ಕೆಪಿಎಸ್ಸಿ: ಫೇಲಾದವರ ಅಂಕಪಟ್ಟಿ ಪ್ರಕಟವೇ ಇಲ್ಲ!
ಕೆಪಿಎಸ್ಸಿ: ಫೇಲಾದವರ ಅಂಕಪಟ್ಟಿಪ್ರಕಟವೇ ಇಲ್ಲ!| ಕೇಳಿದವರಿಗೆ ಪಾಸ್‌ವರ್ಡ್ ಇಲ್ಲದೆ ಇ-ಮೇಲ್ ಕಳಿಸಿದ ಆಯೋಗ| ಆಕ್ಷೇಪಣೆಗೆ 15 ದಿನದ ಬದಲು ಬರೀ ಒಂದು ವಾರ ಅವಕಾಶ| ಈ ತರಾತುರಿ, ನಿಯಮ ಬದಲಾವಣೆ ಏಕೆ: ಅಕ್ರಮದ ವಾಸನೆ
ಬೆಂಗಳೂರು(ಮಾ.21): ಕರ್ನಾಟಕ ಲೋಕಸೇವಾ ಆಯೋಗ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಆಯ್ಕೆ ಸಂಬಂಧ 2015ನೇ ಸಾಲಿನಲ್ಲಿ ನಡೆಸಿದ ಮುಖ್ಯ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆಯ ಅಂಕಪಟ್ಟಿಪ್ರಕಟಿಸುವ ವಿಷಯದಲ್ಲಿ ಸಂಶಯಾಸ್ಪದ ಕ್ರಮ ಕೈಗೊಂಡಿರುವುದು ಹಾಗೂ ತಾತ್ಕಾಲಿಕ ಆಯ್ಕೆಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಹೆಚ್ಚಿನ ದಿನಗಳ ಅವಕಾಶ ನೀಡದೇ ಇರುವುದು ನೇಮಕಾತಿಯಲ್ಲಿ ಅಕ್ರಮದ ವಾಸನೆ ಹೆಚ್ಚಾಗಲು ಕಾರಣವಾಗಿದೆ.
ಸಾಮಾನ್ಯವಾಗಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಆಯ್ಕೆಗೆ ನಡೆಯುವ ಮುಖ್ಯಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಗೆ ಹಾಜರಾದ ಎಲ್ಲ ಅಭ್ಯರ್ಥಿಗಳ ಅಂಕಪಟ್ಟಿಯನ್ನು ಏಕಕಾಲಕ್ಕೆ ಪ್ರಕಟಿಸಲಾಗುತ್ತದೆ. ಆದರೆ 2015ನೇ ಸಾಲಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಅಂಕ ಪಟ್ಟಿಯನ್ನು ಮಾತ್ರ ಮೊದಲು ಪ್ರಕಟಿಸಿದ್ದು, ಆಯ್ಕೆಯಾಗದ ಅಭ್ಯರ್ಥಿಗಳ ಅಂಕ ಪಟ್ಟಿಯನ್ನು ಕೆಪಿಎಸ್‌ಸಿ ವೆಬ್‌ಸೈಟಿನಲ್ಲಿ ಪ್ರಕಟಿಸಿಯೇ ಇಲ್ಲ.
ಅಷ್ಟೇ ಅಲ್ಲದೆ, ಆಯ್ಕೆಯಾಗದ ಅಭ್ಯರ್ಥಿಗಳ ಮುಖ್ಯ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯ (ಸಂದರ್ಶನ) ಅಂಕಗಳ ಪಟ್ಟಿಯನ್ನು ಕೇವಲ ಕೇಳಿದ ಅಭ್ಯರ್ಥಿಗಳ ಇ-ಮೇಲ್ ವಿಳಾಸಕ್ಕೆ ರವಾನಿಸಲಾಗಿದೆ. ಈ ಬದಲಾವಣೆಗೆ ಕಾರಣ ತಿಳಿಸುವಂತೆ ಅಧಿಕಾರಿಗಳಿಗೆ ಕೋರಿದರೂ ಬಾಯಿಬಿಡದೇ ಇರುವುದು ಸಂಶಯಕ್ಕೆ ಕಾರಣವಾಗಿದೆ. ಹಾಗಾಗಿ ತನಿಖೆ ನಡೆಸಬೇಕೆಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ಆಕ್ಷೇಪಣೆಗೆ ಅವಕಾಶ ನೀಡಿಲ್ಲ:
428 ಗೆಜಿಟೆಡ್ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ನಡೆಸಲು ಎರಡು ವರ್ಷ ಆರು ತಿಂಗಳು ಕಾಲಾವಕಾಶ ತೆಗೆದುಕೊಂಡ ಕೆಪಿಎಸ್‌ಸಿ, ತಾತ್ಕಾಲಿಕ ಆಯ್ಕೆ ಪಟ್ಟಿಕುರಿತಂತೆ ಆಕ್ಷೇಪಣೆ ಸಲ್ಲಿಸಲು ಏಳು ದಿನ ಮಾತ್ರ (ಮೂರು ದಿನಗಳ ಕಾಲ ಸರ್ಕಾರಿ ರಜೆ ಸೇರಿ) ಕಾಲಾವಕಾಶ ನೀಡಿದೆ. ಕಡಿಮೆ ಕಾಲಾವಕಾಶ ನೀಡುವ ಮೂಲಕ ಆಕ್ಷೇಪಣೆಗಳು ಬರದಂತೆ ಹುನ್ನಾರ ಮಾಡಿದೆ ಎಂಬುದು ಅಭ್ಯರ್ಥಿಗಳ ಗಂಭೀರ ಆರೋಪವಾಗಿದೆ.
