Asianet Suvarna News Asianet Suvarna News

22 ಲಕ್ಷ ರೈತರಿಗೆ 14 ಸಾವಿರ ಕೋಟಿ ಸಾಲ

ರಾಜ್ಯದ 22 ಲಕ್ಷ ರೈತರಿಗೆ 14979.73 ಕೋಟಿ ರು. ಸಾಲ ವಿತರಣೆ ಮಾಡಲಾಗಿದ್ದು, ಶೇ.90.56ರಷ್ಟುಗುರಿ ಸಾಧನೆ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದ್ದಾರೆ.
 

14 Thousand Crore Loan Distributes To  22 Lakh Farmers snr
Author
Bengaluru, First Published Mar 3, 2021, 8:57 AM IST

ಬೆಂಗಳೂರು (ಫೆ.03):  ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್‌ ಸೇರಿದಂತೆ ವಿವಿಧ ಸಹಕಾರಿ ಬ್ಯಾಂಕುಗಳ ಮೂಲಕ ರಾಜ್ಯದ 22 ಲಕ್ಷ ರೈತರಿಗೆ 14979.73 ಕೋಟಿ ರು. ಸಾಲ ವಿತರಣೆ ಮಾಡಲಾಗಿದ್ದು, ಶೇ.90.56ರಷ್ಟುಗುರಿ ಸಾಧನೆ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಡಿಸಿಸಿ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.25ರವರೆಗೆ 21.64 ಲಕ್ಷ ರೈತರಿಗೆ 14179.22 ಕೋಟಿ ರು., 36 ಸಾವಿರ ರೈತರಿಗೆ 800.51 ಕೋಟಿ ರು.ಗಳ ಮಧ್ಯಮಾವಧಿ/ ದೀರ್ಘಾವಧಿ ಸಾಲ ವಿತರಣೆ ಮಾಡಲಾಗಿದೆ. ಅಲ್ಪಾವಧಿ ಸಾಲದ ಗುರಿ ಶೇ.107ರಷ್ಟು, ಮಧ್ಯಮಾವಧಿ ಸಾಲ ಶೇ.111, ದೀರ್ಘಾವಧಿ ಸಾಲ ಶೇ.76ರಷ್ಟುವಿತರಣೆ ಮಾಡಲಾಗಿದೆ ಎಂದರು.

ಹೈನುಗಾರಿಕೆ/ ಮೀನುಗಾರರಿಗೆ ದುಡಿಯುವ ಬಂಡವಾಳಕ್ಕಾಗಿ 57,185 ರೈತರಿಗೆ 106 ಕೋಟಿ ರು. (ಶೇ.100 ) ಹಾಗೂ 116 ಮೀನುಗಾರರಿಗೆ 59 ಲಕ್ಷ ರು. ಸಾಲ ವಿತರಿಸಲಾಗಿದೆ. ಸ್ವ ಸಹಾಯ ಗುಂಪುಗಳಿಗೆ 2020-21ನೇ ಸಾಲಿನಲ್ಲಿ 21 ಸಾವಿರ ಗುಂಪುಗಳಿಗೆ 754.39 ಕೋಟಿ ರು. ಸಾಲ ವಿತರಿಸಲಾಗಿದ್ದು, ಶೇ.75ರಷ್ಟುಗುರಿ ಸಾಧಿಸಲಾಗಿದೆ.

ತಿರುಪತಿ ತಿಮ್ಮಪ್ಪನದು ಈ ವರ್ಷ 2938 ಕೋಟಿ ರೂ ಬಜೆಟ್‌! .

‘ಬಡವರ ಬಂಧು’ ಯೋಜನೆಯಡಿ 25 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿ ಹೊಂದಲಾಗಿದ್ದು, ಈ ಪೈಕಿ 8,778 ಬೀದಿ ವ್ಯಾಪಾರಿಗಳಿಗೆ 7.69 ಕೋಟಿ ರು.ಗಳನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸಲಾಗಿದೆ. ‘ಕಾಯಕ’ ಯೋಜನೆಯಡಿ 2500 ಸ್ವ ಸಹಾಯ ಗುಂಪುಗಳಿಗೆ ಸಾಲ ವಿತರಿಸುವ ಗುರಿ ಹೊಂದಿದ್ದು, ಈ ಪೈಕಿ 245 ಗುಂಪುಗಳಿಗೆ 10.81 ಕೋಟಿ ರು. ಸಾಲ ನೀಡಲಾಗಿದೆ. ಮಾಚ್‌ರ್‍ ಅಂತ್ಯದೊಳಗೆ ಶೇ.100ರಷ್ಟುಸಾಲ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

ಮೊದಲ ಸ್ಥಾನದಲ್ಲಿ ಕರ್ನಾಟಕ:  ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆ (ಅಗ್ರಿ ಇನ್‌ಫ್ರಾ ಫಂಡ್‌) ಅನುಷ್ಠಾನದಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 949 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್‌) 355.84 ಕೋಟಿ ರು.ಗಳ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು, ನಬಾರ್ಡ್‌ 614 ಸಂಘಗಳಿಗೆ 198 ಕೋಟಿ ರು. ಸಾಲ ಮಂಜೂರು ಮಾಡಿದೆ. ಸಾಲ ಮಂಜೂರಾದ ಪ್ರತಿ ಪ್ಯಾಕ್ಸ್‌ಗೆ ಕೇಂದ್ರ ಸರ್ಕಾರ ಎರಡು ಕೋಟಿ ರು. ನೀಡಲಿದೆ ಎಂದು ಸಚಿವ ಸೋಮಶೇಖರ್‌ ತಿಳಿಸಿದರು.

ಸಕ್ಕರೆ ಕಾರ್ಖಾನೆ ಸಾಲ ವಸೂಲಿಗೆ ಕ್ರಮ:  ಡಿಸಿಸಿ ಬ್ಯಾಂಕುಗಳಿಗೆ 133 ಸಕ್ಕರೆ ಕಾರ್ಖಾನೆಗಳಿಂದ 5502 ಕೋಟಿ ರು. ಸಾಲದ ಹೊರ ಬಾಕಿ ಇದೆ. 2020-21ನೇ ಸಾಲಿನಲ್ಲಿ 538 ಕೋಟಿ ರು. ಸುಸ್ತಿಯಾಗಿದ್ದು, ಬೆಳಗಾವಿ, ಶಿವಮೊಗ್ಗ, ವಿಜಯಪುರ ಸೇರಿದಂತೆ ಏಳೆಂಟು ಡಿಸಿಸಿ ಬ್ಯಾಂಕುಗಳು ಹೆಚ್ಚಿನ ಸಾಲ ನೀಡಿವೆ. ಯಾವುದೇ ಮುಲಾಜಿಲ್ಲದೆ ಅದನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳುವಂತೆ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿ ಪ್ರಕಾಶ್‌, ಕಲಬುರಗಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಾಜಕುಮಾರ್‌ ತೇಲ್ಕೂರು ಮುಂತಾದವರು ಉಪಸ್ಥಿತರಿದ್ದರು.

Follow Us:
Download App:
  • android
  • ios