Teachers Recruitment Exam: ಭಾರೀ ಕಟ್ಟೆಚ್ಚರದೊಂದಿಗೆ ನಡೆದ ಶಿಕ್ಷಕರ ನೇಮಕಾತಿ ಪರೀಕ್ಷೆ
* ಪಿಎಸ್‌ಐ ಪರೀಕ್ಷಾ ಅಕ್ರಮ ಹಿನ್ನೆಲೆ: ಬಿಗಿ ತಪಾಸಣೆ
* ಸಿಸಿಟಿವಿ ಕಣ್ಗಾವಲು, ಎಲೆಕ್ಟ್ರಾನಿಕ್ ವಸ್ತು ನಿರ್ಬಂಧ
* ದಾವಣಗೆರೆಯ ಕಿವಿ, ಮೂಗು ತಜ್ಞರನ್ನು ಕರೆಸಿ ಅಭ್ಯರ್ಥಿಗಳ ತಪಾಸಣೆ
ಬೆಂಗಳೂರು(ಮೇ.22): ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶನಿವಾರ ಜರುಗಿದ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ವಿದ್ಯಾರ್ಥಿಗಳ ತೀವ್ರ ತಪಾಸಣೆ ಹಾಗೂ ಅತ್ಯಂತ ಭದ್ರತೆಯೊಂದಿಗೆ ನಡೆಸಿದೆ.
ಪ್ರವೇಶ ದ್ವಾರದಲ್ಲೇ ಪ್ರತಿ ಅಭ್ಯರ್ಥಿಯನ್ನೂ ಕೂಲಂಕಷವಾಗಿ ಪರಿಶೀಲಿಸಿ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಪ್ರವೇಶ ಕಲ್ಪಿಸಲಾಗಿತ್ತು. ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ಪುನಃ ಎರಡನೇ ಹಂತದಲ್ಲಿ ತಪಾಸಣೆ ನಡೆಸಲಾಗಿದೆ. ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್‌್ತ ಸಹ ಮಾಡಲಾಗಿತ್ತು.
ಪಿಎಸ್‌ಐ ಹಗರಣ ಎಫೆಕ್ಟ್, ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ ಫುಲ್ ಸ್ಟ್ರಿಕ್ಟ್
ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ಅಭ್ಯರ್ಥಿಗಳು ಮೆಟಲ್ ಡಿಟೆಕ್ಟರ್ (ಡಿಎಫ್‌ಎಂಡಿ) ಬಾಗಿಲು ಮೂಲಕ ಬಂದ ನಂತರ ಪೊಲೀಸರು ಮತ್ತೊಮ್ಮೆ ಮೆಟಲ್ ಡಿಟೆಕ್ಟರ್(ಎಚ್‌ಎಚ್‌ಎಂಡಿ)ನಲ್ಲಿ ಪರಿಶೀಲಿಸಿದ ನಂತರವೇ ಒಳ ಬಿಟ್ಟರು. ಪರೀಕ್ಷಾ ಕೊಠಡಿ ಪ್ರವೇಶಿಸುವ ಮುನ್ನವೂ ಸಹ ಅಧಿಕಾರಿಗಳು ಅಭ್ಯರ್ಥಿಗಳನ್ನು ತಪಾಸಣೆ ನಡೆಸಿದರು.
ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ನಿರ್ಬಂಧ:
ಪರೀಕ್ಷೆ ನಡೆಸುವ ಕೊಠಡಿಗೆ ಕೈಗಡಿಯಾರ, ಮೊಬೈಲ್, ಬ್ಲೂಟೂತ್, ಕ್ಯಾಲ್ಕು್ಯಲೇಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣ ಕೊಂಡೊಯ್ಯದಂತೆ ನಿರ್ಬಂಧ ವಿಧಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ತಪಾಸಣೆ ನಡೆಸಲಾಯಿತು. ಜೊತೆಗೆ ಕೊರೋನಾ ಹಿನ್ನೆಲೆಯಲ್ಲಿ ದೇಹದ ತಾಪಮಾನವನ್ನೂ ಪರಿಶೀಲಿಸಲಾಗಿದೆ.
