Asianet Suvarna News Asianet Suvarna News

‘ಪುಣ್ಯಕೋಟಿ ದತ್ತು’ಗೆ 100 ಕೋಟಿ ಸಂಗ್ರಹ ಗುರಿ: ಸಿಎಂ ಬೊಮ್ಮಾಯಿ

ನೂರು ಕೋಟಿ ರು. ಸಂಗ್ರಹಿಸಿ ವಿವಿಧ ಗೋಶಾಲೆಗಳಲ್ಲಿರುವ ಗೋವುಗಳ ಸಾಕಾಣಿಕೆಗೆ ನೆರವು ನೀಡಲಾಗುವುದು. ಪುಣ್ಯಕೋಟಿಗೆ ಯಾರು ಸಹಾಯ ಮಾಡುತ್ತಾರೋ ಅವರಿಗೆ ಪುಣ್ಯ ಪ್ರಾಪ್ತವಾಗಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

100 Crore Collection Target for Adoption of Cows in Karnataka Says CM Basavaraj Bommai grg
Author
First Published Mar 24, 2023, 12:00 AM IST

ಬೆಂಗಳೂರು(ಮಾ.24): ಪುಣ್ಯಕೋಟಿ ದತ್ತು ಯೋಜನೆಯಡಿ 100 ಕೋಟಿ ರು.ಗಳನ್ನು ದಾನಿಗಳಿಂದ ಸಂಗ್ರಹಿಸುವ ಮೂಲಕ ಒಂದು ಲಕ್ಷ ವಯಸ್ಸಾದ ಗೋವುಗಳ ರಕ್ಷಣೆಗೆ ಸಹಾಯ ಮಾಡಲು ಯೋಜಿಸಲಾಗಿದೆ. ಪ್ರಸ್ತುತ ವಿವಿಧ ಗೋಶಾಲೆಗಳಲ್ಲಿರುವ 28 ಸಾವಿರ ಗೋವುಗಳ ಸಾಕಾಣಿಕೆಗೆ ನೆರವು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗುರುವಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ವತಿಯಿಂದ ಪಶು ಜಿಕೆವಿಕೆ ವೈದ್ಯಕೀಯ ಪರಿಷತ್‌ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪುಣ್ಯಕೋಟಿ ದತ್ತು ಯೋಜನೆ’ಯಡಿ ಗೋವುಗಳನ್ನು ದತ್ತು ಪಡೆಯುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗೋರಕ್ಷಣೆ ಹೆಸರಲ್ಲಿ ಕಸಾಯಿಖಾನೆಗೆ ಗೋವು: ಆರೋಪ

ಸರ್ಕಾರಿ ನೌಕರರ ಸಂಘದಿಂದ ಪುಣ್ಯಕೋಟಿ ದತ್ತು ಯೋಜನೆಗೆ ಈಗಾಗಲೇ 28 ಕೋಟಿ ರು.ಗಳನ್ನು ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 12 ಕೋಟಿ ರು.ಗಳನ್ನು ಕೊಡುವ ಭರವಸೆ ನೀಡಿದ್ದಾರೆ ಎಂದ ಅವರು, ನೂರು ಕೋಟಿ ರು.ಗಳನ್ನು ಸಂಗ್ರಹಿಸಿ ವಿವಿಧ ಗೋಶಾಲೆಗಳಲ್ಲಿರುವ ಗೋವುಗಳ ಸಾಕಾಣಿಕೆಗೆ ನೆರವು ನೀಡಲಾಗುವುದು. ಪುಣ್ಯಕೋಟಿಗೆ ಯಾರು ಸಹಾಯ ಮಾಡುತ್ತಾರೋ ಅವರಿಗೆ ಪುಣ್ಯ ಪ್ರಾಪ್ತವಾಗಲಿದೆ. ದಾನಿಗಳು ಯಾವ ಗೋಶಾಲೆಗೆ ಬೇಕಾದರೂ ಸಹಾಯ ಮಾಡಬಹುದು. ಹಾಗೆಯೇ ತಾವು ಇಂತಹದ್ದೇ ಗೋವಿಗೆ ಸಹಾಯ ಮಾಡುತ್ತೇವೆ ಎಂದು ಬಯಸಿದರೆ ದತ್ತು ತೆಗೆದುಕೊಳ್ಳಬಹುದು ಎಂದು ಹೇಳಿದರು.

