ಬೆಂಗಳೂರು(ಡಿ.21): ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ ತೀವ್ರ ಕಾವು ಹತ್ತಿಸಿರುವ ಗ್ರಾಮ ಪಂಚಾಯಿತಿಗಳ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆ ಬಿದ್ದಿದೆ. ಸೋಮವಾರ ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ಕೈಗೊಳ್ಳಲಿದ್ದು, ಚುನಾವಣಾ ಕಣ ಮತ್ತಷ್ಟುರಂಗೇರಲಿದೆ.

ಮಂಗಳವಾರ (ಡಿ.22) ರಾಜ್ಯಾದ್ಯಂತ 3,019 ಗ್ರಾಮ ಪಂಚಾಯ್ತಿಗಳಲ್ಲಿನ 43,238 ಸ್ಥಾನಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅಗತ್ಯ ಇದ್ದರೆ ಗುರುವಾರ ನಡೆಯಲಿದ್ದು, ಡಿ.30ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

43,238 ಸ್ಥಾನಗಳಿಗೆ ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಒಟ್ಟು 1,21,760 ಮಂದಿ ಸ್ಪರ್ಧಿಸಿದ್ದು, ಈ ಪೈಕಿ 4,377 ಮಂದಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 1,17,383 ಮಂದಿ ಕಣದಲ್ಲಿ ಉಳಿದಿದ್ದು ತಮ್ಮ ಅದೃಷ್ಟಪರೀಕ್ಷೆಗೆ ನಿಂತಿದ್ದಾರೆ. ಸೋಮವಾರ ನಡೆಯಲಿರುವ ಮನೆ-ಮನೆ ಪ್ರಚಾರವೇ ನಿರ್ಣಾಯಕವಾಗಿರುವುದರಿಂದ ಸೋಮವಾರದ ಪ್ರಚಾರ ಕುತೂಹಲ ಕೆರಳಿಸಿದೆ. ಉದ್ಯೋಗ, ಶಿಕ್ಷಣ ಮತ್ತಿತರ ಅಗತ್ಯಗಳಿಗಾಗಿ ಸ್ವಗ್ರಾಮ ತೊರೆದಿದ್ದ ಬಹುತೇಕರು ಮತದಾನದ ಹಕ್ಕು ಚಲಾಯಿಸಲು ಗ್ರಾಮಗಳಿಗೆ ವಾಪಸಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಗಳು ಕಳೆಕಟ್ಟಿವೆ.

ರಜೆ ಘೋಷಣೆ, ಗ್ರಾಮಗಳತ್ತ ಮರಳಿದ ಮತದಾರ:

ಮೊದಲ ಹಂತದ ಚುನಾವಣೆಗಾಗಿ ಅರ್ಹ ಮತದಾರರಿಗೆ ರಾಜ್ಯ ಸರ್ಕಾರವು ಡಿ.22ರಂದು ಮಂಗಳವಾರ ವೇತನ ಸಹಿತ ರಜೆ ನೀಡುವಂತೆ ಆದೇಶ ಹೊರಡಿಸಿದೆ.

ಇದರಂತೆ ತುರ್ತು ಸೇವೆಯಲ್ಲಿ ಇರುವವರನ್ನು ಹೊರತುಪಡಿಸಿ ಗ್ರಾಮ ಪಂಚಾಯತ್‌ ಮತ ಕ್ಷೇತ್ರಗಳ ಮತದಾರರಾದ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳ ಉದ್ಯೋಗಿಗಳು, ಉಳಿದ ಕೈಗಾರಿಕಾ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆ ಸೇರಿ ಔದ್ಯಮಿಕ ಸಂಸ್ಥೆಗಳಲ್ಲಿ ಖಾಯಂ ಅಥವಾ ದಿನಗೂಲಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವವರಿಗೆ ರಜೆ ನೀಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಸ್ವಂತ ಊರುಗಳಿಂದ ದುಡಿಮೆ, ಶಿಕ್ಷಣ ಮತ್ತಿತರ ಕಾರಣಗಳಿಗೆ ದೂರದ ಊರುಗಳಲ್ಲಿ ನೆಲೆಸಿರುವ ಬಹುತೇಕ ಮತದಾರರು ಸೋಮವಾರದಿಂದಲೇ ಸ್ವಂತ ಊರುಗಳಿಗೆ ಮರಳುತ್ತಿದ್ದಾರೆ.

ಪೊಲೀಸರ ಬಿಗಿ ಭದ್ರತೆ:

ಭಾನುವಾರ ಸಂಜೆ ಬಹಿರಂಗ ಪ್ರಚಾರ ಅಂತಿಮಗೊಂಡಿರುವ ಹಿನ್ನೆಲೆಯನ್ನು ಅಭ್ಯರ್ಥಿಗಳನ್ನು ಹೊರತು ಪಡಿಸಿ ಇನ್ನುಳಿದವರು ಕ್ಷೇತ್ರದಿಂದ ಹೊರ ಹೋಗುವಂತೆ ಚುನಾವಣೆ ಆಯೋಗವು ಸೂಚಿಸಿದೆ. ಮತಕ್ಷೇತ್ರದಲ್ಲಿ ಆಯೋಗದ ಸಿಬ್ಬಂದಿ ಓಡಾಟ ನಡೆಸಿದ್ದು, ಕ್ಷೇತ್ರಕ್ಕೆ ಸಂಬಂಧಪಡದವರು ಯಾರಾದರೂ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.

ಇನ್ನು ಚುನಾವಣೆ ನಡೆಯುತ್ತಿರುವ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟವನ್ನು ಸಹ ನಿಷೇಧಿಸಲಾಗಿದೆ. ಅಕ್ರಮ ಮದ್ಯ ಸಾಗಾಣೆಯಾಗದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಗಡಿಭಾಗದಲ್ಲಿರುವ ಗ್ರಾಮಗಳಲ್ಲಿ ಪೊಲೀಸರು ಕಣ್ಗಾವಲು ಹಾಕಿದ್ದಾರೆ. ಜತೆಗೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

11,935 ಚುನಾವಣಾಧಿಕಾರಿಗಳ ನೇಮಕ:

ಚುನಾವಣೆ ಮತದಾನ ಪ್ರಕ್ರಿಯೆಗಾಗಿ 5847 ಚುನಾವಣಾಧಿಕಾರಿ ಮತ್ತು 6085 ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಸೋಮವಾರ ಎಲ್ಲ ಸಿಬ್ಬಂದಿ ತಮಗೆ ನಿಯೋಜನೆ ಮಾಡಿರುವ ಮತಗಟ್ಟೆಗಳಿಗೆ ತೆರಳಲಿದ್ದಾರೆ. ಮತಗಟ್ಟೆಗಳಲ್ಲಿ ಸಿಬ್ಬಂದಿ ಕೊರತೆ ಆಗದಂತೆ ಎಲ್ಲಾ ರೀತಿಯಲ್ಲೂ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.