ಕೆಎಸ್ಆರ್ಪಿ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ ಅಭ್ಯರ್ಥಿಯೊಬ್ಬ, ಇತ್ತೀಚೆಗೆ ನಡೆದ ಗ್ರಾಮ ಆಡಳಿತಾಧಿಕಾರಿ (VAO) ಪರೀಕ್ಷೆಯಲ್ಲಿ 151 ಅಂಕ ಗಳಿಸಿದ್ದು, ಭಾರೀ ಅಕ್ರಮದ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಮಗ್ರ ತನಿಖೆಗೆ ಆದೇಶಿಸಿದೆ.
ಬೆಂಗಳೂರು (ಅ.28): ರಾಜ್ಯದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆಯೇ ಎಂಬ ಅನುಮಾನ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೆಎಸ್ಆರ್ಪಿ (KSRP) ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ ಸಾಧಾರಣ ಅಭ್ಯರ್ಥಿಯೊಬ್ಬ, ವಿಎಒ ಪರೀಕ್ಷೆಯಲ್ಲಿ ಬರೋಬ್ಬರಿ 151 ಅಂಕಗಳನ್ನು ಪಡೆದಿರುವುದು ಬೆಳಕಿಗೆ ಬಂದಿದೆ. ಈ ಅನುಮಾನಾಸ್ಪದ ಬೆಳವಣಿಗೆಯ ವಿರುದ್ಧ ಅಭ್ಯರ್ಥಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಮಗ್ರ ತನಿಖೆಗೆ ಆದೇಶಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಭುಗಿಲೆದ್ದ ಆಕ್ರೋಶ:
ಹಾವೇರಿ ಜಿಲ್ಲೆಯ ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಅಕ್ಟೋಬರ್ 4ರಂದು ನಡೆದ ವಿಎಒ ಪರೀಕ್ಷೆಯನ್ನು ಅದೇ ಜಿಲ್ಲೆಯ ಶಂಕರ ಬನ್ನೂರು ಎಂಬ ಅಭ್ಯರ್ಥಿ ಬರೆದಿದ್ದರು. ಈ ಅಭ್ಯರ್ಥಿಯ ಶೈಕ್ಷಣಿಕ ಹಿನ್ನೆಲೆ ಅಷ್ಟೇನೂ ಹೇಳಿಕೊಳ್ಳುವಂತಿಲ್ಲ. ಅಲ್ಲದೆ, ಇತ್ತೀಚೆಗೆ ನಡೆದ ಕೆಎಸ್ಆರ್ಪಿ ಪರೀಕ್ಷೆಯಲ್ಲಿ ಕೇವಲ 25 ಅಂಕಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದರು. ಆದರೆ, ಕಠಿಣ ಸ್ಪರ್ಧೆ ಇರುವ ವಿಎಒ ಪರೀಕ್ಷೆಯಲ್ಲಿ ದಿಢೀರನೆ 151 ಅಂಕಗಳನ್ನು ಗಳಿಸಿದ್ದು ಹೇಗೆ? ಇಲ್ಲಿ ಪರೀಕ್ಷಾ ಅಕ್ರಮ ಅಥವಾ ಭ್ರಷ್ಟಾಚಾರ ನಡೆದಿದೆಯೇ? ಎಂಬ ಗಂಭೀರ ಅನುಮಾನಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಹಗಲಿರುಳು ಕಷ್ಟಪಟ್ಟು ಓದಿದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು.
