57 ಕೋಟಿ ಮೌಲ್ಯದ ವಸ್ತು ಜಪ್ತಿ, 1985 ಮಂದಿ ವಿರುದ್ಧ ಎಫ್‌ಐಆರ್, ಚುನಾವಣಾ ಆಯೋಗಕ್ಕೆ ಪೊಲೀಸ್, ಅಬಕಾರಿ ಸೇರಿ ವಿವಿಧ ಇಲಾಖೆಗಳ ಸಾಥ್
ಬೆಂಗಳೂರು(ಮಾ.30): ರಾಜ್ಯದ ವಿಧಾನಸಭಾ ಚುನಾವಣೆ ಅಕ್ರಮಗಳ ಮೇಲೆ ಕಣ್ಗಾವಲು ಇಟ್ಟಿರುವ ಚುನಾವಣಾ ಆಯೋಗವು ಇದುವರೆಗೆ 15 ಕೋಟಿ ರು. ನಗದು ಸೇರಿದಂತೆ 57.72 ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಚುನಾವಣಾ ಅಕ್ರಮಗಳ ಮೇಲೆ ನಿಗಾವಹಿಸಲು ವಿವಿಧ ತನಿಖಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪೊಲೀಸ್ ಇಲಾಖೆಯು 34.36 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದೆ. 14.24 ಕೋಟಿ ರು. ನಗದು, 530 ಕೆಜಿ ಮಾದಕ ವಸ್ತುಗಳು, 15 ಕೆಜಿ ಚಿನ್ನ, 135 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಚುನಾವಣಾ ಅಕ್ರಮ: ಬೆಳಗಾವಿಯಲ್ಲಿ ಮೊದಲ ಕೇಸು ದಾಖಲು
ಅಬಕಾರಿ ಇಲಾಖೆಯು 6.84 ಕೋಟಿ ರು. ಮೌಲ್ಯದ 1,38,847 ಲಿ. ಮದ್ಯ ಮತ್ತು 43 ಕೆಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿದೆ. ಆದಾಯ ತೆರಿಗೆ ಇಲಾಖೆಯು 1.16 ಕೋಟಿ ರು. ನಗದನ್ನು ವಶಪಡಿಸಿಕೊಂಡಿದ್ದು, ವಾಣಿಜ್ಯ ತೆರಿಗೆ ಇಲಾಖೆಯು ಒಟ್ಟು 5.02 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದೆ. ಡಿಆರ್‌ಐನಿಂದ 1.03 ಕೋಟಿ ರು. ಮೌಲ್ಯದ ವಸ್ತುಗಳು, ಎನ್‌ಸಿಬಿಯಿಂದ 57.15 ಲಕ್ಷ ರು. ಮೌಲ್ಯದ ವಸ್ತುಗಳು, ಸಿಬಿಐಸಿಯಿಂದ 3.97 ಕೋಟಿ ರು. ಮೌಲ್ಯದ ವಸ್ತುಗಳು ಮತ್ತು ರಾಜ್ಯ ಸಿವಿಲ್ ಏವಿಯೇಷನ್ ವತಿಯಿಂದ 69.40 ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮಗಳಿಗೆ ಸಂಬಂಧಿಸಿದಂತೆ ಒಟ್ಟು 1,985 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ದ್ರಾವಿಡ್, ಕಂಬಾರ ಸೇರಿ ಹಲವರಿಂದ ಜಾಗೃತಿ
ಚುನಾವಣೆ ಕುರಿತು ಜಾಗೃತಿ ಮೂಡಿಸಲು ಚುನಾವಣಾ ಆಯೋಗವು ಈಗಾಗಲೇ ರಾಯಭಾರಿಗಳನ್ನು ನಿಯೋಜನೆ ಮಾಡಿದೆ. ಕ್ರಿಕೆಟಿಗ ರಾಹುಲ್ ದ್ರಾವಿಡ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ್ ಕಂಬಾರ, ವಿಶೇಷ ಚೇತನರಾದ ಅಶ್ವಿನಿ ಅಂಗಡಿ, ಪ್ಯಾರಾಲಿಂಪಿಯನ್ ಗಿರೀಶ್ ಗೌಡ ಅವರು ರಾಯಭಾರಿಯಾಗಿದ್ದಾರೆ.
