ಬೆಂಗಳೂರು(ಡಿ.29): ರಾಜ್ಯದಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ 1,500 ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಸೋಮವಾರ ಮಾಗಡಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೂತನ ಕಟ್ಟಡ ‘ಆರೋಗ್ಯಸೌಧ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂದಾಜು 238 ಕೋಟಿ ರು.ಗಳ ವೆಚ್ಚದಲ್ಲಿ ಎರಡು ಹಂತದಲ್ಲಿ ಆರೋಗ್ಯಸೌಧ ಕಟ್ಟಡ ನಿರ್ಮಾಣವಾಗಿದೆ. ಆರೋಗ್ಯ ಇಲಾಖೆಯ 53 ಕಚೇರಿಗಳು ಒಂದೇ ಕಡೆ ಕಾರ್ಯನಿರ್ವಹಿಸುವುದರಿಂದ ಆಡಳಿತ ಸುಗಮವಾಗಲಿದೆ ಎಂದರು.

 

ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಸುಸಜ್ಜಿತ ಕಟ್ಟಡ, ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಹಾಗೆಯೇ ಅಗತ್ಯ ವೈದ್ಯ, ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು. ಆರೋಗ್ಯ ಕೇಂದ್ರಕ್ಕೆ ಆಗಮಿಸುವ ರೋಗಿಗಳನ್ನು ತಮ್ಮ ಮನೆ ಮಕ್ಕಳಂತೆ ಭಾವಿಸಿ ಶುಶ್ರೂಷೆ ನೀಡಬೇಕೆಂದು ಕೈ ಮುಗಿದು ವಿನಂತಿಸಿಕೊಳ್ಳುತ್ತೇನೆ. ಆಗ ಮಾತ್ರ ಕಟ್ಟಡ ನಿರ್ಮಿಸಿದ್ದಕ್ಕೂ ಅರ್ಥ ಸಿಗುತ್ತದೆ. ಹಾಗೆಯೇ ಎಂಬಿಬಿಎಎಸ್‌ ಪದವಿ ಪಡೆದ ವೈದ್ಯರು ಒಂದು ವರ್ಷವಾದರೂ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಯುವ ವೈದ್ಯರು ಗಮನ ಹರಿಸಬೇಕು ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಆರೋಗ್ಯ ಸೌಧದಿಂದ ಸುಗಮವಾಗಿ ಆರೋಗ್ಯ ಇಲಾಖೆ ಆಡಳಿತ ನಡೆಸಲು ಮತ್ತು ಜನರಿಗೆ ಸಹಕಾರಿಯಾಗಲಿದೆ. 53 ವಿಭಾಗಗಳ 1,500 ಜನರು ಒಂದೇ ಕಡೆ ಕೆಲಸ ಮಾಡಲು ಅನುಕೂಲಕರವಾಗಿದೆ ಎಂದು ತಿಳಿಸಿದರು.

 

ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮಾತನಾಡಿ, ಆರ್ಥಿಕ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆರೋಗ್ಯ ಕ್ಷೇತ್ರಕ್ಕೆ ಚೈತನ್ಯ ತುಂಬುವ ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರ ನಾಲ್ಕು ಹೊಸ ವೈದ್ಯಕೀಯ ಕಾಲೇಜುಗಳಿಗೆ ಮಂಜೂರಾತಿ ನೀಡಿದ್ದು, ಈ ಪೈಕಿ ಮೂರು ಕಾಲೇಜುಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ರಾಜ್ಯದಲ್ಲಿ 18 ವೈದ್ಯಕೀಯ ಕಾಲೇಜುಗಳಿವೆ. ಆದರೆ 9 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಇರಲಿಲ್ಲ. ಅಂತಹ ಕಡೆಗಳಲ್ಲಿ ಪಿಪಿಪಿ ಮಾದರಿ ಅಥವಾ ಬೇರೆ ಮಾದರಿಯಲ್ಲಿ ಹೊಸ ಕಾಲೇಜು ನಿರ್ಮಿಸುವ ಗುರಿ ಹೊಂದಲಾಗಿದೆ. ಅದಕ್ಕೆ ಹೊಂದಿಕೊಂಡಂತೆ ಜಿಲ್ಲಾಸ್ಪತ್ರೆ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಕೂಡ ನಿರ್ಮಿಸಲಾಗುವುದು ಎಂದರು.

ಆರೋಗ್ಯ ಇಲಾಖೆಯ 53 ಕಚೇರಿಗಳು ಒಂದೇ ಕಡೆ ಕಾರ್ಯನಿರ್ವಹಿಸಲಿವೆ. ಕಟ್ಟಡದಲ್ಲಿ ಆಯುಕ್ತಾಲಯ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಎಲ್ಲವೂ ಆರೋಗ್ಯಸೌಧ ಕಟ್ಟಡದಲ್ಲಿ ಇರಲಿದ್ದು ಒಂದೇ ಸೂರಿನಡಿ ಕೆಲಸ ಮಾಡಲಿವೆ. ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಉಚಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಕ್ತರ್‌, ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ಕುಮಾರ್‌ ಪಾಂಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.