ಬೆಂಗಳೂರು(ಫೆ.06): ​ಕೃಷಿ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಪ್ರತಿಷ್ಠಿತ ‘ರೈತ ರತ್ನ-2021’ ಪ್ರಶಸ್ತಿಯ 15 ವಿಭಾಗಗಳ ಸಾಧಕರನ್ನು ಶುಕ್ರವಾರ ಆರಿಸಲಾಯಿತು.

ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸುದ್ದಿವಾಹಿನಿ ಜಂಟಿಯಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಇದೇ ತಿಂಗಳ 12ನೇ ತಾರೀಖಿನಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೃಷಿ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಕೇಂದ್ರ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ತೀರ್ಪುಗಾರರಾಗಿ ಕೃಷಿ-ಪರಿಸರ ತಜ್ಞ ಹಾಗೂ ಪತ್ರಕರ್ತ ಶಿವಾನಂದ ಕಳವೆ, ಕೃಷಿ ತಜ್ಞ-ಉದ್ಯಮಿ ಕೃಷ್ಣ ಪ್ರಸಾದ್‌ ಹಾಗೂ ನಟಿ-ನಿರ್ದೇಶಕಿ-ನಿರ್ಮಾಪಕಿ ಶ್ರುತಿ ನಾಯ್ಡು ಅವರು ಭಾಗವಹಿಸಿದ್ದರು.

15 ವಿಭಾಗಗಳಲ್ಲಿ ಆಯ್ಕೆ:

ಸುಸ್ಥಿರ ಕೃಷಿ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ಕೃಷಿ ತಂತ್ರಜ್ಞಾನ, ಬೆಳೆ ವಿಜ್ಞಾನಿ, ಬೆಳೆ ವೈದ್ಯ, ರೈತ ಮಹಿಳೆ, ಯುವ ರೈತ, ರೈತ ಉತ್ಪಾದನಾ ಸಂಸ್ಥೆ, ರೈತ ಸಂಶೋಧಕ, ಹೈನುಗಾರಿಕೆ, ಮೀನುಗಾರಿಕೆ, ತೋಟಗಾರಿಕೆ, ಕೋಳಿ ಸಾಕಣೆ ಹಾಗೂ ಕೃಷಿ ಉತ್ಪನ್ನ ಮಾರಾಟಗಾರರು ಎಂಬ 15 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿತ್ತು.

ರೈತ ಪ್ರತಿಭಟನೆ ಬಗ್ಗೆ ನಟಿ ಮಾತು: ಪ್ರಣಿತಾ ಹೇಳಿದ್ದಿಷ್ಟು..!

ಸುಮಾರು ಒಂದೂವರೆ ತಿಂಗಳ ಕಾಲ ನಡೆದ ಪ್ರಕ್ರಿಯೆ ವೇಳೆ 950ಕ್ಕೂ ಹೆಚ್ಚು ನಾಮನಿರ್ದೇಶನಗಳು ಹರಿದು ಬಂದಿದ್ದವು. ಇವುಗಳ ಪೈಕಿ ಮೊದಲ ಹಂತದ ಆಯ್ಕೆ ಪ್ರಕ್ರಿಯೆ ಮಂಗಳವಾರವಷ್ಟೇ ನಡೆದಿತ್ತು. ಕನ್ನಡಪ್ರಭ ಸಂಪಾದಕೀಯ ತಂಡವು ಪ್ರತಿಯೊಂದು ನಾಮನಿರ್ದೇಶನವನ್ನೂ ಕೂಲಂಕಷವಾಗಿ ಪರಿಶೀಲಿಸಿ ಪ್ರತಿ ವಿಭಾಗದಲ್ಲೂ ತಲಾ ಮೂರು ಸಾಧಕರನ್ನು ಆರಿಸಿತ್ತು.

ಈ ಆಯ್ದ 45 ನಾಮನಿರ್ದೇಶನಗಳನ್ನು ತೀರ್ಪುಗಾರರಾದ ಶಿವನಾಂದ ಕಳವೆ, ಕೃಷ್ಣಪ್ರಸಾದ್‌ ಹಾಗೂ ಶ್ರುತಿ ನಾಯ್ಡು ಮುಂದಿಡಲಾಗಿತ್ತು. ಪ್ರತಿಯೊಂದು ಕ್ಷೇತ್ರದಲ್ಲೂ ಒಬ್ಬರಿಗಿಂತ ಇನ್ನೊಬ್ಬರು ಮಿಗಿಲು ಎಂಬಂತಿದ್ದ ರೈತ ಸಾಧಕರನ್ನು ತೀರ್ಪುಗಾರರು ಪರಸ್ಪರ ಸಮಾಲೋಚಿಸಿ, ಅಳೆದು ತೂಗಿ ಪ್ರಶಸ್ತಿಗೆ ಆರಿಸಿದರು. ಸುಮಾರು 4 ತಾಸುಗಳ ಕಾಲ ನಡೆದ ಆಯ್ಕೆ ಪ್ರಕ್ರಿಯೆ ಬಳಿಕ 15 ಸಾಧಕರನ್ನು ಪ್ರಶಸ್ತಿಗೆ ಅಂತಿಮಗೊಳಿಸಲಾಯಿತು.

ಕನ್ನಡಪ್ರಭ ಪ್ರಧಾನ ಪುರವಣಿ ಸಂಪಾದಕ ಜೋಗಿ, ಕಾರ್ಯನಿರ್ವಾಹಕ ಸಂಪಾದಕ ರವಿಶಂಕರ್‌ ಭಟ್‌, ಸಹಾಯಕ ಸಂಪಾದಕ ವಿನೋದ್‌ ಕುಮಾರ್‌ ನಾಯ್ಕ್‌, ಮಾರ್ಕೆಟಿಂಗ್‌ ವಿಭಾಗದ ನಾಗರಾಜ್‌ ಹುಂಡೇಕರ್‌, ಕಿರಣ್‌ ಅಪ್ಪಚ್ಚು ಉಪಸ್ಥಿತರಿದ್ದರು.