ಬೆಂಗಳೂರು :  ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಶುಲ್ಕವನ್ನು ಶೇ.15ರಷ್ಟುಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. 2019-20ನೇ ಸಾಲಿನಿಂದ ಸರ್ಕಾರಿ ಮತ್ತು ಖಾಸಗಿ ಕೋಟಾ ಎರಡಕ್ಕೂ ನೂತನ ಶುಲ್ಕ ಅನ್ವಯವಾಗಲಿದೆ ಎಂದು ಕಾಮೆ​ಡ್‌-ಕೆ ಅಧ್ಯಕ್ಷ ಎಂ.ಆರ್‌. ಜಯರಾಂ ತಿಳಿ​ಸಿ​ದ್ದಾರೆ.

ಈ ಕುರಿತು ನಗರದ ಕಾಮೆಡ್‌- ಕೆ ಕಚೇರಿಯಲ್ಲಿ  ಸುದ್ದಿಗೋಷ್ಠಿ ನಡೆ​ಸಿದ ಅವರು, ಈಗಾಗಲೇ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನ (ಕೆಪಿಸಿಎಫ್‌) ನಡುವೆ ನಡೆಸಲಾಗಿರುವ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಯಾವುದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸ್ನಾತಕೋತ್ತರ ಪದವಿ ಸೀಟುಗಳ ಶುಲ್ಕ ಹೆಚ್ಚಳ ಮಾಡಲಾಗಿದೆ. ಕಾಮೆಡ್‌- ಕೆ ವ್ಯಾಪ್ತಿಯಲ್ಲಿ ಬರಲಿರುವ ಸರ್ಕಾರಿ ಮತ್ತು ಖಾಸಗಿ ಕೋಟಾ ಸೀಟು ಎರಡಕ್ಕೂ ಶೇ.15ರಷ್ಟುಶುಲ್ಕ ಹೆಚ್ಚಳ ಅನ್ವಯಿಸಲಿದೆ. ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆಯು ಮಾಚ್‌ರ್‍ ಅಂತ್ಯಕ್ಕೆ ಆರಂಭವಾಗಲಿದೆ. ವೈದ್ಯ ಮತ್ತು ದಂತ ವೈದ್ಯಕೀಯ ಪದವಿ ತರಗತಿಗಳ ಶುಲ್ಕ ಹೆಚ್ಚಳ ಕುರಿತ ಸಭೆಯು ಲೋಕಸಭಾ ಚುನಾವಣೆ ನಂತರ ನಡೆಯಲಿದೆ ಎಂದು ಹೇಳಿದರು.

ಕಾಲೇಜುಗಳನ್ನು ನಡೆಸಲು ಅವಶ್ಯವಿರುವ ವಾರ್ಷಿಕ ವೆಚ್ಚ, ಶಿಕ್ಷಣ ಮತ್ತು ಮೂಲ ಸೌಕರ್ಯ, ಗುಣಮಟ್ಟದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದ ಚೌಕಟ್ಟಿನ ಅನುಸಾರವಾಗಿ ಸರ್ಕಾರಕ್ಕೆ ಶುಲ್ಕ ಹೆಚ್ಚಳವನ್ನು ವಿವರಿಸಲಾಗಿದೆ. ವಾಸ್ತವಾಂಶವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಅದರಂತೆ ಶೇ.15ರಷ್ಟುಶುಲ್ಕ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಅಧಿಕೃತ ಒಪ್ಪಂದ ಸದ್ಯದಲ್ಲಿಯೇ ನೆರವೇರಲಿದೆ. ಸಹಿ ಮಾಡುವುದು ಅಷ್ಟೇ ಬಾಕಿ ಇದೆ ಎಂದು ತಿಳಿಸಿದರು.

2018-19ನೇ ಸಾಲಿನ ಪ್ರಸ್ತುತ ದರ:

ವೈದ್ಯಕೀಯ ಶಿಕ್ಷಣದಲ್ಲಿ ಕ್ಲಿನಿಕಲ್‌ ಕೋರ್ಸ್‌ಗೆ ಸರ್ಕಾರಿ ಕಾಲೇಜುಗಳಲ್ಲಿ 5.06 ಲಕ್ಷ ರು., ಕಾಮೆಡ್‌-ಕೆ 7.59 ಲಕ್ಷ ರು., ಪ್ಯಾರಾ ಕ್ಲಿನಿಕಲ್‌ ಕೋರ್ಸ್‌ಗೆ 1.26 ಲಕ್ಷ ರು., ಕಾಮೆಡ್‌- ಕೆ 1.89 ಲಕ್ಷ ರು., ಪ್ರಿ ಕ್ಲಿನಿಕಲ್‌ ಕೋರ್ಸ್‌ಗೆ ಸರ್ಕಾರಿ 63,250 ರು. ಹಾಗೂ ಕಾಮೆಡ್‌-ಕೆ 95,450 ರು.ಗಳನ್ನು ಹೊಂದಿದೆ. ದಂತ ವೈದ್ಯಕೀಯ ಸರ್ಕಾರಿ ಕಾಲೇಜುಗಳಲ್ಲಿ 2.58 ಲಕ್ಷ ರು. ಹಾಗೂ ಕಾಮೆಡ್‌-ಕೆ ನಲ್ಲಿ 4.04 ಲಕ್ಷ ರು.ಗಳನ್ನು ಹೊಂದಿದೆ. ಇದಕ್ಕೆ 2019-20ನೇ ಸಾಲಿನಿಂದ ಶೇ.15ರಷ್ಟುಹೆಚ್ಚಳವಾಗಲಿದೆ ಎಂದು ಹೇಳಿದರು.


2018-19ನೇ ಸಾಲಿನ ನೂತನ ಶುಲ್ಕ (ರು.ಗಳಲ್ಲಿ)

ಸರ್ಕಾರಿ ಕೋಟಾ    ಕಾಮೆಡ್‌-ಕೆ ಕೋಟಾ

ವೈದ್ಯಕೀಯ ಪದವಿ

ಕ್ಲಿನಿಕಲ್‌    5,81,900    72,850

ಪ್ಯಾರಾ ಕ್ಲಿನಿಕಲ್‌    1,45,475    2,18,212

ಪ್ರಿ ಕ್ಲಿನಿಕಲ್‌    72,737    1,09,767

ವೈದ್ಯಕೀಯ ಡಿಪ್ಲೊಮಾ ಕ್ಲಿನಿಕಲ್‌    4,36,425    6,61,250

ಪ್ಯಾರಾ ಕ್ಲಿನಿಕಲ್‌    1,45,475    2,18,212

ದಂತ ವೈದ್ಯಕೀಯ ಪದವಿ ಮತ್ತು ಡಿಪ್ಲೊಮಾ    2,97,562    4,65,520