ಶಿಗ್ಗಾವಿ ಕೇಂದ್ರದ ಸಿಸಿಟಿವಿ ಪರಿಶೀಲನೆಗೆ ಹಾವೇರಿ ಡಿಸಿಗೆ ಪತ್ರ:
ಈ ಎಲ್ಲಾ ಗೊಂದಲ ಮತ್ತು ಶಂಕೆಗಳಿಗೆ ತೆರೆ ಎಳೆಯಲು ಮುಂದಾಗಿರುವ ಕೆಇಎ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಜಿಲ್ಲಾ ಪರೀಕ್ಷಾ ಮುಖ್ಯ ಅಧೀಕ್ಷಕರೂ ಆಗಿರುವ ಹಾವೇರಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿರುವ ಕೆಇಎ, "ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ನಿಯಮಗಳ ಉಲ್ಲಂಘನೆ ಅಥವಾ ಲೋಪಗಳು ಆಗಿವೆಯೇ ಎಂಬುದನ್ನು ಸಿಸಿಟಿವಿ (CCTV) ವಿಡಿಯೋ ತುಣುಕುಗಳ ಮೂಲಕ ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡಬೇಕು. ಒಂದು ವೇಳೆ ಯಾವುದೇ ಅಕ್ರಮ ಸಾಬೀತಾದರೆ ತಕ್ಷಣವೇ ಪೊಲೀಸರಿಗೆ ದೂರು ನೀಡಿ ಎಫ್ಐಆರ್ ದಾಖಲಿಸಬೇಕು" ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕೆಇಎ ತಪಾಸಣೆಯಲ್ಲಿ ಕಂಡುಬಂದ ಪ್ರಮುಖ ಅಂಶಗಳು:
ಪ್ರಾಧಿಕಾರವು ಪ್ರಾಥಮಿಕವಾಗಿ ತನ್ನ ಸರ್ವರ್ ಹಾಗೂ ದಾಖಲೆಗಳನ್ನು ಪರಿಶೀಲಿಸಿದ್ದು, ಕೆಳಗಿನ ಅಂಶಗಳನ್ನು ಸ್ಪಷ್ಟಪಡಿಸಿದೆ:
ಅಭ್ಯರ್ಥಿಯೇ ಪರೀಕ್ಷೆ ಬರೆದಿದ್ದಾನೆ: ಅರ್ಜಿ ಸಲ್ಲಿಸಿದ ಮೂಲ ಅಭ್ಯರ್ಥಿಯೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದು, ಮುಖ ಚಹರೆ (Face Recognition) ತಂತ್ರಜ್ಞಾನದ ಮೂಲಕ ಇದು ದೃಢಪಟ್ಟಿದೆ.
ಒಎಂಆರ್ (OMR) ಶೀಟ್ ನೈಜತೆ: ಅಭ್ಯರ್ಥಿಗೆ ನೀಡಲಾದ ಒಎಂಆರ್ ಶೀಟ್ ಸರಿಯಾಗಿದ್ದು, ಅಕ್ಟೋಬರ್ 5ರಂದೇ ಅದನ್ನು ಸ್ಕ್ಯಾನ್ ಮಾಡಿ ಕೆಇಎ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ದಾಖಲೆಗಳಲ್ಲಿ ವ್ಯತ್ಯಾಸ: ಅಭ್ಯರ್ಥಿಯು 2013ರಲ್ಲೇ ದ್ವಿತೀಯ ಪಿಯುಸಿ ಉತ್ತೀರ್ಣರಾಗಿದ್ದು, ಇದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಡೇಟಾದೊಂದಿಗೆ ಮ್ಯಾಚ್ ಆಗಿದೆ. ಆದರೆ, ಇದೇ ಅಭ್ಯರ್ಥಿ ಕೆಎಸ್ಆರ್ಪಿ ಅರ್ಜಿಯಲ್ಲಿ ತಾನು 2026ರಲ್ಲಿ ಪಾಸಾಗಿದ್ದೇನೆ ಎಂದು ತಿದ್ದುಪಡಿ ಮಾಡಿಕೊಂಡಿರುವುದು ಸರ್ವರ್ನಲ್ಲಿ ದಾಖಲಾಗಿದೆ.
ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗಲು ಬಿಡೆವು:
ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಐಎಎಸ್, 'ಕಷ್ಟಪಟ್ಟು ಓದುವ ಅರ್ಹ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು. ಪರೀಕ್ಷೆಗಳನ್ನು ಶೇ. 100ರಷ್ಟು ಪಾರದರ್ಶಕವಾಗಿ ನಡೆಸಲು ಕಳೆದ 2 ವರ್ಷಗಳಿಂದ ಒಎಂಆರ್ ಪ್ರತಿಗಳನ್ನು ಸ್ಕ್ಯಾನ್ ಮಾಡಿ ವೆಬ್ಸೈಟ್ಗೆ ಹಾಕುವುದು ಸೇರಿದಂತೆ ಹತ್ತು ಹಲವು ಕ್ರಾಂತಿಕಾರಿ ಕ್ರಮಗಳನ್ನು ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯ ನಡುವೆಯೂ ಪರೀಕ್ಷಾ ಕೇಂದ್ರದಲ್ಲಿ ಏನಾದರೂ ಸ್ಥಳೀಯ ಲೋಪಗಳಾಗಿದ್ದರೆ, ಅದನ್ನು ಬಯಲಿಗೆಳೆದು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿಯೇ ಈ ತನಿಖೆಗೆ ಆದೇಶಿಸಲಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ.






