ಬೆಂಗಳೂರು [ಫೆ.29]:  ‘ರೈತರ ಸಾಲಮನ್ನಾ ಯೋಜನೆಗೆ ತಿಲಾಂಜಲಿ ಇಡಲು ಬಿಜೆಪಿ ಸರ್ಕಾರ ಅಡ್ಡದಾರಿ ತುಳಿಯುತ್ತಿರುವುದು ಖಂಡನೀಯವಾಗಿದ್ದು, ರೈತರ ಬಾಳಿಗೆ ರಾಜ್ಯ ಸರ್ಕಾರ ಕೊಳ್ಳಿ ಇಡಲು ಮುಂದಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

‘ದಾಖಲೆಗಳ ನೆಪವೊಡ್ಡಿ ಸಾಲಮನ್ನಾ ಯೋಜನೆಯಿಂದ ಒಂದು ಲಕ್ಷಕ್ಕೂ ಹೆಚ್ಚು ರೈತರನ್ನು ಕೈಬಿಡುವ ಮೂಲಕ ಬಿಜೆಪಿ ಸರ್ಕಾರ ರೈತರಿಗೆ ದೋಖಾ ಮಾಡುತ್ತಿದೆ. ಸಾಲಮನ್ನಾದ ಬಗ್ಗೆ ಬಿಜೆಪಿಯ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮುಖ್ಯಮಂತ್ರಿಯಾಗಿದ್ದ ವೇಳೆ ಮೀಸಲಿಟ್ಟಿದ 25 ಸಾವಿರ ಕೋಟಿ ರು.ಗಳ ಹಣವನ್ನು ಬಿಜೆಪಿ ಸರ್ಕಾರ ಬೇರೆಡೆಗೆ ವರ್ಗಾಯಿಸಿದೆ. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಿಂದ ರಾಜ್ಯದ 1.50 ಲಕ್ಷ ರೈತರಿಗೆ ವಂಚಿಸಲಾಗಿದೆ’ ಎಂದು ಟ್ವೀಟರ್‌ನಲ್ಲಿ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

‘ಸಾಲಮನ್ನಾ ಬಗ್ಗೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ. ರೈತರ ಪರವಾಗಿ ನಿಲ್ಲುತ್ತೇನೆ’ ಎಂದಿದ್ದಾರೆ.

ದಾಖಲೆ ಇರುವ ಎಲ್ಲ ರೈತರ ಸಾಲ ಮನ್ನಾ: ಬಿಎಸ್‌ವೈ

ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾಡಿರುವ ಟ್ವೀಟರ್‌ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದ್ದು, ರೈತರ ಸಾಲಮನ್ನಾ ವಿಷಯವಾಗಿ ಕೆಲವು ಊಹಾಪೋಹಾಗಳು ಹರಿದಾಡುತ್ತಿದ್ದು, ರೈತರು ಯಾವುದೇ ರೀತಿಯ ಆತಂಕಕ್ಕೊಳಗಾಗಬಾರದು ಎಂದು ಟ್ವೀಟರ್‌ನಲ್ಲಿ ರೈತರಲ್ಲಿ ಮನವಿ ಮಾಡಿದ್ದಾರೆ. ‘ರೈತರಿಗೆ ಅನ್ಯಾಯವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸೂಕ್ತ ದಾಖಲೆ ಸಲ್ಲಿಸುವ ಎಲ್ಲ ರೈತರ ಸಾಲಮನ್ನಾ ಆಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಸರ್ಕಾರ ರೈತರ ಪರವಾಗಿದ್ದು, ದಾರಿ ತಪ್ಪಿಸುವ ಹೇಳಿಕೆಗಳಿಗೆ ರೈತರು ಕಿವಿಗೊಡಬಾರದು’ ಎಂದು ಹೇಳಿದ್ದಾರೆ.