ಬೆಂಗಳೂರು(ಜೂ.19): ಗ್ರಾಹಕರ ಹಣವನ್ನು ಅಕ್ರಮವಾಗಿ ವರ್ಗಾವಣೆ ಮತ್ತು ದುರುಪಯೋಗ ಮಾಡಿಕೊಂಡು ಕೋಟ್ಯಂತರ ರು. ವಂಚನೆ ಮಾಡಿರುವ ಆರೋಪದ ಮೇರೆಗೆ ಶ್ರೀಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಕೇಂದ್ರ ಕಚೇರಿ, ಬ್ಯಾಂಕ್‌ ಅಧ್ಯಕ್ಷರ ನಿವಾಸ ಸೇರಿದಂತೆ ಐದು ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ 1400 ಕೋಟಿ ರು. ಅವ್ಯವಹಾರ ನಡೆಸಿರುವುದು ಪತ್ತೆ ಮಾಡಿದ್ದಾರೆ.

ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್‌ನಲ್ಲಿನ ಕೇಂದ್ರ ಕಚೇರಿ ಹಾಗೂ ಶಾಖಾ ಕಚೇರಿ, ಶಂಕರಪುರದಲ್ಲಿನ ಗುರು ಸಾರ್ವಭೌಮ ಸೌಹಾರ್ದ ಸಹಕಾರ ಸಂಘದ ಕಚೇರಿ, ಬ್ಯಾಂಕ್‌ ಅಧ್ಯಕ್ಷ ಡಾ.ಕೆ.ರಾಮಕೃಷ್ಣ ಅವರ ಬಸವನಗುಡಿಯಲ್ಲಿನ ನಿವಾಸ, ಬ್ಯಾಂಕ್‌ನ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಾಸುದೇವಮಯ್ಯ ಅವರ ಚಿಕ್ಕಲ್ಲಸಂದ್ರದಲ್ಲಿನ ನಿವಾಸದ ಮೇಲೆ ದಾಳಿ ನಡೆಸಿ ಅಪಾರ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತಡರಾತ್ರಿವರೆಗೆ ಶೋಧ ಕಾರ್ಯ ನಡೆಯಲಾಗಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತನಿಖೆಯನ್ನು ಮುಂದುವರಿಸಲಾಗಿದೆ.

ಕೊರೋನಾ ಮಹಾಸ್ಫೋಟ: ಬೆಂಗಳೂರಿಗರೇ ಎಚ್ಚರ, ಕ್ವಾರಂಟೈನ್‌ಗೆ ಜಾಗವೇ ಸಿಗ್ತಿಲ್ಲ..!

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಸಾವಿರಾರು ಗ್ರಾಹಕರು ಕೋಟ್ಯಂತರ ರು. ಹೂಡಿಕೆ ಮಾಡಿದ್ದಾರೆ. ಬ್ಯಾಂಕ್‌ನ ಕೆಲವು ಅಧಿಕಾರಿ, ಸಿಬ್ಬಂದಿ ಸೇರಿ ಗ್ರಾಹಕರ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವುದಲ್ಲದೇ, ದುರುಪಯೋಗವನ್ನು ಸಹ ಮಾಡಿಕೊಳ್ಳಲಾಗಿದೆ. ಒಟ್ಟು 1400 ಕೋಟಿ ರು. ಅವ್ಯವಹಾರ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಲ್ಪನಿಕ ಗ್ರಾಹಕರಿಗೆ 150 ಕೋಟಿ ಸಾಲ

