Asianet Suvarna News Asianet Suvarna News

ಮಾತುಕತೆ ಸಫಲ: ರಾಜ್ಯಕ್ಕೆ 1200 ಮೆಟ್ರಿಕ್‌ ಟನ್‌ ಆಕ್ಸಿಜನ್ ಹಂಚಿಕೆ

* ಕೇಂದ್ರದಿಂದ ರಾಜ್ಯಕ್ಕೆ 1200 ಮೆಟ್ರಿಕ್‌ ಟನ್‌ ದ್ರವೀಕೃತ ಆಮ್ಲಜನಕ ಹಂಚಿಕೆ
* ರಾಜ್ಯದಲ್ಲಿನ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಕುರಿತ ಸಭೆ ಬಳಿಕ ಜಗದೀಶ್‌ ಶೆಟ್ಟರ್‌ ಹೇಳಿಕೆ
* ರಾಜ್ಯವನ್ನು ಆಮ್ಲಜನಕ ಉತ್ಪಾದನೆಯಲ್ಲಿ ಸ್ವಾವಲಂಬಿಗೊಳಿಸಲು ಮುಂದಾದ ಸರ್ಕಾರ

1200-metric-ton liquefied oxygen to Karnataka from center Says shettar rbj
Author
Bengaluru, First Published May 26, 2021, 3:58 PM IST

ಬೆಂಗಳೂರು, (ಮೇ.26): ರಾಜ್ಯವನ್ನು ಆಕ್ಸಿಜನ್ ಉತ್ಪಾದನೆಯಲ್ಲಿ ಸ್ವಾವಲಂಬಿಗೊಳಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯಿಂದ ನೂತನ ಆಮ್ಲಜನಕ ಘಟಕಗಳ ಉತ್ಪಾದನೆ ಪ್ರೋತ್ಸಾಹಿಸಲು ಉತ್ತೇಜನ ಯೋಜನೆಯನ್ನು ತರಲು ಚಿಂತನೆ ನಡೆದಿದೆ ಎಂದು ರಾಜ್ಯದ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಉಸ್ತುವಾರಿ ಮತ್ತು ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

ಇಂದು (ಬುಧವಾರ) ವಿಧಾನಸೌಧದಲ್ಲಿ ರಾಜ್ಯದಲ್ಲಿನ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ ಸಚಿವ ಜಗದೀಶ್‌ ಶೆಟ್ಟರ್‌ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಈ ವಿಷಯ ತಿಳಿಸಿದರು.

ಬೆಂಗ್ಳೂರು ತಲುಪಿದ 7ನೇ ಆಕ್ಸಿಜನ್ ಎಕ್ಸ್‌ಪ್ರೆಸ್: ಮಹಿಳೆಯರದೇ ಸಾರಥ್ಯ

ಕೇಂದ್ರ ಸರಕಾರದೊಂದಿಗೆ ನಿರಂತರ ಮಾತುಕತೆ ಸಫಲವಾಗಿದ್ದು, ರಾಜ್ಯಕ್ಕೆ 1200 ಮೆಟ್ರಿಕ್‌ ಟನ್‌ ದ್ರವೀಕೃತ ಆಮ್ಲಜನಕವನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಉಸ್ತುವಾರಿ ವಹಿಸಿಕೊಂಡ ನಂತರ ರಾಜ್ಯಕ್ಕೆ ಹೆಚ್ಚಿನ ಆಮ್ಲಜನಕದ ಅವಶ್ಯಕತೆ ಇದೆ ಎನ್ನುವುದರ ಬಗ್ಗೆ ಕೇಂದ್ರ ಸರಕಾರ ಹಾಗೂ ಕೇಂದ್ರ ಸಚಿವರಾದ ಪಿಯೂಶ್‌ ಗೋಯೆಲ್‌, ಪ್ರಹ್ಲಾದ್‌ ಜೋಷಿ ಮತ್ತು ಸದಾನಂದಗೌಡ ಅವರೊಂದಿಗೆ ನಿರಂತರ ಸಂಪರ್ಕ ಮತ್ತು ಮಾತುಕತೆಯನ್ನು ನಡೆಸಿದ್ದೆವು. ಇದೇ ವೇಳೆ, ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲಿಯೇ ಬಳಸಿಕೊಳ್ಳುವಂತೆ ಅನುವು ಕೂಡಾ ಮಾಡಿ ಕೊಡಲಾಗಿದೆ ಎಂದು ಹೇಳಿದರು.

1200 ಎಂ.ಟಿ ದ್ರವೀಕೃತ ಆಮ್ಲಜನಕ ನಿಗದಿಗೊಳಿಸಿರುವಲ್ಲಿ ರಾಜ್ಯದಿಂದ 830 ಎಂ.ಟಿ, ರಾಜ್ಯದಲ್ಲಿನ ಎಂ.ಎಸ್‌.ಎಂ.ಇ ಪಿಎಸ್‌ಎ 60 ಎಂ.ಟಿ, 240 ಎಂ.ಟಿ ಯನ್ನು ಮಹರಾಷ್ಟ್ರ ಹಾಗೂ 70 ಎಂ.ಟಿ ಆಮ್ಲಜನಕವನ್ನು ಒರಿಸ್ಸಾದಿಂದ ಒದಗಿಸಲು ಆದೇಶ ಹೊರಡಿಸಲಾಗಿದೆ. ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದಲ್ಲಿಯೇ ಬಳಸಿಕೊಳ್ಳಲು ಅನುಮತಿ ನೀಡಿರುವುದರಿಂದ ಸಾಗಾಣಿಕಾ ಸಮಯ ಉಳಿಯಲಿದೆ ಎಂದರು.

Follow Us:
Download App:
  • android
  • ios