ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಖಡಕ್‌ ಸೂಚನೆ: ಮಳೆ ಹಾನಿ ತಡೆಗೆ 15 ದಿನ ರಜೆ ಕಟ್‌

*    2- 3 ದಿನ ಕಡ್ಡಾಯವಾಗಿ ಸ್ಥಳ ಭೇಟಿಗೆ ತಾಕೀತು
*  ಡಿಸಿ, ಸಿಇಒ, ಅಧಿಕಾರಿಗಳ ಜತೆ ಮಳೆ ಹಾನಿ ಸಭೆ
*  ಮುನ್ನೆಚ್ಚರಿಕೆ ಕ್ರಮ ವಹಿಸಬೇಕು
 

15 Days Holiday Cut to Prevent Rain Damage in Karnataka grg

ಬೆಂಗಳೂರು(ಮೇ.22):  ರಾಜ್ಯದಲ್ಲಿ ಮಳೆಯಿಂದಾಗಿ ಸಂಭವಿಸಿದ ಅನಾಹುತದ ಕುರಿತು ಮುಂದಿನ 2-3 ದಿನಗಳ ಕಾಲ ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟಅಧಿಕಾರಿಗಳು ಕಡ್ಡಾಯವಾಗಿ ಸ್ಥಳ ಪರಿಶೀಲನೆ ನಡೆಸಬೇಕು, ಯಾವುದೇ ಅಧಿಕಾರಿಗಳು ಮುಂದಿನ 15 ದಿನಗಳ ರಜೆ ಪಡೆಯಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್‌ ಸೂಚನೆ ನೀಡಿದ್ದಾರೆ.

ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕಂದಾಯ ಸೇರಿದಂತೆ ಪ್ರಮುಖ ಇಲಾಖೆಯ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಅವರು, ಮೂರು ದಿನದಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ವರದಿಯನ್ನು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಬೇಕು. ಅಧಿಕಾರಿಗಳು ಸ್ಥಳ ಭೇಟಿ ಮಾಡಿರುವ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಕಡ್ಡಾಯ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರಲ್ಲದೇ, ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು ಎಂದರು.

ಕೊನೆಗೂ ಬಿಡುವು ಕೊಟ್ಟ ಮಳೆ: ನಿಟ್ಟುಸಿರು ಬಿಟ್ಟ ಜನತೆ

ಮೇ 15ರಿಂದ ಮೇ 21ರವರೆಗಿನ ಅವಧಿಯಲ್ಲಿ ಸುರಿದ ಮಳೆಯಿಂದ 12 ಜನರು, 430 ಜಾನುವಾರುಗಳ ಸಾವು ಸಂಭವಿಸಿದೆ. 1431 ಮನೆಗಳಿಗೆ ನೀರು ನುಗ್ಗಿದ್ದು, 4242 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 7010 ಹೆಕ್ಟೇರ್‌ ಕೃಷಿ ಬೆಳೆ, 5736 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 728 ಕೋಟಿ ರು. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಬೆಳೆಹಾನಿ, ಜಾನುವಾರು ಮತ್ತು ಮಾನವ ಜೀವ ಹಾನಿ, ಮೂಲಸೌಲಭ್ಯಗಳಿಗೆ ಉಂಟಾಗಿರುವ ಹಾನಿ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಮತ್ತು ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿರುವ 728.85 ಕೋಟಿ ರು.ಗಳನ್ನು ಬಳಸಿಕೊಳ್ಳಬೇಕು. ಬೆಳೆ ಹಾನಿ ಮತ್ತು ಮನೆ ಹಾನಿಯ ಕುರಿತು ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಬೇಕು. ಕಾಳಜಿ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಿಸಬೇಕು. ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ತಕ್ಷಣ ಛಾಯಾಗ್ರಾಹಕರೊಂದಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿ, ಮನೆ ಹಾನಿಯ ಮಾಹಿತಿ ದಾಖಲಿಸಬೇಕು. ಹಾನಿಗೊಳಗಾಗಿರುವ ಮನೆಗಳ ವಿವರ ಬಿಟ್ಟು ಹೋಗಬಾರದು. ಅನಗತ್ಯ ಮನೆಗಳ ವಿವರಗಳನ್ನು ಸೇರಿಸಬಾರದು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಸಮೀಕ್ಷೆ ಕಾರ್ಯಕ್ಕೆ ಲೋಕೋಪಯೋಗಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಎಂಜಿನಿಯರ್‌ಗಳನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ತಕ್ಷಣ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು. ಅಣೆಕಟ್ಟುಗಳಿಂದ ಹೆಚ್ಚುವರಿ ನೀರು ಹೊರಬಿಡುವಾಗ ವ್ಯವಸ್ಥಿತವಾಗಿ ಬಿಡಬೇಕು. ತಗ್ಗುಪ್ರದೇಶಗಳಲ್ಲಿರುವ ಗ್ರಾಮಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ, ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಬೇಕು. ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ದ್ವೀಪಗಳಾಗುವ ಗ್ರಾಮಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಮಸ್ಥರನ್ನು ಮುಂಚಿತವಾಗಿಯೇ ಸ್ಥಳಾಂತರ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

