ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ, ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುವ ಕೇಂದ್ರ: ಸಚಿವ ಸುಧಾಕರ್‌

ಬೆಂಗಳೂರು(ಡಿ.13):  ನಗರ ಪ್ರದೇಶದ ಬಡ ಜನರ ಆರೋಗ್ಯ ಕಾಳಜಿಯಿಂದ ರಾಜ್ಯ ಸರ್ಕಾರದಿಂದ ಆರಂಭಿಸುತ್ತಿರುವ ನಮ್ಮ ಕ್ಲಿನಿಕ್‌ಗಳು ಡಿ.14 ರಂದು (ಬುಧವಾರ) ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಲೋಕಾರ್ಪಣೆಯಾಗಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. ಸೋಮವಾರ ಆರೋಗ್ಯ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬುಧವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಉದ್ಘಾಟಿಸಲಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ 114 ಕ್ಲಿನಿಕ್‌ಗಳು ಏಕಕಾಲಕ್ಕೆ ಲೋಕಾರ್ಪಣೆಯಾಗಲಿವೆ. ರಾಜ್ಯದಲ್ಲಿ ಒಟ್ಟು 438 ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲು ಸರ್ಕಾರ ಯೋಜನೆ ರೂಪಿಸಿದ್ದು, ಜನವರಿ ಅಂತ್ಯಕ್ಕೆ ಎಲ್ಲವೂ ಕಾರ್ಯನಿರ್ವಹಿಸಲಿವೆ ಎಂದರು.

10 ರಿಂದ 20 ಸಾವಿರ ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 243 ನಮ್ಮ ಕ್ಲಿನಿಕ್‌ಗಳು ಕಾರ್ಯಾಚರಣೆ ಮಾಡಲಿದ್ದು, ಜನವರಿ ಎರಡನೇ ವಾರದೊಳಗೆ ಕನಿಷ್ಠ 150 ಕ್ಲಿನಿಕ್‌ಗಳು ಜನರ ಸೇವೆಗೆ ಲಭ್ಯವಿರಲಿವೆ. ಈ ಕ್ಲಿನಿಕ್‌ಗಳಿಂದ ದುರ್ಬಲ ವರ್ಗದವರಿಗೆ, ಶ್ರಮಕರಿಗೆ, ಕೂಲಿ ಕಾರ್ಮಿಕರಿಗೆ ಸೇರಿದಂತೆ ಹಲವರಿಗೆ ಉಚಿತ ಆರೋಗ್ಯ ಸೇವೆ ಸಿಗಲಿದೆ ಎಂದು ಹೇಳಿದರು.

ನಮ್ಮ ಕ್ಲಿನಿಕ್‌ಗೆ ವೈದ್ಯರ ಸೇವೆ ಕಡ್ಡಾಯ?

ಒಟ್ಟು 150 ಕೋಟಿ ರು. ಮೊತ್ತದ ಯೋಜನೆ ಇದಾಗಿದ್ದು ಬಹುತೇಕ ಕ್ಲಿನಿಕ್‌ಗಳು ಸರ್ಕಾರಿ ಕಟ್ಟಡಗಳಲ್ಲೇ ಕಾರ್ಯ ಆರಂಭಿಸಲಿವೆ. ಈಗಾಗಲೇ 300 ವೈದ್ಯರ ನೇಮಕವಾಗಿದ್ದು, ಕೆಲವೆಡೆ ವೈದ್ಯರ ಕೊರತೆ ಇದೆ. ಅಂತಹ ಕಡೆ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು ಕಡ್ಡಾಯ ಗ್ರಾಮೀಣ ಸೇವೆಯಲ್ಲಿರುವ 80-100 ವೈದ್ಯರನ್ನು ಅಲ್ಲಿಗೆ ನೇಮಿಸಲಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಸಮಯದಲ್ಲಿ 100ಕ್ಕೂ ಹೆಚ್ಚು ಕ್ಲಿನಿಕ್‌ಗಳು ಉದ್ಘಾಟನೆ ಆಗುತ್ತಿರುವುದು ಸಾರ್ವಕಾಲಿಕ ದಾಖಲೆಯಾಗಲಿದೆ ಎಂದು ಮಾಹಿತಿ ನೀಡಿದರು.

ಯಾವೆಲ್ಲಾ ಚಿಕಿತ್ಸೆ ಲಭ್ಯ?