ರಿಸರ್ವ ಬ್ಯಾಂಕ್‌ ನಿಯಮಗಳಿಗೆ ವಿರುದ್ಧವಾಗಿ ಬ್ಯಾಂಕ್‌ ಅಧಿಕಾರಿಗಳು ಮತ್ತು ಸಿಬ್ಬಂದಿ, ಕೃತಕ ಠೇವಣಿಗಳನ್ನು ಸೃಷ್ಟಿ ಮಾಡಿ ಸುಮಾರು 150 ಕೋಟಿ ರು. ಮೊತ್ತದ ಸಾಲವನ್ನು 60 ಕಾಲ್ಪನಿಕ ಗ್ರಾಹಕರಿಗೆ ಮಂಜೂರು ಮಾಡಿದ್ದಾರೆ. ಸಾರ್ವಜನಿಕರು ಖಾತೆ ತೆರೆಯುವ ವೇಳೆ ನೀಡಿದ ಬ್ರೌಷರ್‌ನಲ್ಲಿ ಎನ್‌ಪಿಎ (ವಸೂಲಾಗದ ಆಸ್ತಿ) ಶೇ.1ಕ್ಕಿಂತ ಕಡಿಮೆ ಇದ್ದು, ನಿರಂತರವಾಗಿ ಶೇ.15ರಿಂದ ಶೇ.16ರಷ್ಟುಎನ್‌ಪಿಎ ಇರುವುದಾಗಿ ತಿಳಿಸಿದ್ದಾರೆ. ಆದರೆ, ಸಹಕಾರ ಸಂಘಗಳ ವರದಿಯಿಂದ ಬ್ಯಾಂಕ್‌ನ ಎನ್‌ಪಿಎ ಶೇ.25ರಿಂದ 30ರಷ್ಟುಇರುವುದು ಕಂಡು ಬಂದಿದೆ. ಸಹಕಾರ ಇಲಾಖೆಯ ರಿಜಿಸ್ಟಾರ್‌ ವರದಿ ಮತ್ತು ರಿಸವ್‌ರ್‍ ಬ್ಯಾಂಕ್‌ ನಡೆಸಿರುವ ವಿಚಾರಣಾ ವರದಿಯಿಂದ ಅವ್ಯವಹಾರ ನಡೆಸಿರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.

ಅಧ್ಯಕ್ಷ ನಾಪತ್ತೆ

ಬ್ಯಾಂಕ್‌ ಅಧ್ಯಕ್ಷ ಡಾ.ಕೆ.ರಾಮಕೃಷ್ಣ ಮತ್ತು ನಿವೃತ್ತ ಸಿಇಓ ವಾಸುದೇವಮಯ್ಯ ಸೇರಿದಂತೆ ಕೆಲವರು ನಾಪತ್ತೆಯಾಗಿದ್ದಾರೆ. ಆರೋಪಿಗಳ ಮನೆಗೆ ತೆರಳಿದಾಗ ಯಾರು ಇರಲಿಲ್ಲ. ಅಲ್ಲದೇ, ಬ್ಯಾಂಕ್‌ ವತಿಯಿಂದ ದಾಖಲೆಗಳಿಲ್ಲದೆ ಕೋಟ್ಯಂತರ ರು. ಸಾಲ ನೀಡಲಾಗಿದೆ. ಬ್ಯಾಂಕ್‌ ನಷ್ಟದಲ್ಲಿದ್ದರೂ ಠೇವಣಿದಾರರ ನಂಬಿಕೆ ಗಳಿಸಲು ಕೋಟ್ಯಂತರ ರು. ಲಾಭದಲ್ಲಿದೆ ಎಂದು ದಾಖಲೆಗಳನ್ನು ತೋರಿಸಲಾಗಿದೆ. ಸದ್ಯಕ್ಕೆ 2,400 ಕೋಟಿ ರು. ಠೇವಣಿ ಸಂಗ್ರಹಿಸಲಾಗಿದೆ. ಈ ಪೈಕಿ ಸಂಘ-ಸಂಸ್ಥೆಗಳದ್ದೇ 650 ಕೋಟಿ ರು. ಠೇವಣಿ ಇರುವುದು ತಿಳಿದು ಬಂದಿದೆ ಎಂದಿದ್ದಾರೆ.