ಪಿಡಬ್ಲ್ಯೂಡಿ ಹುದ್ದೆಗೂ ಕೆಎಎಸ್ ನೇಮಕಾತಿ ಪದ್ಧತಿ ಪಾಲಿಸಲು ಒತ್ತಾಯ
ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಹುದ್ದೆ ಸಂದರ್ಶನಕ್ಕೆ ಕನಿಷ್ಠ-ಗರಿಷ್ಟಅಂಕ ನಿಯಮ ಪಾಲಿಸಲು ಒತ್ತಾಯ. ಕೆಪಿಎಸ್ಸಿಯಿಂದ ನ.7ಕ್ಕೆ ಸಂದರ್ಶನ. ಅಭ್ಯರ್ಥಿಗಳಿಗೆ ಮಧ್ಯವರ್ತಿಗಳ ಕರೆ. 300 ಕೋಟಿ ರು. ಅಕ್ರಮ ಸಾಧ್ಯತೆ ಆರೋಪ
ಬೆಂಗಳೂರು (ನ.5): ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನ.7 ರಿಂದ ನಡೆಸಲಿರುವ ಲೋಕೋಪಯೋಗಿ ಇಲಾಖೆ 660 ಸಹಾಯಕ ಇಂಜಿನಿಯರ್ ಹುದ್ದೆಗಳ ಸಂದರ್ಶನದಲ್ಲಿ ಕೆಎಎಸ್ ನೇಮಕಾತಿಯಂತೆ ಗರಿಷ್ಠ 40 -ಕನಿಷ್ಠ ಅಂಕ 20 ನೀಡುವ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿಗಳ ಸಂಘ ಒತ್ತಾಯಿಸಿದೆ. ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷೆ ಭವ್ಯ ನರಸಿಂಹಮೂರ್ತಿ, ‘ಕೆಪಿಎಸ್ಸಿ 2021ರಲ್ಲಿ ಕಲ್ಯಾಣ ಕರ್ನಾಟಕದ ಜಲಸಂಪನ್ಮೂಲ ಇಲಾಖೆ ಸಹಾಯಕ ಇಂಜಿನಿಯರ್ ಹುದ್ದೆ ನೇಮಕಾತಿ ಸಂದರ್ಭದಲ್ಲಿ ಪಿಸಿ ಹೊಟಾ ಸಮಿತಿ ಶಿಫಾರಸುಗಳನ್ನು ಗಾಳಿಗೆ ತೂರಿ ಸಂದರ್ಶನ ನಡೆಸಿದ್ದು, ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳು ಪಡೆದರೂ ಕೂಡ ಸಂದರ್ಶನದಲ್ಲಿ 50 ಅಂಕಗಳಿಗೆ 15 ಅಂಶಗಳಿಗಿಂತ ಕಡಿಮೆ ನೀಡಿ ತಾತ್ಕಾಲಿಕ ಪಟ್ಟಿಯಿಂದ ಅರ್ಹ ಅಭ್ಯರ್ಥಿಗಳನ್ನು ಹೊರಗಿಟ್ಟಿದ್ದಾರೆ. ಅಲ್ಲದೆ, ಕಡಿಮೆ ಅಂಕ ಪಡೆದಿರುವ ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ 50 ಅಂಕಗಳಿಗೆ 45 ಕ್ಕಿಂತ ಹೆಚ್ಚು ಅಂಕಗಳನ್ನು ನೀಡಿದ್ದಾರೆ. ಇದು ಅಕ್ರಮ ನಡೆದಿರುವುದರ ಬಗ್ಗೆ ಅನುಮಾನ ಹುಟ್ಟಿದೆ ಎಂದರು.
ರಾಜ್ಯ ನೌಕರರ ನೇಮಕಕ್ಕೂ ಕೇಂದ್ರ ಪರೀಕ್ಷೆ?: ಕನ್ನಡಿಗ ಉದ್ಯೋಗಾಕಾಂಕ್ಷಿಗಳಲ್ಲಿ ಹೆಚ್ಚಿದ ಆತಂಕ..!
ಇದೇ ರೀತಿಯಲ್ಲಿ ಸದ್ಯ ಕೆಪಿಎಸ್ಸಿ ನಡೆಸುತ್ತಿರುವ ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಹುದ್ದೆ ಸಂದರ್ಶನದಲ್ಲಿಯೂ ಅಕ್ರಮ ಸಾಧ್ಯತೆಗಳಿದ್ದು, ಕೆಎಎಸ್ ಹುದ್ದೆ ನೇಮಕಾತಿ ಸಂದರ್ಶನದಂತೆಯೇ ಇಲ್ಲಿಯೂ ಕನಿಷ್ಠ 40% (20 ಅಂಕಗಳು) ಹಾಗು ಗರಿಷ್ಟಶೇ.80 (40 ಅಂಕಗಳು) ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.
ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ ವಯೋಮಿತಿ 2 ವರ್ಷ ಹೆಚ್ಚಳ
300 ಕೋಟಿ ರು. ಅಕ್ರಮ ನಡೆಯುವ ಸಂಭವ: ಭವ್ಯ
ಕೆಪಿಎಸ್ಸಿ ಈಗಾಗಲೇ ಪಿಡ್ಲ್ಯೂಡಿ ಸಹಾಯಕ ಇಂಜಿನಿಯರ್ 660 ಹುದ್ದೆಗಳ ಪರೀಕ್ಷೆ ನಡೆಸಿ 1:3 ಪ್ರಮಾಣದಲ್ಲಿ ಸಂದರ್ಶನಕ್ಕೆ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಿದೆ. ನ.7 ರಿಂದ ಸಂದರ್ಶನ ಆರಂಭವಾಗುತ್ತಿದ್ದು, ಈಗಾಗಲೇ ಸಂದರ್ಶನಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿಗಳ ಕರೆಗಳು ಅಭ್ಯರ್ಥಿಗಳಿಗೆ ಕರೆಗಳು ಬರುತ್ತಿವೆ. ತಲಾ ಒಂದು ಹುದ್ದೆಗೆ 50 ಲಕ್ಷ ರು. ಅಕ್ರಮ ನಡೆಯುವ ಸಂಭವವಿದೆ. ಈ ಬಗ್ಗೆ ಕೆಪಿಎಸ್ಸಿ ಅಧ್ಯಕ್ಷರ ಭೇಟಿ ಮಾಡಿ ದೂರು ನೀಡಲು ಪ್ರಯತ್ನಿಸಿದ್ದು, ಭೇಟಿಗೆ ಅಧ್ಯಕ್ಷರು ನಿರಾಕರಿಸಿದ್ದಾರೆ. ಈ ಮೂಲಕ ಸಂದರ್ಶನವು ಅಪಾರದರ್ಶಕವಾಗಿ ನಡೆಯುವ ಸಾಧ್ಯತೆಗಳಿದ್ದು, 300 ಕೋಟಿ ರು. ಅಧಿಕ ಅಕ್ರಮ ನಡೆಯುವ ಸಂಭವವಿದೆ ಎಂದು ಭವ್ಯ ನರಸಿಂಹಮೂರ್ತಿ ಆರೋಪಿಸಿದ್ದಾರೆ.