PSI ಹುದ್ದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬೆಂಗಳೂರು, (ಮೇ.28):PSI (ಪೊಲೀಸ್ ಸಬ್ ಇನ್ಸ್‌ಪೆಕ್ಟರ್) ಹುದ್ದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅಸ್ತು ಎಂದಿದೆ.
ಇಂದು (ಗುರುವಾರ) ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸಾಮಾನ್ಯ ವರ್ಗಕ್ಕೆ 28 ವರ್ಷದಿಂದ 30 ವರ್ಷಕ್ಕೆ ಹೆಚ್ಚಿಸಲಾಗಿದ್ದು, ಪರಿಶಿಷ್ಟ ಜಾತಿ-ಪಂಗಡಕ್ಕೆ 30 ವರ್ಷದಿಂದ 32 ವರ್ಷಕ್ಕೆ ಏರಿಸಲಾಗಿದೆ.
4014 ಸಿವಿಲ್, ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ನೇಮಕ; ಅರ್ಜಿ ಸಲ್ಲಿಕೆ ಆರಂಭ
ಇದಕ್ಕೆ ಸಂಬಂಧಿಸಿದ ಕರ್ನಾಟಕ ರಾಜ್ಯ ಪೊಲೀಸ್ ಲಿಪಿಕ ಸಿಬ್ಬಂದಿಗಳನ್ನು ಒಳಗೊಂಡ ನೇಮಕಾತಿ ತಿದ್ದುಪಡಿ ನಿಯಮಗಳು 2021ಕ್ಕೆ ಅನುಮೋದನೆ ನೀಡಲಾಯಿತು ಎಂದು ಸಂಪುಟ ಸಭೆಯ ನಂತರ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಿಎಸ್‌ಐಗಳ ನೇಮಕಾತಿಗೆ ಗರಿಷ್ಠ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸುವಂತೆ ಇತ್ತಿಚೆಗೆ ಈ ಕುರಿತು ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿ ನಿರ್ಧಾರ ಕೈಗೊಂಡು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅದಕ್ಕೆ ಸಂಪುಟದ ಅನುಮೋದನೆ ಪಡೆಯುವುದೊಂದೇ ಬಾಕಿ ಇತ್ತು.
ಇನ್ನು ಮುಖ್ಯವಾಗಿ ರಾಜ್ಯ ಪೊಲೀಸ್ ಇಲಾಖೆ ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯ 556 ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೂ ಈ ವಯೋಮಿತಿ ಹೆಚ್ಚಳ ಅನ್ವಯವಾಗುತ್ತದೆಯೇ ಅಥವಾ ಇಲ್ಲವೋ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ.