'ಈ ಇಲಾಖೆಗಳ ಶೇ.100ರಷ್ಟು ಅಧಿಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು'
ಕೊರೋನಾ ಆಂತಕದ ಮಧ್ಯೆಯೇ ಈ ಇಲಾಖೆಯ ಅಧಿಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸರ್ಕಾರ ಆದೇಶ ಹೊರಿಡಿಸಿದೆ.
ಬೆಂಗಳೂರು, (ಏ.27): ಕಂದಾಯ, ಗೃಹ, ಒಳಾಡಳಿತ, ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಗಳ ಶೇಕಡಾ 100ರಷ್ಟು ಅಧಿಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ, ಇಂಧನ, ಆರ್ಥಿಕ, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಇ-ಆಡಳಿತ), ಪಶುಸಂಗೋಪನೆ-ಮೀನುಗಾರಿಕೆ ಇಲಾಖೆ, ಕೃಷಿ, ಕಾರ್ಮಿಕ, ತೋಟಗಾರಿಕೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗಳಿಗೆ ವಿನಾಯತಿ ನೀಡಲಾಗಿದ್ದು, ಶೇ 50ರಷ್ಟು ಅಧಿಕಾರಿ, ಸಿಬ್ಬಂದಿ ವರ್ಗ ಕೆಲಸಕ್ಕೆ ಹಾಜರಾಗಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.
'ಇನ್ನೆರಡು ತಿಂಗಳು ಉದ್ಘಾಟನೆ, ಶಂಕು ಸ್ಥಾಪನೆ ಕಾರ್ಯಕ್ರಮ ಮಾಡುವಂತಿಲ್ಲ'
ಆದರೆ ಅಗತ್ಯ ಇದ್ದಾಗ ಸೂಚನೆ ನೀಡಿದ ತಕ್ಷಣ ಕೆಲಸಕ್ಕೆ ಹಾಜರಾಗಬೇಕು ಎಂಬ ನಿಯಮ ವಿಧಿಸಲಾಗಿದೆ. ದೃಷ್ಟಿಹೀನ, ದೈಹಿಕ ಅಂಗವೈಕಲ್ಯ, ಗರ್ಭಿಣಿ ಮಹಿಳಾ ಸಿಬ್ಬಂದಿಗಳು ಕಚೇರಿಗೆ ಹಾಜರಾತಿ ವಿನಾಯಿತಿ ನೀಡಲಾಗಿದ್ದು, ಎಲ್ಲ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಇರತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಆದೇಶವು ಮೇ 12 ರವರೆಗೂ ಜಾರಿಯಲ್ಲಿ ಇರಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಇನ್ನು ಮುಂದಿನ ಎರಡು ತಿಂಗಳುಗಳ ಕಾಲ ರಾಜ್ಯದಲ್ಲಿ ಯಾವುದೇ ಉದ್ಘಾಟನೆ, ಶಂಕುಸ್ಥಾಪನೆ ನಡೆಸುವಂತಿಲ್ಲ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.