತರ ಪೈಕಿ 1,251 ಮಂದಿ ಪುರುಷರು, 778 ಮಹಿಳೆಯರಾಗಿದ್ದಾರೆ. ಈವರೆಗೆ ನಗರದಲ್ಲಿ ಸೋಂಕಿತಗೊಂಡವರ ಸಂಖ್ಯೆ 63,033ಕ್ಕೆ ಏರಿಕೆಯಾಗಿದ್ದು, 34,021 ಸಕ್ರಿಯ ಪ್ರಕರಣಗಳಿವೆ, 322 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

6 ಮಂದಿ ಲೈಂಗಿಕ ಅಲ್ಪಸಂಖ್ಯಾತರಿಗೆ ಸೋಂಕು:

ಮಂಗಳವಾರ ಆರು ಮಂದಿ ಲೈಂಗಿಕ ಅಲ್ಪಸಂಖ್ಯಾತರಲ್ಲಿ ಸೋಂಕು ದೃಢಪಡುವುದರೊಂದಿಗೆ ಒಟ್ಟು 11 ಮಂದಿ ಲೈಂಗಿಕ ಅಲ್ಪ ಸಂಖ್ಯಾತರಿಗೆ ಸೋಂಕು ತಗುಲಿದಂತಾಗಿದೆ. ಈ ಪೈಕಿ ಈಗಾಗಲೇ ಇಬ್ಬರು ಗುಣಮುಖರಾಗಿದ್ದು 9 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

30 ಮಂದಿ ಬಲಿ:

ನಗರದಲ್ಲಿ ಮಂಗಳವಾರ ಒಟ್ಟು 30 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ 22 ಪುರುಷರು, 8 ಮಂದಿ ಮಹಿಳೆಯರಾಗಿದ್ದಾರೆ. ಒಟ್ಟು 1,134 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ.

ದಕ್ಷಿಣ ವಲಯ ಅಗ್ರಸ್ಥಾನ

ಕಳೆದ 24 ಗಂಟೆಯಲ್ಲಿ ಪತ್ತೆಯಾದ ಸೋಂಕಿತರ ಪೈಕಿ ದಕ್ಷಿಣ ವಲಯ ಅಗ್ರಸ್ಥಾನ ಕಾಯ್ದುಕೊಂಡಿದೆ. ಒಟ್ಟು ಸೋಂಕಿತರ ಪೈಕಿ ಶೇ.28ರಷ್ಟು ದಕ್ಷಿಣ ವಲಯದಲ್ಲಿ ಪತ್ತೆಯಾಗಿವೆ. ಪೂರ್ವ ವಲಯ ಶೇ.17, ಪಶ್ಚಿಮ ವಲಯ ಶೇ.15, ಆರ್‌.ಆರ್‌.ನಗರ ಶೇ.10, ಮಹದೇವಪುರ ಮತ್ತು ಬೊಮ್ಮನಹಳ್ಳಿ ತಲಾ ಶೇ.9, ದಾಸರಹಳ್ಳಿ ಶೇ.7 ಹಾಗೂ ಯಲಹಂಕ ವಲಯದಲ್ಲಿ ಶೇ.5 ರಷ್ಟು ಸೋಂಕು ಪ್ರಕರಣ ಪತ್ತೆಯಾಗಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.