ಬೆಂಗಳೂರು(ಮೇ.20): ರಾಜ್ಯದಲ್ಲಿ ಕೊರೋನಾ ಸೋಂಕಿನ ಮಹಾ ಸ್ಫೋಟ ಆರಂಭವಾಗಿದೆ. ಸೋಮವಾರ ಶತಕದ ಗಡಿ ದಾಟಿ ದಾಖಲೆ ಮಾಡಿದ್ದ ಕೋವಿಡ್‌ 19 ಮಂಗಳವಾರ 149 ಸಂಖ್ಯೆ ಮುಟ್ಟುವ ಮೂಲಕ ಮತ್ತೆ ಹೊಸ ದಾಖಲೆ ಸೃಷ್ಟಿಸಿದೆ. ಹೊರರಾಜ್ಯ, ಹೊರದೇಶದಿಂದ ಆಗಮನ ಹೆಚ್ಚಳ ಹಾಗೂ ಸೋಂಕು ಪರೀಕ್ಷಾ ಪ್ರಮಾಣ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಇನ್ನು ಮುಂದೆ ಇದೇ ರೀತಿ ದಿನಕ್ಕೆ 100, 200ರ ರೀತಿಯಲ್ಲಿ ಸೋಂಕು ಪ್ರಕರಣಗಳು ಹೆಚ್ಚುವ ಭೀತಿ ಸೃಷ್ಟಿಯಾಗಿದೆ.

"

149 ಹೊಸ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1395ಕ್ಕೇರುವ ಮೂಲಕ ದೇಶದ ಅತಿ ಹೆಚ್ಚು ಸೋಂಕಿತರಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 13ರಿಂದ 12ನೇ ಸ್ಥಾನಕ್ಕೇರಿದೆ. ಈ ಮಾರಕ ಸೋಂಕು ಮಕ್ಕಳಿಗೆ ತಗಲುವುದು ಹೆಚ್ಚಿದೆ. ಮಂಗಳವಾರ ಒಂದೇ ದಿನ 15 ವರ್ಷದೊಳಗಿನ 26 ಮಕ್ಕಳಿಗೆ ಸೋಂಕು ದೃಢಪಡುವ ಮೂಲಕ ಸೋಮವಾರ ದಾಖಲಾಗಿದ್ದ ಇದುವರೆಗಿನ ಗರಿಷ್ಠ ಸಂಖ್ಯೆ 19 ಅನ್ನು ಮೀರಿದೆ.

ಅನಾರೋಗ್ಯ ಪೀಡಿತ ಅಪ್ಪನನ್ನು 7 ದಿನ ಸೈಕಲ್ ತುಳಿದು ಮನೆಗೆ ಕರೆತಂದ 13ರ ಮಗಳು!

ಇದೇ ವೇಳೆ ಸೋಂಕಿನಿಂದ ರಾಜ್ಯದಲ್ಲಿ ಮತ್ತೆ ಮೂವರು ಮೃತಪಟ್ಟಿದ್ದಾರೆ. ಬೆಂಗಳೂರು, ಬಳ್ಳಾರಿ ಮತ್ತು ವಿಜಯಪುರದಲ್ಲಿ ತಲಾ ಒಬ್ಬ ಪುರುಷರು ಸಾವನ್ನಪ್ಪಿದ್ದು ಇದರಿಂದ ಮೃತಪಟ್ಟಒಟ್ಟು ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಸೋಂಕಿನ ನಾಗಾಲೋಟಕ್ಕೆ ಮಹಾರಾಷ್ಟ್ರದಿಂದ ಹಿಂತಿರುಗಿದವರೇ ಮುಖ್ಯ ಕಾರಣ. ಮಂಡ್ಯದ 71, ದಾವಣಗೆರೆ 19, ಶಿವಮೊಗ್ಗ, ಕಲಬುರಗಿ ತಲಾ 12, ಬೆಂಗಳೂರು 7, ಚಿಕ್ಕಮಗಳೂರು, ಬಾಗಲಕೋಟೆ ತಲಾ 5, ಉಡುಪಿ 4, ಹಾಸನ 3, ಚಿತ್ರದುರ್ಗ, ಗದಗ, ಬೀದರ್‌, ವಿಜಯಪುರ, ಯಾದಗಿರಿ, ರಾಯಚೂರು ತಲಾ ಒಂದರಂತೆ ಮಂಗಳವಾರ ದೃಢಪಟ್ಟ149 ಪ್ರಕರಣ ಈ ಪೈಕಿ 107 ಮಂದಿ ಮಹಾರಾಷ್ಟ್ರದಿಂದ ತವರಿಗೆ ಹಿಂತಿರುಗಿದವರು.