ನಮ್ಮ ಕ್ಲಿನಿಕ್‌ಗಳಲ್ಲಿ 12 ರೀತಿಯ ಆರೋಗ್ಯ ಸೇವೆಗಳು ಲಭ್ಯ ಇರಲಿವೆ. ತಲಾ ಒಬ್ಬ ವೈದ್ಯಾಧಿಕಾರಿ, ನರ್ಸಿಂಗ್‌ ಸ್ಟಾಫ್‌, ಪ್ರಯೋಗಾಲಯ ತಂತ್ರಜ್ಞ, ಡಿ ದರ್ಜೆ ನೌಕರರು ಇರಲಿದ್ದಾರೆ. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಶಿಶುವಿನ ಸಮಗ್ರ ಆರೈಕೆ, ಬಾಲ್ಯ ಮತ್ತು ಹದಿಹರೆಯದವರಿಗೆ ಸೇವೆಗಳು, ಸಾರ್ವತ್ರಿಕ ಲಸಿಕಾಕರಣದ ಸೇವೆಗಳು, ಕುಟುಂಬ ಕಲ್ಯಾಣ ಗರ್ಭ ನಿರೋಧಕ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಸೇವೆ, ಮಧುಮೇಹ, ರಕ್ತದೊತ್ತಡಕ್ಕೆ ಚಿಕಿತ್ಸೆ , ಸಕ್ಕರೆ ಕಾಯಿಲೆ, ದೀರ್ಘಾವಧಿ ಕಾಯಿಲೆಗಳು, ಬಾಯಿ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್‌, ಬಾಯಿಯ ಆರೋಗ್ಯ ಸಮಸ್ಯೆಗಳು ಮತ್ತು ಸೇವೆಗಳು, ಕಣ್ಣಿನ ತಪಾಸಣೆ, ಮಾನಸಿಕ ಆರೋಗ್ಯ ಸಂಬಂಧಿಸಿದ ಚಿಕಿತ್ಸೆ ಲಭ್ಯವಿರಲಿದೆ. ವೃದ್ಧಾಪ್ಯ ಆರೈಕೆ, ಪ್ರಯೋಗಾಲಯ ಸೇವೆ, ತುರ್ತು ವೈದ್ಯಕೀಯ ಸೇವೆಗಳು, ಮಾಸಿಕ ಆರೋಗ್ಯ ತಪಾಸಣೆ ಸೇರಿದಂತೆ ಔಷಧಗಳು ಸಂಪೂರ್ಣ ಉಚಿತವಾಗಿರಲಿದೆ.

ನಮ್ಮ ಕ್ಲಿನಿಕ್‌ಗೆ ವೈದ್ಯಾಧಿಕಾರಿ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನಿತ್ಯ 9 ರಿಂದ 4.30ವರೆಗೂ ಸೇವೆ ಲಭ್ಯ:

14 ಪ್ರಯೋಗ ಶಾಲಾ ಪರೀಕ್ಷೆಗಳು ಲಭ್ಯವಿದ್ದು, ಟೆಲಿ ಕನ್ಸಲ್ಟೇಷನ್‌ ಸೌಲಭ್ಯವಿದೆ. ಸೋಮವಾರದಿಂದ ಶನಿವಾರ ತನಕ ಬೆಳಗ್ಗೆ 9 ರಿಂದ ಸಂಜೆ 4.30ರ ತನಕ ಈ ಸೇವೆ ಲಭ್ಯವಿದ್ದು, ಭಾನುವಾರ ರಜೆ ಇರಲಿದೆ.

ಎಲ್ಲಿ, ಎಷ್ಟು ಕ್ಲಿನಿಕ್‌ಗಳು ಸ್ಥಾಪನೆ?

ಬಾಗಲಕೋಟೆ 18, ಬಳ್ಳಾರಿ 11, ವಿಜಯನಗರ 6, ಬೆಳಗಾವಿ 21, ಬೆಂಗಳೂರು ಗ್ರಾಮಾಂತರ 9, ಬೀದರ್‌ 6, ಚಾಮರಾಜನಗರ 3, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 4, ಚಿತ್ರದುರ್ಗ 1, ದಕ್ಷಿಣ ಕನ್ನಡ 12, ದಾವಣಗೆರೆ 1, ಧಾರವಾಡ 6, ಗದಗ 11, ಹಾಸನ 5, ಹಾವೇರಿ 5, ಕಲಬುರಗಿ 11, ಕೊಡಗು 1, ಕೋಲಾರ 3, ಕೊಪ್ಪಳ 3, ಮಂಡ್ಯ 4, ಮೈಸೂರು 6, ರಾಯಚೂರು 8, ರಾಮನಗರ 3, ತುಮಕೂರು 10, ಉಡುಪಿ 10, ಉತ್ತರ ಕನ್ನಡ 10, ವಿಜಯಪುರ 10, ಯಾದಗಿರಿ 3, ಬೆಂಗಳೂರು (ಬಿಬಿಎಂಪಿ ವ್ಯಾಪ್ತಿಯಲ್ಲಿ) 243.