ಕೃಷಿ ವಿವಿ ಖಾಲಿ ಇರುವ ಹುದ್ದೆ ಶೀಘ್ರ ಭರ್ತಿ: ಸಚಿವ ಬಿ.ಸಿ. ಪಾಟೀಲ್
ಕೋವಿಡ್ ಕಾರಣ ಭರ್ತಿಯಾಗದ ಹುದ್ದೆಗಳು 3484| ರಾಜ್ಯದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ತಿತಿಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಸಂಪನ್ಮೂಲವನ್ನು ಕ್ರೋಡೀಕರಿಸಬೇಕಿದೆ| ಸರ್ಕಾರದ ನಿರ್ದೇಶನದಿಂದ ಯಾವುದೇ ಹೊಸ ನೇಮಕಾತಿ ಕೈಗೊಳ್ಳಲು ಕ್ರಮಕೈಗೊಂಡಿಲ್ಲ: ಪಾಟೀಲ್|
ಬೆಂಗಳೂರು(ಮಾ.06): ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಬಿಜೆಪಿ ಸದಸ್ಯ ಅರುಣ ಶಹಾಪುರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳಿಗೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಯಾವುದೇ ಕ್ರಮಕೈಗೊಂಡಿಲ್ಲ. ಪ್ರಸ್ತುತ ಈ ಕೃಷಿ ವಿವಿಗಳಿಗೆ ಮಂಜೂರಾಗಿರುವ 6,342 ಹುದ್ದೆಗಳ ಪೈಕಿ 3484 ಹುದ್ದೆಗಳು ಖಾಲಿ ಇದೆ ಎಂದರು.
ಖಾಸಗಿ ವಲಯದ ಶೇ.75 ಉದ್ಯೋಗ ಸ್ಥಳೀಯರಿಗೆ ಮೀಸಲು!
ಬೆಂಗಳೂರು ಕೃಷಿ ವಿವಿಗೆ ಮಂಜೂರಾಗಿರುವ 2215 ಹುದ್ದೆಗಳ ಪೈಕಿ 233 ಬೋಧಕ ಮತ್ತು 997 ಬೋಧಕೇತರ ಹುದ್ದೆಗಳು ಖಾಲಿ ಇವೆ. ಧಾರವಾಡ ಕೃಷಿ ವಿವಿಗೆ ಮಂಜೂರಾಗಿರುವ 1669 ಹುದ್ದೆಗಳ ಪೈಕಿ 229 ಬೋಧಕ ಮತ್ತು 655 ಬೋಧಕೇತರ ಹುದ್ದೆಗಳು ಖಾಲಿ ಇವೆ. ರಾಯಚೂರು ಕೃಷಿ ವಿವಿಗೆ ಮಂಜೂರಾಗಿರುವ 1513 ಹುದ್ದೆಗಳ ಪೈಕಿ 240 ಬೋಧಕ ಮತ್ತು 533 ಬೋಧಕೇತರ ಹುದ್ದೆ ಹಾಗೂ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯ 185 ಬೋಧಕ ಮತ್ತು 412 ಬೋಧಕೇತರ ಹುದ್ದೆಗಳು ಸೇರಿದಂತೆ 3483 ಹುದ್ದೆಗಳು ಖಾಲಿ ಇವೆ ಎಂದರು.
ರಾಜ್ಯದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ತಿತಿಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಸಂಪನ್ಮೂಲವನ್ನು ಕ್ರೋಡೀಕರಿಸಬೇಕಿದೆ. ಅದಕ್ಕಾಗಿ ಸರ್ಕಾರದ ವೆಚ್ಚದ ಬಾಬ್ತಿನಲ್ಲಿ ಮಿತವ್ಯಯ ಪಾಲಿಸುವ ಅವಶ್ಯಕತೆಯಿದ್ದು ಈ ನಿಟ್ಟಿನಲ್ಲಿ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಎಲ್ಲ ನೇರ ನೇಮಕಾತಿ ಹುದ್ದೆಗಳ ಭರ್ತಿಯನ್ನು ತಡೆಹಿಡಿಯಲಾಗಿದೆ. ಸರ್ಕಾರದ ನಿರ್ದೇಶನದಿಂದ ಯಾವುದೇ ಹೊಸ ನೇಮಕಾತಿಗಳನ್ನು ಕೈಗೊಳ್ಳಲು ಕ್ರಮಕೈಗೊಂಡಿಲ್ಲ ಎಂದು ಸಚಿವರು ವಿವರಿಸಿದರು.