ಬೆಂಗಳೂರು(ಮೇ.17) ಪೊಲೀಸರು ಮುಂಬಡ್ತಿ ಪಡೆದ ಕೂಡಲೇ ‘ಫಲವತ್ತಾದ’ ಹುದ್ದೆಗಳಿಗೆ ನಡೆಸುವ ಲಾಬಿಗೆ ಬ್ರೇಕ್‌ ಹಾಕಿರುವ ರಾಜ್ಯ ಸರ್ಕಾರವು, ಪೊಲೀಸ್‌ ಇಲಾಖೆಯ ಸಿವಿಲ್‌ (ನಾಗರಿಕ)ಸೇವೆಯಲ್ಲಿ ಮುಂಬಡ್ತಿ ಹೊಂದಿದ ಅಧಿಕಾರಿಗಳು ಕಡ್ಡಾಯವಾಗಿ 2 ವರ್ಷಗಳು ಕಾರ್ಯಕಾರ್ಯೇತರ (ನಾನ್‌ ಎಕ್ಸ್‌ಕ್ಯುಟಿವ್‌) ಹುದ್ದೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಶನಿವಾರ ಮಹತ್ವದ ಆದೇಶ ಹೊರಡಿಸಿದೆ.

ಡಿವೈಎಸ್ಪಿ/ಎಸಿಪಿ ಮತ್ತು ಇನ್ಸ್‌ಪೆಕ್ಟರ್‌ಗಳ (ಪಿಐ) ವರ್ಗಾವಣೆಗೆ ಸಂಬಂಧಿಸಿದ ಮಾರ್ಗಸೂಚಿಗೆ ತಿದ್ದುಪಡಿ ತಂದಿರುವ ಸರ್ಕಾರವು, ಡಿವೈಎಸ್ಪಿ ಮತ್ತು ಪಿಐ ಹುದ್ದೆಗೆ ಮುಂಬಡ್ತಿ ಹೊಂದಿದವರು ಕಡ್ಡಾಯವಾಗಿ ಕಾರ್ಯಕಾರ್ಯೇತರ (ಸಿಐಡಿ, ಡಿಸಿಆರ್‌ಇ, ಲೋಕಾಯುಕ್ತ, ಎಸಿಪಿ, ಗುಪ್ತದಳ) ಹುದ್ದೆಯಲ್ಲಿ ಕೆಲಸ ಮಾಡುವಂತೆ ಸೂಚಿಸಿದೆ.

ಬಡ್ತಿ ಹೊಂದಿದ ಅಧಿಕಾರಿಗಳಿಗೆ ಕಾರ್ಯಕಾರ್ಯೇತರ ಹುದ್ದೆಯಲ್ಲಿ ಕೆಲಸ ಮಾಡಿ ಅನುಭವ ಮತ್ತು ತಾಂತ್ರಿಕವಾಗಿ ಕಾರ್ಯಕ್ಷಮತೆ ಹೆಚ್ಚಿಸಲು ಹಾಗೂ ಎಲ್ಲರಿಗೂ ಈ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಣೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ವರ್ಗಾವಣೆ ಮಾರ್ಗಸೂಚಿಯಲ್ಲಿ ತಿದ್ದುಪಡಿಗೊಳಿಸುವಂತೆ ಸರ್ಕಾರಕ್ಕೆ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಹೀಗಿದೆ ಮಾರ್ಗಸೂಚಿಗಳು

- ಮುಂಬಡ್ತಿ ಹೊಂದಿದ ಡಿವೈಎಸ್ಪಿ/ಎಸಿಪಿ ಮತ್ತು ಪಿಐಗಳಿಗೆ ಕಾರ್ಯಕಾರ್ಯೇತರ (ನಾನ್‌ ಎಕ್ಸ್‌ಕ್ಯುಟಿವ್‌) ಹುದ್ದೆಗಳಲ್ಲಿ ಎರಡು ವರ್ಷಗಳು ಕಡ್ಡಾಯ ಸೇವೆ.

- ಡಿವೈಎಸ್ಪಿ ಮತ್ತು ಪಿಐ ಹುದ್ದೆಯಲ್ಲಿರುವವರು ಪೊಲೀಸ್‌ ಕಮೀಷನರೇಟ್‌ನಲ್ಲಿ ಕನಿಷ್ಠ 5 ವರ್ಷ ಮಾತ್ರ ಕಾರ್ಯಕಾರಿ ಹುದ್ದೆಯಲ್ಲಿ (ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ, ಸಿಸಿಬಿ) ಕೆಲಸ ಮಾಡಲು ಅವಕಾಶವಿದೆ. ಈ ಅವಧಿ ಮುಗಿದ ಬಳಿಕ ಆಯಾ ಕಮಿಷನರೇಟ್‌ ವ್ಯಾಪ್ತಿಯಿಂದ ಹೊರಗಿನ ಘಟಕದಲ್ಲಿ ಅವರು 5 ವರ್ಷ ಕಡ್ಡಾಯವಾಗಿ ಕೆಲಸ ಮಾಡಬೇಕು. ಈ ಕೂಲಿಂಗ್‌ ಪೀರಿಯಡ್‌ ಮುಗಿದ ನಂತರ ಮತ್ತೆ ಕಮೀಷನರೇಟ್‌ನಲ್ಲಿ ಕೆಲಸ ಮಾಡಲು ಅಧಿಕಾರಿಗಳು ಅರ್ಹತೆಗಳಿಸುತ್ತಾರೆ.