ಸಾಮಾನ್ಯವಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಪ್ರಕಟವಾಗುತ್ತಿದ್ದಂತೆ ಕೆಪಿಎಸ್‌ಸಿ ನಿಯಮಾವಳಿಗಳ ಪ್ರಕಾರ ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಬೇಕಾಗುತ್ತದೆ. ಆದರೆ, 2014ನೇ ಸಾಲಿನಲ್ಲಿ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲ ಕಾಲಾವಕಾಶ ನೀಡಲಾಗಿತ್ತು. ಆದರೆ, 2015ನೇ ಸಾಲಿನಲ್ಲಿ ಆಕ್ಷೇಪಣೆ ಸಲ್ಲಿಸಲು ಕೇವಲ 7 ದಿನಗಳನ್ನು ನೀಡಲಾಗಿದೆ. ಈ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಿಳಿಸಿದ್ದಾರೆ.
ಸಹಿ ಇಲ್ಲದ ಅಂಕ ಪಟ್ಟಿ:
ಕೆಪಿಎಸ್‌ಸಿ ಪ್ರಕಟಿಸುವ ಅಂಕಪಟ್ಟಿಯನ್ನು ಪಾಸ್‌ವರ್ಡ್ ಪ್ರೊಟೆಕ್‌್ಷನ್ ಇರುವ ಇ-ಮೇಲ್ ಮೂಲಕ ಅಭ್ಯರ್ಥಿಗಳಿಗೆ ಕಳುಹಿಸುವುದು ಸಾಮಾನ್ಯ. ಆದರೆ, 2015ನೇ ಸಾಲಿನ ಮುಖ್ಯ ಪರೀಕ್ಷೆಯ ಅಂಕ ಪಟ್ಟಿಯನ್ನು ಪಾಸ್‌ವರ್ಡ್ ಪ್ರೊಟೆಕ್ಷನ್ ಇಲ್ಲದೆ ಕಳುಹಿಸಲಾಗಿದೆ. ಈ ಪಟ್ಟಿಗೆ ಪರೀಕ್ಷಾ ನಿಯಂತ್ರಕರು ಹಾಗು ಕಾರ್ಯದರ್ಶಿಯವರ ಸಹಿ ಹಾಕಿಲ್ಲ. ಜೊತೆಗೆ ಆಯೋಗದ ಲಾಂಛನವೂ ಇಲ್ಲ ಎಂದು ಆರೋಪಿಸಿದ್ದಾರೆ.
ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನಿಡಬೇಕು ಎಂಬುದು ನಿಯಮಗಳಲ್ಲಿ ಇಲ್ಲ. ಆದರೂ ಕಾಲಾವಕಾಶ ನೀಡಲಾಗಿದೆ. ಸೂಕ್ತ ಸಮಯಕ್ಕೆ ಅಂಕ ಪಟ್ಟಿಯನ್ನು ಅಭ್ಯರ್ಥಿಗಳಿಗೆ ತಲುಪಿಸಲಾಗಿದೆ. ಈ ಬಗ್ಗೆ ಕೆಲವು ಅಭ್ಯರ್ಥಿಗಳು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿವೆ.
- ಜಿ.ಸತ್ಯವತಿ, ಕೆಪಿಎಸ್‌ಸಿ ಕಾರ್ಯದರ್ಶಿ