ಕಳೆದ ಶನಿವಾರ ಇದೇ ಹಿನ್ನೆಲೆಯ 21 ಜನ, ಭಾನುವಾರ 40, ಸೋಮವಾರ 65 ಜನರಿಗೆ ಸೋಂಕು ದೃಢಪಟ್ಟಿತ್ತು. ಇದೀಗ 107 ಹೊಸ ಪ್ರಕರಣ ಸೇರಿ ನಾಲ್ಕೇ ದಿನದಲ್ಲಿ ಈ ಹಿನ್ನೆಲೆಯ 223 ಮಂದಿಗೆ ಸೋಂಕು ದೃಢಪಟ್ಟಂತಾಗಿದೆ.

ಇನ್ನು ಗುಜರಾತ್‌, ಕೇರಳದಿಂದ ಹಿಂತಿರುಗಿದ ತಲಾ ಮೂವರು, ಆಂಧ್ರಪ್ರದೇಶ ಮತ್ತು ತಮಿಳುನಾಡು ಪ್ರವಾಸ ಹಿನ್ನೆಲೆಯ ತಲಾ ಒಬ್ಬರು ಸೇರಿ ಹೊರರಾಜ್ಯದಿಂದ ಆಗಮಿಸಿದ 112 ಮಂದಿಗೆ ಮಂಗಳವಾರ ಸೋಂಕು ದೃಢ±ಟ್ಟಿದೆ.

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಕೋಳಿ ಮಾಂಸ ಬೆಲೆ ಏರಿಕೆ!

ಮಂಡ್ಯಕ್ಕೆ ಮಹಾ ಕಂಟಕ:

ಮಂಡ್ಯಕ್ಕೆ ಮಹಾಘಾತ ತುಸು ಹೆಚ್ಚೆ ಬಾಧಿಸಿದೆ. ಮಹಾರಾಷ್ಟ್ರದಿಂದ ಆಗಮಿಸಿದ ಮತ್ತೆ 71 ಮಂದಿಗೆ ಸೋಂಕು ದೃಢಪಟ್ಟಿದೆ. ತನ್ಮೂಲಕ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನದಲ್ಲಿ 131 ಜನರಿಗೆ ಸೋಂಕು ದೃಢಪಟ್ಟಂತಾಗಿದೆ. ಉಳಿದಂತೆ ಶಿವಮೊಗ್ಗದ 5, ಕಲಬುರಗಿಯ 12, ಉಡುಪಿ, ಚಿಕ್ಕಮಗಳೂರಿನಲ್ಲಿ ತಲಾ 4, ಹಾಸನದ 3, ಉತ್ತರ ಕನ್ನಡದ 2, ಬೆಂಗಳೂರು, ಬಾಗಲಕೋಟೆ, ಗದಗ, ಯಾದಗಿರಿ, ರಾಯಚೂರಿನ ತಲಾ ಒಬ್ಬೊಬ್ಬ ಸೋಂಕಿತರು ಮುಂಬೈನಿಂದ ಹಿಂತಿರುಗಿದವರು.

ದಾವಣಗೆರೆಯಲ್ಲಿ ಪಿ.662 ಸೋಂಕಿತನಿಂದ ಐವರಿಗೆ, ಪಿ.976ನೇ ಸೋಂಕಿತನಿಂದ ನಾಲ್ವರಿಗೆ, ಪಿ.633 ಸೋಂಕಿತನಿಂದ ಮೂವರಿಗೆ, ಪಿ.694 ಮತ್ತು ಪಿ.556ನೇ ಸೋಂಕಿತರಿಂದ ತಲಾ ಒಬ್ಬರಿಗೆ, ಕಂಟೈನ್ಮೆಂಟ್‌ ಪ್ರದೇಶದ ಇಬ್ಬರಿಗೆ ಸೋಂಕು ಹರಡಿದೆ. ಶಿವಮೊಗ್ಗದ ಉಳಿದ ನಾಲ್ಕು ಪ್ರಕರಣಗಳಲ್ಲಿ ಇಬ್ಬರಿಗೆ ಸೋಂಕಿಗೆ ದಾವಣಗೆರೆ ಪ್ರವಾಸ ಕಾರಣವಾಗಿದೆ.