- ಪ್ರಸುತ್ತ ಸಿಸಿಬಿ ಕರ್ತವ್ಯ ನಿರ್ವಹಿಸುತ್ತಿರುವ ಡಿವೈಎಸ್ಪಿ/ಎಸಿಪಿ ಮತ್ತು ಪಿಐಗಳಿಗೆ ಅವರ ಅವಧಿ ಮುಗಿದ ಬಳಿಕ ಈ ನಿಬಂಧನೆ ಅನ್ವಯವಾಗಲಿದೆ.

- ಬಡ್ತಿ ಹೊಂದಿದ ಅಧಿಕಾರಿಗಳು 2 ವರ್ಷದ ಒಳಗೆ 4 ವಾರಗಳ ಪುನರ್‌ ಮನನ ತರಬೇತಿ ಪಡೆಯಬೇಕು. ಈ ತರಬೇತಿ ಪೂರ್ಣಗೊಳಿಸದವರನ್ನು ಕಾರ್ಯಕಾರಿ ಹುದ್ದೆಗೆ ಪರಿಗಣಸಬಾರದು.

- ಯಾವುದಾದರೂ ಪ್ರಮುಖ ಇಲಾಖಾ ವಿಚಾರಣೆ, ಲೋಕಾಯುಕ್ತ, ಎಸಿಬಿ ಪ್ರಕರಣ, ವಿಚಾರಣೆಯಲ್ಲಿರುವ ಅಪರಾಧ ಪ್ರಕರಣ ಎದುರಿಸುವವರು ಅಥವಾ ಪೊಲೀಸ್‌ ಸಿಬ್ಬಂದಿ ಮಂಡಳಿ ಅನರ್ಹ ಎಂದು ಪರಿಗಣಿಸಿದ ಡಿವೈಎಸ್ಪಿ, ಎಸಿಪಿ ಹಾಗೂ ಪಿಐಯನ್ನು ಕಾರ್ಯಕಾರಿ ಹುದ್ದೆಗೆ ನೇಮಿಸಬಾರದು.

ಹಳೇ ಹುಲಿಗಳಿಗೆ ಬಾಗಿಲು ತೆರೆಯಿತು

ಕಮೀಷನರೇಟ್‌ಗಳಲ್ಲಿ ಎಸಿಪಿ ಮತ್ತು ಪಿಐಗಳಿಗೆ ಐದು ವರ್ಷ ಸೇವಾವಧಿ ನಿಗದಿಪಡಿಸಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ನಿಯಮ ಜಾರಿಗೊಳಿಸಿತು. ಇದರಿಂದ ಹಲವು ವರ್ಷಗಳು ಕಮೀಷನರೇಟ್‌ನಲ್ಲಿ ‘ಫಲವತ್ತಾದ ಹುದ್ದೆ’ಗಳಲ್ಲಿ ವಿರಾಜಮಾನರಾಗಿದ್ದ ಅಧಿಕಾರಿಗಳು ಸ್ಥಾನ ಕಳೆದುಕೊಂಡಿದ್ದರು. ಈ ನಿಯಮ ಬದಲಾವಣೆಗೆ ಹಳೇ ಹುಲಿಗಳು ಭಾರಿ ಲಾಬಿ ನಡೆಸಿದ್ದವು. ಈಗ ‘ಅಜ್ಞಾತ’ವಾಸ ಅನುಭವಿಸಿದ ಹಳೇ ಅಧಿಕಾರಿಗಳು, ಮತ್ತೆ ಕಮಿಷನರೇಟ್‌ ವ್ಯಾಪ್ತಿಯಲ್ಲಿ ರಾರಾಜಿಸಲು ಅವಕಾಶ ಸಿಕ್ಕಿದೆ.

ಸಿಸಿಬಿ ಮತ್ತೆ ಎಕ್ಸ್‌ಕ್ಯುಟಿವ್‌ ಹುದ್ದೆ:

ಮೈತ್ರಿ ಸರ್ಕಾರದಲ್ಲಿ ಪೊಲೀಸ್‌ ವರ್ಗಾವಣೆಗೆ ತಿದ್ದುಪಡಿ ತಂದು ಸಿಸಿಬಿಯನ್ನು ನಾನ್‌ ಎಕ್ಸಿಕ್ಯುಟಿವ್‌ ಹುದ್ದೆ ಎಂದೂ ಪರಿಗಣಿಸಲಾಗಿತ್ತು. ಇದರಿಂದ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಐದು ವರ್ಷ ಸೇವಾವಧಿ ಮುಗಿದ ನಂತವು ಸಿಸಿಬಿಯಲ್ಲಿ ಹುದ್ದೆ ಪಡೆಯಲು ಅವಕಾಶವಿತ್ತು. ಈಗ ಸಿಸಿಬಿಯನ್ನು ಸರ್ಕಾರ ಮತ್ತೆ ಎಕ್ಸಿಕ್ಯುಟಿವ್‌ ಎಂದಿದೆ. ಹೀಗಾಗಿ ಸಿಸಿಬಿಗೆ ಹೊಸ ನೀರು ಹರಿಯಲು ಅವಕಾಶ ಸಿಕ್ಕಿದೆ.