HDK City Rounds: ಕುಮಾರಸ್ವಾಮಿ ಎರಡನೇ ದಿನದ ಸಿಟಿ ರೌಂಡ್ಸ್​​: ಮಾಜಿ ಸಿಎಂ ಬಳಿ ಸಂಕಷ್ಟ ತೋಡಿಕೊಂಡ ಜನ

ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಭೂ ಕುಸಿತದಿಂದ ಸಾವು ಸಂಭವಿಸದಂತೆ ಜನರನ್ನು ಸ್ಥಳಾಂತರ ಮಾಡಬೇಕು. ವಿಪತ್ತು ನಿರ್ವಹಣಾ ತಂಡದವರು ಈ ಬಗ್ಗೆ ಸಂಬಂಧಿಸಿದ ಜಿಲ್ಲೆಗಳಿಗೆ ಮಾಹಿತಿ ಒದಗಿಸಬೇಕು. ನಿಯಮಿತವಾಗಿ ಪ್ರವಾಹಕ್ಕೊಳಗಾಗುವ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು. ನದಿಗಳು, ಅಣೆಕಟ್ಟುಗಳ ನೀರಿನ ಪ್ರಮಾಣದ ಬಗ್ಗೆ ಎಚ್ಚರಿಕೆ ವಹಿಸಬೇಕು. ಸ್ಥಳ ಪರಿಶೀಲನೆಯನ್ನು ಕೈಗೊಂಡು ಯಾವ ತಾಲೂಕುಗಳಲ್ಲಿ, ಗ್ರಾಮಗಳಲ್ಲಿ ನಷ್ಟಉಂಟಾಗಿದೆ ಎಂಬುದರ ಬಗ್ಗೆ ಸರ್ವೆ ಸಂಖ್ಯೆಯ ಸಮೇತ ಮಾಹಿತಿ ಒದಗಿಸಬೇಕು. ಎಸ್‌ಡಿಆರ್‌ಎಫ್‌ನ ಎರಡು ಹೆಚ್ಚುವರಿ ಕಂಪನಿಗಳನ್ನು ಸ್ಥಾಪಿಸಬೇಕು ಎಂದು ಸೂಚನೆ ನೀಡಿದರು.

ರಾಜ್ಯದಲ್ಲಿ ಮಳೆಯ ಅಬ್ಬರ ಇಳಿಮುಖ

ಬೆಂಗಳೂರು: ಕಳೆದ ಮೂರು ದಿನಗಳಿಂದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಆರ್ಭಟಿಸಿದ್ದ ಮಳೆ ಶನಿವಾರ ಬಿಡುವು ನೀಡಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಶನಿವಾರ ದೊಡ್ಡ ಪ್ರಮಾಣದ ಮಳೆ ಆಗದಿದ್ದರೂ ದಕ್ಷಿಣ ಕರ್ನಾಟಕವೂ ಸೇರಿದಂತೆ ರಾಜ್ಯದ ಬಹುಭಾಗ ಮೋಡ ಕವಿದ ವಾತಾವರಣ ಮುಂದುವರಿದಿದೆ. ಹೆಚ್ಚಿನ ಕಡೆಗಳಲ್ಲಿ ತುಂತುರು ಮಳೆಯಾಗಿದೆ.

ಸಿಎಂ ಸೂಚನೆಗಳು

- ಬೆಳೆ, ಜಾನುವಾರು, ಜೀವ, ಮೂಲಸೌಕರ್ಯ ಹಾನಿ ಬಗ್ಗೆ ಮಾಹಿತಿ ಪಡೆಯಬೇಕು
- ಹಾನಿ ಬಗ್ಗೆ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಮಾಡಬೇಕು
- ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಅಲ್ಲಿ ಆರೋಗ್ಯ ತಪಾಸಣೆ ಮಾಡಿಸಬೇಕು
- ಪಿಡಿಒ, ಗ್ರಾಮ ಲೆಕ್ಕಿಗರು ಛಾಯಾಗ್ರಾಹಕರೊಂದಿಗೆ ಹಾನಿಯ ಮಾಹಿತಿ ದಾಖಲಿಸಬೇಕು
- ಹಾನಿಗೊಳಗಾಗಿರುವ ಮನೆಗಳ ವಿವರ ಬಿಟ್ಟು ಹೋಗಬಾರದು, ಅನಗತ್ಯ ಮನೆ ಸೇರಬಾರದು
- ರಾಜ್ಯದ ಅಣೆಕಟ್ಟೆಗಳಿಂದ ನೀರು ಹೊರಬಿಡುವಾಗ ವ್ಯವಸ್ಥಿತವಾಗಿ ಅದನ್ನು ಬಿಡಬೇಕು
- ತಗ್ಗುಪ್ರದೇಶಗಳಲ್ಲಿರುವ ಗ್ರಾಮಗಳಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು, ಸ್ಥಳಾಂತರಿಸಬೇಕು
- ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ದ್ವೀಪಗಳಾಗುವ ಗ್ರಾಮಗಳ ಬಗ್ಗೆ ಎಚ್ಚರಿಕೆ ವಹಿಸಬೇಕು
- ಕರಾವಳಿ, ಮಲೆನಾಡಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ, ಮುನ್ನೆಚ್ಚರಿಕೆ ಕ್ರಮ ವಹಿಸಬೇಕು
 

Latest Videos
Follow Us:
Download App:
  • android
  • ios