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ (6ರಿಂದ 8 ನೇ ತರಗತಿ) ಖಾಲಿ ಇರುವ 15 ಸಾವಿರ ಪದವೀಧರ ಶಿಕ್ಷಕರ ಹುದ್ದೆಗೆ 1.06 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದರು. ಪರೀಕ್ಷೆ ಮೇಲ್ವಿಚಾರಣೆಗೆ ಆಯಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮಿತಿ ರಚಿಸಿದ್ದು ಎಲ್ಲೂ ಲೋಪವಾಗದಂತೆ ಕ್ರಮ ಕೈಗೊಳ್ಳಲಾಗಿತ್ತು. ರಾಜ್ಯದ 435 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು.
ಸಿಸಿಟಿವಿ ಪರಿಶೀಲನೆ:
ಪರೀಕ್ಷೆ ನಡೆಯುವ ಕೇಂದ್ರಗಳಾದ ಶಾಲೆ-ಕಾಲೇಜುಗಳನ್ನು ಮೂರು ದಿನದ ಹಿಂದೆಯೇ ವಶಕ್ಕೆ ಪಡೆದು ಸಿಸಿಟಿವಿಗಳು ಕಾರ್ಯ ನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಲಾಗಿತ್ತು. ಪರೀಕ್ಷಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಒಂದಷ್ಟುಡಿ ಗ್ರೂಪ್ ನೌಕರರನ್ನು ಸಹಾಯಕ್ಕೆ ಬಳಸಿಕೊಂಡಿರುವುದನ್ನು ಹೊರತುಪಡಿಸಿದರೆ ಆ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಎರಡೂ ಪರೀಕ್ಷೆ ಮುಗಿಯುವವರೆಗೂ ಬರದಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
Dharwad: ಶಿಕ್ಷಕರ ನೇಮಕಾತಿ ಪರೀಕ್ಷೆ: ಜಿಲ್ಲೆಯಲ್ಲಿ 9 ಪರೀಕ್ಷಾ ಕೇಂದ್ರಗಳು ಅಕ್ರಮ ತಡೆಗೆ ಬಿಗಿ ಕ್ರಮ!
ಪ್ರತಿ ಪರೀಕ್ಷಾ ಕೇಂದ್ರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಸಮೀಪದ ಸೈಬರ್ ಸೆಂಟರ್, ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲಾಗಿತ್ತು. ಅಭ್ಯರ್ಥಿಗಳ ಜೊತೆಗೆ ಆಗಮಿಸಿದ್ದ ಪೋಷಕರು ಮತ್ತು ಸಂಬಂಧಿಕರು ಪರೀಕ್ಷಾ ಕೇಂದ್ರಗಳಿಂದ ದೂರ ಇರುವಂತೆ ನೋಡಿಕೊಳ್ಳಲಾಗಿತ್ತು. ಭಾನುವಾರ ನಡೆಯುವ ಪರೀಕ್ಷೆಯ ಮೇಲೂ ತೀವ್ರ ನಿಗಾ ಇರಿಸಲು ನಿರ್ಧರಿಸಲಾಗಿದೆ.
4957 ಅಭ್ಯರ್ಥಿಗಳು ಗೈರು
15 ಸಾವಿರ ಪದವೀಧರ ಶಿಕ್ಷಕರ ಹುದ್ದೆಗೆ 1.06 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದು ಇದರಲ್ಲಿ 31 ಸಾವಿರಕ್ಕೂ ಅಧಿಕ ಅರ್ಜಿ ಪುನರಾವರ್ತನೆ ಆಗಿದ್ದವು. ಅಂತಿಮವಾಗಿ 74,116 ಅಭ್ಯರ್ಥಿಗಳನ್ನು ಪರಿಗಣಿಸಿದ್ದು, ಶನಿವಾರ 69,159 ಮಂದಿ ಪರೀಕ್ಷೆ ಬರೆದಿದ್ದು 4957 ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ.