ಬೆಂಗಳೂರು, (ಮೇ.18): ಲಾಕ್‌ಡೌನ್‌ ಸಡಿಲಗೊಳಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನೆಲ್ಲಾ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸುತ್ತೋಲೆ ಹೊರಡಿಸಿದೆ.

ಲಾಕ್‌ಡೌನ್ 4.0 ಸಡಿಲಿಕೆ ಮಾಡಿರುವುದರಿಂದ ನಾಳೆಯಿಂದ (ಮೇ.19) ಶೇಕಡಾ 100ರಷ್ಟು ಸರ್ಕಾರಿ ನೌಕರರು ಕಚೇರಿಗೆ ಹಾಜರಾಗಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ,ವಿಜಯಭಾಸ್ಕರ್ ಇಂದು (ಸೋಮವಾರ) ಆದೇಶಿಸಿದ್ದಾರೆ.

ಹೊಸ ರೀತಿಯ ಲಾಕ್‌ಡೌನ್ 4.0: ಕರ್ನಾಟಕದಲ್ಲಿ ಏನಿರುತ್ತೆ? ಏನಿರಲ್ಲ?

ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಅತ್ಯಗತ್ಯ ಸೇವೆ ಒದಗಿಸುವ ಇಲಾಖೆಯ ಸಿಬ್ಬಂದಿಯನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸರ್ಕಾರಿ ನೌಕರರಿಗೆ ರಜೆ ನೀಡಲಾಗಿತ್ತು. 

ಇದೀಗ ರಾಜ್ಯ ಸರ್ಕಾರ ಮಂಗಳವಾರದಿಂದ ಸಾರಿಗೆ ಬಸ್ ಆರಂಭಿಸಿರುವುದರಿಂದ ಸಿಬ್ಬಂದಿ ಹಾಜರಾತಿ ಕಡ್ಡಾಯವಾಗಿದ್ದು, ಎ.ಬಿ.ಸಿ ಹಾಗೂ ಡಿ ವೃಂದದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ, ಸ್ವಾಯತ್ತ ಸಂಸ್ಥೆ, ನಿಗಮ, ಮಂಡಳಿ ಕಚೇರಿಗಳ ಸಿಬ್ಬಂದಿ ಶೇ.100ರಷ್ಟು ಅವರವರ ಕರ್ತವ್ಯಕ್ಕೆ ಹಾಜರಾಗತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಜತೆಗೆ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.