ಮೈತ್ರಿ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ರದ್ದುಗೊಳಿಸಿದ ಬಿಜೆಪಿ ಸರ್ಕಾರ
ದೋಸ್ತಿ ಸರ್ಕಾರದ ನೇಮಕಾತಿಗೆ ಬಿಜೆಪಿ ಸರ್ಕಾರ ಎಳ್ಳು ನೀರು ಬಿಟ್ಟಿದೆ. ದೋಸ್ತಿ ಸರ್ಕಾರದ ಅವಧಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಬಗ್ಗೆ ಯಡಿಯೂರಪ್ಪ ಸರ್ಕಾರ ದಿಟ್ಟ ನಿರ್ಧಾರ ಕೈಕೊಂಡಿದೆ.
ಬೆಂಗಳೂರು, (ಡಿ.16): ಲೋಕೋಪಯೋಗಿ ಇಲಾಖೆಯಲ್ಲಿನ 870 ಇಂಜಿನಿಯರ್‌ಗಳ ನೇಮಕಾತಿಯನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರದ್ದುಗೊಳಿಸಿದೆ.
ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 870 ಇಂಜಿನಿಯರ್ ಸೇರಿದಂತೆ ಒಟ್ಟು 1 ಸಾವಿರ ಹುದ್ದೆಗಳ ನೇಮಕಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಚಾಲನೆ ನೀಡಿತ್ತು. ಎಚ್. ಡಿ. ರೇವಣ್ಣ ಸಚಿವರಾಗಿದ್ದಾಗ ನೇಮಕಾತಿಗೆ ಚಾಲನೆ ನೀಡಲಾಗಿತ್ತು.
ಇದೀಗ ಸರ್ಕಾರ ಈ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದು, ಪರೀಕ್ಷಾ ಪ್ರಾಧಿಕಾರದ ಬದಲು ಕೆಪಿಎಸ್ಸಿ ಮೂಲಕ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಕೆಪಿಎಸ್ ಮೂಲಕ ನೇಮಕ ಮಾಡಿಕೊಂಡರೆ ವಿಳಂಬವಾಗಲಿದೆ ಎಂದು ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕ ಮಾಡಿಕೊಳ್ಳಲು ಮುಂದಾಗಿತ್ತು.
ಕರ್ನಾಟಕ ಹಾಲು ಒಕ್ಕೂಟದಲ್ಲಿ ನೇಮಕಾತಿ: ಅರ್ಜಿ ಹಾಕಿ
ರೇವಣ್ಣ ತಮಗೆ ಬೇಕಾದವರನ್ನು ಇಲಾಖೆಯಲ್ಲಿ ತುಂಬಿಸುತ್ತಿದ್ದಾರೆ ಎಂಬ ಆರೋಪವೂ ಇತ್ತು. ದೋಸ್ತಿ ಸರ್ಕಾರದ ಅವಧಿಯಲ್ಲಿ ನೇಮಕಾತಿ ಅಕ್ರಮದ ಆರೋಪದ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ.
570 ಸಹಾಯಕ ಇಂಜಿನಿಯರ್, 300 ಕಿರಿಯ ಇಂಜಿನಿಯರ್ ಹುದ್ದೆಗಳ ಭರ್ತಿಗೆ 2019ರ ಮಾರ್ಚ್‌ನಲ್ಲಿ ಅರ್ಜಿ ಕರೆಯಲಾಗಿತ್ತು. ಜೂನ್‌ನಲ್ಲಿ ಸ್ಮರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಮೈತ್ರಿ ಸರ್ಕಾರ ಪತನಗೊಂಡಿತ್ತು. ನಂತರ ಹೊಸದಾಗಿ ಬಂದ ಬಿಜೆಪಿ ಸರ್ಕಾರ ಪರೀಕ್ಷೆ ಫಲಿತಾಂಶವನ್ನು ತಡೆ ಹಿಡಿದಿತ್ತು.
ಹೊಸದಾಗಿ ನೇಮಕಾತಿ
600 ಸಹಾಯಕ ಇಂಜಿನಿಯರುಗಳು, 325 ಕಿರಿಯ ಇಂಜಿನಿಯರುಗಳ ಹುದ್ದೆಗೆ ಕೆಪಿಎಸ್ಸಿಯಿಂದ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಸರ್ಕಾರ ಪತ್ರ ಬರೆದಿದೆ. ನವೆಂಬರ್ 27ರಂದು ಕೆಪಿಎಸ್ಸಿಗೆ ಲೋಕೋಪಯೋಗಿ ಇಲಾಖೆ ಪತ್ರ ಬರೆದಿದೆ.
ಈ ಮೊದಲು ಪರೀಕ್ಷೆ ಬರೆದಿದ್ದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲು ಸರ್ಕಾರ ಸೂಚಿಸಿದ್ದು, ಯಾವುದೇ ಕಾನೂನಿನ ತೊಡಕು ಬಾರದಂತೆ ಅರ್ಜಿ ಆಹ್ವಾನಿಸಲು ಕೆಪಿಎಸ್ಸಿಗೆ ನಿರ್ದೇಶಿಸಿದೆ.