ನಮ್ಮನ್ನು ಸಾಕಿ ಬೆಳೆಸಿದ ತಾಯಿಯ ವೃದ್ಧಾಪ್ಯದಲ್ಲಿ ಹೇಗೆ ಸೇವೆ ಮಾಡುತ್ತೇವೆಯೋ ಅಷ್ಟೇ ಪವಿತ್ರವಾದ ಸೇವೆ ಈ ಗೋಸೇವೆ. ಮಾತೃ ವಾತ್ಸಲ್ಯದ ಹೃದಯವಿರುವ ಎಲ್ಲರೂ ಕೂಡ ಈ ಯೋಜನೆಗೆ ತಮ್ಮ ಸಹಾಯ ಹಸ್ತ ನೀಡಬೇಕು. ದತ್ತು ಪಡೆದವರು ತಿಂಗಳಿಗೆ ಒಮ್ಮೆಯಾದರೂ ಗೋವುಗಳ ವಿಡಿಯೋ ಮಾಡಿ ಇಲಾಖೆಗೆ ಕಳುಹಿಸಬೇಕು. ಇದರಿಂದ ಬೇರೆಯವರಿಗೂ ಇದು ಪ್ರೇರಣದಾಯವಾಗಿರಲಿ ಎಂಬ ಉದ್ದೇಶ ಹೊಂದಲಾಗಿದೆ. ಗೋಮಾತೆ ಅಂದರೆ ಕಾಮಧೇನು. ಅದು ನಮ್ಮ ಬದುಕಿನ ಅವಿಭಾಜ್ಯ ಅಂಗ. ಭಗವಂತ ಗೋವನ್ನು ಸೃಷ್ಟಿಮಾಡಿರುವುದೇ ಲೋಕಕಲ್ಯಾಣಕ್ಕಾಗಿ. ಮನುಷ್ಯರ ಕಲ್ಯಾಣಕ್ಕಾಗಿ ಅಷ್ಟೇ ಅಲ್ಲ, ಗೋವುಗಳ ಜೊತೆಗೆ ಬದುಕಿ ಬಾಳಿದವನಿಗೆ ಮಾನವೀಯ ಗುಣಗಳು ಸಹಜವಾಗಿ ಈ ಜಗತ್ತಿನಲ್ಲಿ ಬೆಳೆಯುತ್ತದೆ ಎನ್ನುವ ಕಾರಣಕ್ಕಾಗಿ ಸೃಷ್ಟಿಸಿದ್ದಾನೆ ಎಂದು ಹೇಳಿದರು.

Success Story : ಕೊರೋನಾದಲ್ಲಿ ಕೆಲಸ ಕಳ್ಕೊಂಡ ನಾರಿಗೆ ಕೈ ಹಿಡಿದಿದ್ದು ಗೋವು

ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವಾಗ ಪ್ರಶ್ನೆಯೊಂದು ಉದ್ಭವಿಸಿತ್ತು. ವಯಸ್ಸಾದ ಗೋವನ್ನು ಸಾಕುವವರು ಯಾರು? ರೈತರಿಗೂ ಅದು ಭಾರವಾಗುವುದಿಲ್ಲವೇ? ಗೋಶಾಲೆಗಳಿವೆಯಾದರೂ, ಅವುಗಳಿಗೂ ಶಕ್ತಿ ಸಾಲದು. ಪ್ರಾಣಿಗಳ ಸಂಖ್ಯೆ ಮತ್ತು ಗೋಶಾಲೆಗಳಿಗೆ ಸಾಕಷ್ಟುವ್ಯತ್ಯಾಸವಿದೆ. ಹೀಗಾಗಿ ಗೋಹತ್ಯೆ ಕಾನೂನು ತರಬೇಡಿ ಅನ್ನುವ ಮಾತುಗಳು ಬಂದಿದ್ದವು. ಈ ಸಂದರ್ಭದಲ್ಲಿ ಗಟ್ಟಿನಿರ್ಧಾರ ಕೈಗೊಂಡು ಗೋಹತ್ಯೆ ಕಾನೂನು ತರುತ್ತೇವೆ, ಅದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಸದನದಲ್ಲಿ ಹೇಳಿದ್ದೆ. ಅಂತೆಯೇ ದೇಶದಲ್ಲೇ ಪ್ರಥಮ ಪ್ರಯೋಗವೆಂಬಂತೆ ಈ ಪುಣ್ಯಕೋಟಿ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌, ಸರ್ಕಾರ ಕಾರ್ಯದರ್ಶಿ ಸಲ್ಮಾ, ಆಯುಕ್ತೆ ಸರಸ್ವತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios