ಲಿಂಗಾಯತರ ಕಡೆಗಣನೆ ಎಂಬ ಶಾಮನೂರು ಹೇಳಿಕೆ ಸುಳ್ಳೆನ್ನುವ ಜಾತಿಪಟ್ಟಿ ಬಿಡುಗಡೆ; ಯಾವ ಜಾತಿಗೆ ಎಷ್ಟು ಹುದ್ದೆ ಇಲ್ಲಿವೆ ನೋಡಿ!
ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಕಡಗಣನೆ ಕುರಿತಾಗಿ ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿದ ಹೇಳಿಕೆಗೆ ಸ್ವಪಕ್ಷದವರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಶಾಸಕ ಬಸವರಾಜ ರಾಯರೆಡ್ಡಿ ಒಂದು ಹೆಜ್ಜೆ ಮುಂದೆ ಹೋಗಿ, ಶಾಮನೂರು ಅವರ ಹೇಳಿಕೆ ಸುಳ್ಳು ಎಂದು ಸಾಬೀತು ಪಡಿಸಲು ಜಿಲ್ಲಾಧಿಕಾರಿ ಸೇರಿದಂತೆ ಇನ್ನಿತರ ಹುದ್ದೆಯಲ್ಲಿರುವ ಅಧಿಕಾರಿಗಳ ಜಾತಿವಾರು ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು (ಅ.4) : ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಕಡಗಣನೆ ಕುರಿತಾಗಿ ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿದ ಹೇಳಿಕೆಗೆ ಸ್ವಪಕ್ಷದವರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಶಾಸಕ ಬಸವರಾಜ ರಾಯರೆಡ್ಡಿ ಒಂದು ಹೆಜ್ಜೆ ಮುಂದೆ ಹೋಗಿ, ಶಾಮನೂರು ಅವರ ಹೇಳಿಕೆ ಸುಳ್ಳು ಎಂದು ಸಾಬೀತು ಪಡಿಸಲು ಜಿಲ್ಲಾಧಿಕಾರಿ ಸೇರಿದಂತೆ ಇನ್ನಿತರ ಹುದ್ದೆಯಲ್ಲಿರುವ ಅಧಿಕಾರಿಗಳ ಜಾತಿವಾರು ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯ ಪ್ರಕಾರ ಲಿಂಗಾಯತ ಸಮುದಾಯಕ್ಕೆ ಸೇರಿದ 14 ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಲಿಂಗಾಯತ ಕಡೆಗಣನೆ ಕುರಿತ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ವಿರೋಧಿಸಿದ ಅವರು, ಸರ್ಕಾರವನ್ನು ಜಾತಿ ಆಧಾರದಲ್ಲಿ ನಡೆಸಲಾಗುವುದಿಲ್ಲ. ಅಲ್ಲದೆ, ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿಕೊಂಡು ಬಂದವರಿಗೆ ಸ್ವಾಗತ: ಸತೀಶ ಜಾರಕಿಹೊಳಿ
ಮಂಗಳವಾರ ವಿಧಾನಸೌಧಲ್ಲಿ ಅಧಿಕಾರಿಗಳ ಜಾತಿವಾರು ಪಟ್ಟಿ ಬಿಡುಗಡೆ ಮಾಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣನೆ ಮಾಡಲಾಗಿದೆ ಎಂಬುದು ಸುಳ್ಳು. ಯಾವುದೇ ಸರ್ಕಾರ ಜಾತಿ ಆಧಾರದಲ್ಲಿ ನಡೆಸಲು ಸಾಧ್ಯವಿಲ್ಲ. ಅಧಿಕಾರಿಗಳ ಅರ್ಹತೆ ಮೇರೆಗೆ ಅವರನ್ನು ಹುದ್ದೆಗಳಿಗೆ ನಿಯೋಜಿಸಲಾಗುತ್ತದೆ. ಆದರೆ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಪ್ಪಾಗಿ ಹೇಳಿಕೆ ನೀಡುತ್ತಿದ್ದು, ಅದು ಸರಿಯಲ್ಲ ಎಂದರು.
ಮಂತ್ರಿ ಮಂಡಲ ರಚನೆ ಸಂದರ್ಭದಲ್ಲಿ ಜಾತಿ, ಪ್ರಾದೇಶಿಕತೆಯನ್ನಾಧರಿಸಿ ಸಚಿವರನ್ನು ನೇಮಿಸಲಾಗಿದೆ. ಅದು ಅನಿವಾರ್ಯ ಕೂಡ. ಸಚಿವರಾಗಲು ಶಾಸಕರಾಗಿದ್ದರೆ ಸಾಕು ಯಾವುದೇ ಅರ್ಹತೆ ಬೇಡ. ಆದರೆ, ಅಧಿಕಾರಿಗಳನ್ನು ಜಾತಿ ಆಧಾರದಲ್ಲಿ ನೇಮಿಸಲು ಮುಂದಾದರೆ ಅನರ್ಹರು ಆಯಕಟ್ಟಿನ ಜಾಗಕ್ಕೆ ಬಂದು ಕೂರುತ್ತಾರೆ. ಅದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಸೂಚ್ಯವಾಗಿ ಹೇಳಿದರು.
14 ಲಿಂಗಾಯತರಿಗೆ ಉನ್ನತ ಹುದ್ದೆ:
ರಾಜ್ಯದಲ್ಲಿ ಒಬ್ಬೇ ಒಬ್ಬ ಲಿಂಗಾಯದ ಐಎಎಸ್ ಅಧಿಕಾರಿಯೂ ಜಿಲ್ಲಾಧಿಕಾರಿಯಾಗಿ ನೇಮಕವಾಗಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ 3 ಜಿಲ್ಲಾಧಿಕಾರಿಗಳು ಲಿಂಗಾಯತರಿದ್ದಾರೆ. 7 ಮಂದಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, 4 ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅದರ ಜತೆಗೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ 13 ಮಂದಿ ಕುಲಪತಿಗಳು ಲಿಂಗಾಯತರಾಗಿದ್ದಾರೆ. ಹೀಗಿರುವಾಗ ಉನ್ನತ ಹುದ್ದೆಯಲ್ಲಿ ಲಿಂಗಾಯತರಿಲ್ಲ ಎನ್ನುವುದು ಸರಿಯಲ್ಲ. ಶಾಮನೂರು ಶಿವಶಂಕರಪ್ಪ ಅವರಿಗೆ ಮಾಹಿತಿ ಕೊರತೆಯಿದ್ದು, ಅದಕ್ಕಾಗಿ ಈ ರೀತಿ ಹೇಳಿರಬಹುದು ಎಂದು ಹೇಳಿದರು.
ನಾಗೇಂದ್ರ ಆಕ್ಷೇಪ:
ಸಚಿವ ಬಿ. ನಾಗೇಂದ್ರ ಕೂಡ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ವಿರೋಧಿಸಿದ್ದು, ಸರ್ಕಾರವನ್ನು ಜಾತಿ ಆಧಾರದಲ್ಲಿ ನಡೆಸಲಾಗದು. ಅಧಿಕಾರಿಗಳ ನಡುವೆ ಜಾತಿ ತರಲಾಗದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಾರಿ ಕಡಿಮೆ ವೆಚ್ಚದಲ್ಲಿ ಸಾಂಪ್ರದಾಯಿಕವಾಗಿ ದಸರಾ ಆಚರಣೆ: ಸಚಿವ ಎಚ್‌ಸಿ ಮಹದೇವಪ್ಪ
ಪ್ರಬಲ ಸಮುದಾಯದವರ ಪೈಕಿ ಲಿಂಗಾಯತರಿಗೆ ಆದ್ಯತೆ
ರಾಜ್ಯದಲ್ಲಿನ 31 ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ರ್‍ಯಾಂಕ್‌ನ ಹುದ್ದೆಯ 108 ಅಧಿಕಾರಿಗಳಿದ್ದಾರೆ. ಅವರ ಪೈಕಿ ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದವರು 28 ಆಗಿದ್ದರೆ, ಒಬಿಸಿ ಸಮುದಾಯದ 17 ಮಂದಿ, ಲಿಂಗಾಯತ ಸಮುದಾಯದ 14 (ಈ ಪೈಕಿ ಮೂವರು ಜಿಲ್ಲಾಧಿಕಾರಿಗಳು) ಒಕ್ಕಲಿಗ ಸಮುದಾಯದ 15, ಕುರುಬ ಸಮುದಾಯದ 8 ಮಂದಿ ಅಧಿಕಾರಿಗಳು ಇದ್ದಾರೆ. ಇವರಲ್ಲದೆ, ರಜಪೂತ, ಮರಾಠ, ಜೈನ, ಬ್ರಾಹ್ಮಣ ಸೇರಿದಂತೆ ಇತರೆ ಜಾತಿಗಳ 26 ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪಟ್ಟಿ ಬಿಡುಗಡೆ ಮಾಡಿದ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು
- ಲಿಂಗಾಯತ: 03
- ಒಕ್ಕಲಿಗ: 06
- ಕುರುಬ: 02
- ಎಸ್ಸಿ/ಎಸ್ಟಿ: 07
- ಒಬಿಸಿ: 04
- ಇತರೆ: 09
ಒಟ್ಟು: 31
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ
- ಲಿಂಗಾಯತ: 4
- ಒಕ್ಕಲಿಗ: 3
- ಕುರುಬ: 1
- ಎಸ್ಸಿ/ಎಸ್ಟಿ: 10
- ಒಬಿಸಿ: 4
- ಇತರೆ: 9
- ಒಟ್ಟು: 31
ಪೊಲೀಸ್ ವರಿಷ್ಠಾಧಿಕಾರಿಗಳು:
- ಲಿಂಗಾಯತ: 07
- ಒಕ್ಕಲಿಗ:6
- ಕುರುಬ: 5
- ಎಸ್ಸಿ/ಎಸ್ಟಿ: 11
- ಒಬಿಸಿ: 9
- ಇತರೆ: 8
- ಒಟ್ಟು: 45