ಬೆಂಗಳೂರು(ಫೆ.20): ಮುಂದಿನ ಐದು ವರ್ಷದೊಳಗೆ ಪೊಲೀಸ್‌ ಸಿಬ್ಬಂದಿಗಾಗಿ 10 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಹೇಳಿದ್ದಾರೆ.

ಕೋರಮಂಗಲದ ಕೆಎಸ್‌ಆರ್‌ಪಿ ಪರೇಡ್‌ ಮೈದಾನದಲ್ಲಿ ಏರ್ಪಡಿಸಿದ್ದ ಸೇವಾ ಕವಾಯತಿನಲ್ಲಿ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸ್‌ ಸಿಬ್ಬಂದಿಗಳಿಗೆ ವಸತಿ ನೀಡಲು ಹೆಚ್ಚು ಗಮನ ಹರಿಸಲಾಗಿದೆ. ಶಿಥಿಲಗೊಂಡಿರುವ ವಸತಿಗೃಹಗಳನ್ನು ನೆಲಸಮ ಮಾಡುವಂತೆಯೂ ಸೂಚಿಸಲಾಗಿದೆ. ಇದುವರೆಗೂ 11 ಸಾವಿರ ಮನೆಗಳನ್ನು ಕಲ್ಪಿಸಲಾಗಿದೆ ಎಂದರು.

ಪೊಲೀಸ್ ಮಹಾನಿರ್ದೇಶಕರ ವಿರುದ್ಧವೇ ತಿರುಗಿ ಬಿದ್ದ ಸಿಬ್ಬಂದಿ, ಏನಿದು ಜಟಾಪಟಿ..?

ಕೊರೋನಾ ಸೋಂಕು ಇನ್ನು ಹೋಗಿಲ್ಲ, ಅಧಿಕಾರಿಗಳು ಮತ್ತು ಸಿಬ್ಬಂದಿ ಜಾಗೃತರಾಗಿರಬೇಕು, ಜತೆಗೆ ಕುಟುಂಬದವರನ್ನು ಸಹ ಸೋಂಕಿನಿಂದ ಜಾಗೃತರಾಗಿರುವಂತೆ ನೋಡಿಕೊಳ್ಳಬೇಕು. ಕೋವಿಡ್‌ ಸಂಕಷ್ಟದಲ್ಲೂ ಕಳೆದ ಒಂದು ವರ್ಷದ ಅವಧಿಯಲ್ಲಿ ಉತ್ತಮವಾದ ಕೆಲಸ ಮಾಡಿದ್ದೀರಿ ಎಂದು ಇದೇ ವೇಳೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವನ್ನು ಶ್ಲಾಘಿಸಿದರು.

ಕಳೆದ ಒಂದು ವಾರದಿಂದ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ. ನಾಲ್ಕೈದು ದಿನಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಲಸಿಕೆ ಪಡೆಯಲಿದ್ದಾರೆ. ಕೆಎಸ್‌ಆರ್‌ಪಿಯಲ್ಲಿ ಶೇ.70ರಷ್ಟು ಸಿಬ್ಬಂದಿ ಲಸಿಕೆ ಪಡೆದಿದ್ದು, ಒಂದು ವಾರದಲ್ಲಿ ಶೇ.80 ರಷ್ಟಾಗುವ ನಿರೀಕ್ಷೆ ಇದೆ ಎಂದು ಹೇಳಿದರು.