ನೀತಿ ಸಂಹಿತೆ ಘೋಷಣೆಯಾದ ಬಳಿಕ ಈವರೆಗೆ ನಗದು, ಮದ್ಯ ಸೇರಿದಂತೆ ಇತರೆ 108 ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2018ರ ವಿಧಾನಸಭಾ ಚುನಾವಣೆ ಸಮಯದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಕ್ಕಿಂತ ಮೊದಲು ವಶಪಡಿಸಿಕೊಂಡಿದ್ದ ಮೊತ್ತಕ್ಕಿಂತ ಈ ಬಾರಿ ಐದು ಪಟ್ಟು ಅಕ್ರಮ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 

ಬೆಂಗಳೂರು(ಏ.11): ಚುನಾವಣಾ ಅಕ್ರಮದ ಮೇಲೆ ನಿಗಾ ವಹಿಸಿರುವ ಚುನಾವಣಾ ಆಯೋಗ ಕಳೆದ 24 ಗಂಟೆ ಅವಧಿಯಲ್ಲಿ ಒಟ್ಟು 37.23 ಲಕ್ಷ ರು. ನಗದು ವಶಪಡಿಸಿಕೊಂಡಿದೆ. ನೀತಿ ಸಂಹಿತೆ ಘೋಷಣೆಯಾದ ಬಳಿಕ ಈವರೆಗೆ ನಗದು, ಮದ್ಯ ಸೇರಿದಂತೆ ಇತರೆ 108 ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2018ರ ವಿಧಾನಸಭಾ ಚುನಾವಣೆ ಸಮಯದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಕ್ಕಿಂತ ಮೊದಲು ವಶಪಡಿಸಿಕೊಂಡಿದ್ದ ಮೊತ್ತಕ್ಕಿಂತ ಈ ಬಾರಿ ಐದು ಪಟ್ಟು ಅಕ್ರಮ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 2018ರ ವೇಳೆಯಲ್ಲಿ 20.12 ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದರೆ, ಈ ಬಾರಿ ನಗದು ಸೇರಿದಂತೆ 108 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರೆ ತನಿಖಾ ಸಂಸ್ಥೆಯ ಸಿಬ್ಬಂದಿ, ಒಟ್ಟು 26.67 ಕೋಟಿ ರು. ಮೌಲ್ಯದ 5.23 ಕೋಟಿ ಲೀಟರ್‌ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ.

11.53 ಕೋಟಿ ರು. ಮೌಲ್ಯದ 396.64 ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 14.96 ಕೋಟಿರು. ಮೌಲ್ಯದ 34.36 ಕೆಜಿ ಚಿನ್ನ, 2.55 ಕೋಟಿ ರು. ಮೌಲ್ಯದ 373.79 ಕೆಜಿ ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ.

ಬಾಗಲಕೋಟೆ: ಹುನ್ನೂರ ಚೆಕ್‍ಪೋಸ್ಟನಲ್ಲಿ ದಾಖಲೆ ಇಲ್ಲದ ಬರೋಬ್ಬರಿ 2.10 ಕೋಟಿ ರೂ. ಜಪ್ತಿ!

965 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. 59 815 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 13 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 11 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದುಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 2,611 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ 3,837 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 6306 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.