ಸರ್ಕಾರಿ ಆಸ್ಪತ್ರೆಗಳ 7,045 ಗುತ್ತಿಗೆ ನೌಕರರ ಸೇವೆ 2025ರವರೆಗೆ ವಿಸ್ತರಣೆ: ಹೆಚ್.ಕೆ. ಪಾಟೀಲ
ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ 7045 ಗುತ್ತಿಗೆ ನೌಕರರ ಸೇವೆಯನ್ನು 2025ರ ಮಾರ್ಚ್‌ವರೆಗೆ ವಿಸ್ತರಿಸಲಾಗುವುದು. ಲೋಕಾಯುಕ್ತದಲ್ಲಿ ಖಾಲಿ ಇರುವ ಹುದ್ದೆಗಳಿಗೆ 12 ನಿವೃತ್ತ ಅಧಿಕಾರಿಗಳನ್ನು ನೇಮಿಸಲಾಗುವುದು. ರಾಯಚೂರು ವಿಶ್ವವಿದ್ಯಾಲಯವನ್ನು ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗುವುದು.
ಬೆಂಗಳೂರು (ಅ.28): ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 7045 ನೌಕರರ ಸೇವೆಯನ್ನು 2025ರ ಮಾರ್ಚ್‌ವರೆಗೆ ಮುಂದುವರೆಸಲಾಗುವುದು ಎಂದು ಕರ್ನಾಟಕದ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಮಂಜೂರಾದ ಒಟ್ಟು 7045 ಸಮುದಾಯ ಆರೋಗ್ಯಧಿಕಾರಿಗಳ ಹುದ್ದೆಗಳ ಕಾಲಾವಧಿಯನ್ನು ಗುತ್ತಿಗೆ ಆಧಾರದಲ್ಲಿ 2025ನೇ ಮಾರ್ಚ್ ಅಂತ್ಯದವರೆಗೆ ಮುಂದುವರೆಸುವ ಬಗ್ಗೆ ಸಂಪುಟ ಸಭೆ ತಿರ್ಮಾನ ಮಾಡಲಾಗಿದೆ. ಈ ಮೂಲಕ ಅವರ ಸೇವೆಯನ್ನು ಇನ್ನೂ ಆರು ತಿಂಗಳ ಕಾಲ ಮುಂದುವರಿಕೆ ಮಾಡಲಾಗುತ್ತದೆ. ಮುಂದುವರೆದು, ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗಳಿಗೆ ಅಭಿಯೋಜನಾ ಇಲಾಖೆಯ 12 ನಿವೃತ್ತ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಸಚಿವ ಜಮೀರ್ ಅಹಮದ್, ಆಧುನಿಕ ಟಿಪ್ಪು ಸುಲ್ತಾನ್ ಆಗಲು ಹೊರಟಿದ್ದಾರೆ: ಆರ್. ಅಶೋಕ್
ಬೆಂಗಳೂರಿನ ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು (KSRP) 1ನೇ ಪಡೆಯ ಆವರಣದಲ್ಲಿ ಸುಸಂಘಟಿತ ಪೊಲೀಸ್ ಭವನ ನಿರ್ಮಾಣ ಕಾಮಗಾರಿಗಾಗಿ 102.80 ಕೋಟಿಗಳ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬೀಜೋತ್ಪಾದನಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಜೈವಿಕ ನಿಯಂತ್ರಣ/ ಪರತಂತ್ರ ಜೀವಿ ಪ್ರಯೋಗಾಲಯಗಳು ಈ ನಾಲ್ಕು ಘಟಕಗಳನ್ನು ಒಂದೇ ಸೂರಿನಡಿ ತಂದು ಅಭಿವೃದ್ಧಿಪಡಿಸಲು “ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿಯನ್ನು ಸ್ಥಾಪಿಸುವ ಬಗ್ಗೆ ಸಂಪುಟ ಸಭೆ ನಿರ್ಣಯ ಕೈಗೊಳ್ಳಲಾಗಿದೆ. ಆರ್ಥಿಕ ಇಲಾಖೆಯ GST ಎರಡನೇ ತಿದ್ದುಪಡಿ ವಿಧೇಯಕ, 2024"ಕ್ಕೆ ಸುಗ್ರೀವಾಜ್ಞೆ ತರುವ ಬಗ್ಗೆ ಸಂಪುಟ ಸಭೆ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ರಾಯಚೂರು ವಿಶ್ವವಿದ್ಯಾಲಯ ಮರು ನಾಮಕರಣಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಇನ್ನು ಮುಂದೆ ರಾಯಚೂರು ವಿಶ್ವ ವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಲಾಗುವುದು. ಈ ಬಗ್ಗೆಸ್ವತಃ ಸಿಎಂ ಸಿದ್ದರಾಮಯ್ಯ ಅವರು ವಾಲ್ಮೀಕಿ ಜಯಂತಿ ವೇಳೆ ಮಾಹಿತಿ ನೀಡಿದ್ದರು. ಇದೀಗ ಕ್ಯಾಬಿನೆಟ್ ನಲ್ಲಿ ರಾಯಚೂರು ವಿವಿಯನ್ನ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ಮರುನಾಮಕರಣಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.