ಬೆಂಗಳೂರಿನಲ್ಲಿ ಪಿ.608ನೇ ರೋಗಿಯಿಂದ ಮೂವರಿಗೆ, ಕಂಟೈನ್ಮೆಂಟ್‌ ಪ್ರದೇಶ, ಇನ್‌ಫ್ಲುಯೆಂಝಾ ಜ್ವರದಿಂದ ತಲಾ ಒಬ್ಬರು ಸೋಂಕು ಹರಡಿದೆ. ಶಿವಮೊಗ್ಗ, ಬೆಂಗಳೂರು ಮತ್ತು ಚಿಕ್ಕಮಗಳೂರಿನ ಒಂದೊಂದು ಪ್ರಕರಣಗಳಲ್ಲಿ ಸೋಂಕಿಗೆ ಕಾರಣ ಇನ್ನೂ ಪತ್ತೆಯಾಗಿಲ್ಲ. ಚಿತ್ರದುರ್ಗದಲ್ಲಿ ತೀವ್ರ ಉಸಿರಾಟ ತೊಂದರೆಯಿಂದ ಒಬ್ಬರಿಗೆ, ವಿಜಯಪುರದಲ್ಲಿ ಕಂಟೈನ್ಮೆಂಟ್‌ ವಲಯದ ಒಬ್ಬರಿಗೆ, ಬೀದರ್‌ನಲ್ಲಿ ಪಿ.939 ರೋಗಿಯಿಂದ ಒಬ್ಬರಿಗೆ, ಬಾಗಲಕೋಟೆಯಲ್ಲಿ ಪಿ.607ನೇ ಸೋಂಕಿತನಿಂದ ನಾಲ್ವರಿಗೆ ಸೋಂಕು ಹರಡಿದೆ.

3 ಸಾವು:

ಬಳ್ಳಾರಿಯಲ್ಲಿ ತೀವ್ರ ಉಸಿರಾಟ ತೊಂದರೆಯಿಂದ ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದ 61 ವರ್ಷದ ವ್ಯಕ್ತಿಗೆ (ಪಿ.1185) ಕೊರೋನಾ ಸೋಂಕು ದೃಢಪಟ್ಟಿತ್ತು. ಅವರಿಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಹೃದಯಶಸ್ತ್ರಚಿಕಿತ್ಸೆಯೂ ಆಗಿತ್ತು. ಚಿಕಿತ್ಸೆ ಫಲಿಸದೆ ಮಂಗಳವಾರ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ವಿಜಯಪುರದಲ್ಲಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ 65 ವರ್ಷದ ವ್ಯಕ್ತಿ (ಪಿ.1291) ಸೋಮವಾರ ಮನೆಯಲ್ಲೇ ಮೃತಪಟ್ಟಿದ್ದರು. ಬಳಿಕ ನಿಗದಿತ ಆಸ್ಪತ್ರೆಗೆ ತರಲಾಗಿದ್ದ ಶವವನ್ನು ಕೋವಿಡ್‌ ಪರೀಕ್ಷೆ ಮಾಡಲಾಗಿತ್ತು. ಮಂಗಳವಾರ ವರದಿ ಪಾಸಿಟಿವ್‌ ಎಂದು ದೃಢಪಟ್ಟಿದೆ.

ಕಾಂಗ್ರೆಸ್‌ ಕೊಟ್ಟ 1 ಸಾವಿರ ಬಸ್‌ ಪಟ್ಟಿಯಲ್ಲಿ ದ್ವಿಚಕ್ರ ವಾಹನಗಳೇ ಹೆಚ್ಚು!

ಬೆಂಗಳೂರಿನಲ್ಲಿ ಐಎಚ್‌ಡಿ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ 54 ವರ್ಷದ ವ್ಯಕ್ತಿಯು (ಪಿ.1364) ಸೋಮವಾರ ಮೃತಪಟ್ಟಿದ್ದರು. ಅವರಿಗೆ ಕೊರೋನಾ ಸೋಂಕು ವರದಿಯಲ್ಲಿ ದೃಢಪಟ್ಟಿದೆ.

13 ಜನ ಬಿಡುಗಡೆ:

ಬೀದರ್‌ನಲ್ಲಿ 7 ಜನ, ಕಲಬುರಗಿ, ಬೆಳಗಾವಿಯಲ್ಲಿ ತಲಾ 2, ಬೆಂಗಳೂರು, ಉತ್ತರ ಕನ್ನಡದ ತಲಾ ಒಬ್ಬರು ಸೇರಿ 13 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 543 ಆಗಿದೆ. ಉಳಿದ 811 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 40 ಜನ ಮೃತಪಟ್ಟಿದ್ದಾರೆ.