ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ದೂರು ಕೊಟ್ಟ ಪರೀಕ್ಷಾರ್ಥಿ!
ಬೀದರ್‌ನಲ್ಲಿ ನಡೆದ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಸೀಲ್ ಓಪನ್ ಆಗಿದ್ದ ಪ್ರಶ್ನೆ ಪತ್ರಿಕೆ ವಿತರಿಸಲಾಗಿದೆ ಎಂದು ಅಭ್ಯರ್ಥಿಯೊಬ್ಬರು ದೂರು ನೀಡಿದ್ದಾರೆ. ಈ ಮೂಲಕ ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಬೀದರ್ (ಸೆ.29): ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಇಂದು ರಾಜ್ಯಾದ್ಯಂತ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ -2024ಗೆ (Village Administrative Officer Recruitment -2024) ನಡೆಸಲಾದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಎಡವಟ್ಟು ನಡೆದಿದೆ. ಬೀದರ್ ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ಸೀಲ್ ಓಪನ್ ಆಗಿದ್ದ ಪ್ರಶ್ನೆ ಪತ್ರಿಕೆಯನ್ನು ವಿತರಣೆ ಮಾಡಲಾಗಿದ್ದು, ಪರೀಕ್ಷಾರ್ಥಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿಯ ಕಡ್ಡಾಯ ಕನ್ನಡ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಪರೀಕ್ಷಾರ್ಥಿಯಿಂದ ದೂರು ನೀಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ನಮಗೆ ಸೀಲ್ ಓಪನ್ ಮಾಡಿದ ಪ್ರಶ್ನೆ ಪತ್ರಿಕೆ (Seal Opened question Paper) ಹಂಚಿಕೆ ಮಾಡಲಾಗಿದೆ ಎಂದು ಪರೀಕ್ಷಾರ್ಥಿಯಿಂದ ಪರೀಕ್ಷಾ ಪ್ರಾಧಿಕಾರಕ್ಕೆ ದೂರು ಬಂದಿದೆ. ಕಡ್ಡಾಯ ಕನ್ನಡ ಪ್ರಶ್ನೆ ಪತ್ರಿಕೆಯ ಸೀಲ್ ಓಪನ್ ಆಗಿದೆಯೆಂದು ಪರೀಕ್ಷಾರ್ಥಿ ದೂರು ನೀಡಿದ್ದಾನೆ. ಈ ಮೂಲಕ ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ, ಯಾರೋ ಇದನ್ನು ಸೋರಿಕೆ ಮಾಡಿದ್ದಾರೆ ಎಂದು ಪರೀಕ್ಷಾ ಅಭ್ಯರ್ಥಿ ದೂರಿನಲ್ಲಿ ಆರೋಪ ಮಾಡಿದ್ದಾನೆ.
ಇದನ್ನೂ ಓದಿ: ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಆಕಾಂಕ್ಷಿಗಳೇ ಈ ಸುದ್ದಿ ಓದಿ: ಕೆಲಸದ ಒತ್ತಡಕ್ಕೆ 50 ವಿಲೇಜ್ ಅಕೌಂಟೆಂಟ್‌ಗಳ ಸಾವು!
ರಾಜ್ಯಾದ್ಯಂತ ಭಾನುವಾರ (ಸೆ.29ರಂದು) ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಬೀದರ್ ಜಿಲ್ಲಾ ಕೇಂದ್ರದಲ್ಲಿನ ದತ್ತಗಿರಿ ಕಾಲೇಜಿನ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿ ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲಾಗುತ್ತಿದ್ದ ಕೇಂದ್ರದಲ್ಲಿ ಈ ಎಡವಟ್ಟು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಹಾಜರಾಗಿದ್ದ ಅಭ್ಯರ್ಥಿ ತಮಗೆ ಸೀಲ್ ಓಪನ್ ಮಾಡಿದ ಪ್ರಶ್ನೆ ಪತ್ರಿಕೆ ಬಂದಿದ್ದಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲೆ ಚಿಂಚೋಳಿ ಮೂಲದ ಸಂತೋಷ್ ಎಂಬ ಪರೀಕ್ಷಾರ್ಥಿ ಅಸಮಧಾನ ವ್ಯಕ್ತಪಡಿಸಿದ ಅಭ್ಯರ್ಥಿ ಆಗಿದ್ದಾನೆ. ಸರ್ಕಾರಿ ಹುದ್ದೆಗಳ ನೇಮಕಾತಿ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಪ್ರಶ್ನೆ ಪತ್ರಿಕೆಗಳ ಬಂಡಲ್ ಅನ್ನು ಸೀಲ್ ಮಾಡಲಾಗಿರುತ್ತದೆ. ಪರೀಕ್ಷಾ ಅಭ್ಯರ್ಥಿಗಳ ಕೋಣೆಯಲ್ಲಿ ಸೀಲ್ಡ್ ಪ್ಯಾಕ್ ಅನ್ನು ಪ್ರದರ್ಶನ ಮಾಡಿ ನಂತರ ಅದಕ್ಕೆ ಕೆಲ ಅಭ್ಯರ್ಥಿಗಳಿಂದ ಸಹಿ ಹಾಕಿಸಿಕೊಂಡು ಎಲ್ಲರೆದುರಿಗೆ ಓಪನ್ ಮಾಡಲಾಗುತ್ತದೆ. ಆದರೆ, ಬೀದರ್ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಬಂಡಲ್ ಮೊಲದೇ ಓಪನ್ ಆಗಿತ್ತು. ಜೊತೆಗೆ, ಪ್ರಶ್ನೆ ಪತ್ರಿಕೆಯ ಸೀಲ್ ಕೂಡ ಓಪನ್ ಆಗಿತ್ತು ಎಂದು ಕೇಳಿಬಂದಿದೆ.
ಇದನ್ನೂ ಓದಿ: ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಸಿಹಿಸುದ್ದಿ: ಎಲ್ಲ ವರ್ಗಕ್ಕೂ 3 ವರ್ಷ ವಯೋಮಿತಿ ಸಡಿಲಿಸಿದ ಸರ್ಕಾರ!
ಈ ಕುರಿತಂತೆ ಪರೀಕ್ಷೆ ಬರೆದ ಅಭ್ಯರ್ಥಿ ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾನೆ. ಮುಂದುವರೆದು ಸೀಲ್ ಓಪನ್ ಆಗಿದ್ದಕ್ಕೆ ಪ್ರಶ್ನೆ ಪತ್ರಿಕೆಯನ್ನು ನೋಡಿ, ಪರೀಕ್ಷೆ ನಡೆಯುವ ಮೊದಲೇ ಈ ಪ್ರಶ್ನೆ ಪತ್ರಿಕೆ ಬೇರೆಯವರಿಗೆ ಲೀಕ್ ಆಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾನೆ. ಆದರೆ, ಇದಕ್ಕೆ ಪರೀಕ್ಷಾ ಪ್ರಾಧಿಕಾರ ಹಾಗೂ ಸರ್ಕಾರ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.