16000 ಶಿಕ್ಷಕರ ನೇಮಕಾತಿಯ ಬಿಗ್ ಅಪ್ಡೇಟ್ ಕೊಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ!
ಕರ್ನಾಟಕ ಸರ್ಕಾರ ಶೀಘ್ರದಲ್ಲೇ 16,000 ಹುದ್ದೆಗಳನ್ನು ಭರ್ತಿ ಮಾಡಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 6,000 ಹುದ್ದೆಗಳು ಸೇರಿವೆ. 'ನಮ್ಮ ಶಾಲೆ ನಮ್ಮ ಜವಾಬ್ದಾರಿ' ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 39,000 ವಾಟ್ಸಪ್ ಗುಂಪುಗಳನ್ನು ರಚಿಸಲಾಗಿದೆ.

ದಾವಣಗೆರೆ (ಫೆ.07): ರಾಜ್ಯದಲ್ಲಿ ಈಗಾಗಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ. ಶೀಘ್ರವಾಗಿ ಕಲ್ಯಾಣ ಕರ್ನಾಟಕದ 6 ಸಾವಿರ ಸೇರಿದಂತೆ ರಾಜ್ಯದಲ್ಲಿ 16 ಸಾವಿರ ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಾಥಮಿಕ ಶಾಲೆಗಳಿಗೆ 13 ಸಾವಿರ ಶಿಕ್ಷರರನ್ನು ನೇಮಿಸಿದ್ದೇವೆ. ಈ ಬಾರಿ 16 ಸಾವಿರ ಶಿಕ್ಷಕರ ಜೊತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ 6 ಸಾವಿರ ಹುದ್ದೆಗಳನ್ನು ಶೀಘ್ರದಲ್ಲಿ ತುಂಬುತ್ತೇವೆ. ನಮ್ಮ ಶಾಲೆ ನಮ್ಮ ಜವಬ್ಧಾರಿ ಸ್ಕೀಮ್ ನಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕಾಗಿ 39 ಸಾವಿರ ವಾಟ್ಸಪ್ ಗ್ರೂಪ್ ಗಳನ್ನು ನಾವು ಮಾಡಿದ್ದೇವೆ. 5 ಸಾವಿರ ರೂ.ನಿಂದ 5 ಕೋಟಿಯವರಗೂ ಅನುದಾನ ಬಂದಿದೆ. ಏಷ್ಯನ್ ಡೆವಲಪಪ್‌ಮೆಂಟ್ ಬ್ಯಾಂಕ್ (ಎಡಿಬಿ ಬ್ಯಾಂಕ್) ಇತರ ಮೂಲಗಳಿಂದ ಅನುದಾನ ಬರುತ್ತಿದೆ. ಈ ಬಜೆಟ್‌ನಲ್ಲಿ 5000 ಹೊಸ ಕೊಠಡಿಗಳನ್ನು ನಿರ್ಮಿಸಲು ಬೇಡಿಕೆ ಇಟ್ಟಿದ್ದೇವೆ. ಸರ್ಕಾರ ಸಹಭಾಗಿತ್ವ ಹಾಗೂ ಜನಪ್ರತಿನಿಧಿಗಳ ಭಾಗಿತ್ವದಲ್ಲಿ ಸರ್ಕಾರಿ ಶಾಲೆ ಉತ್ತಮ ಪಡಿಸುತ್ತೇವೆ ಎಂದು ಮಾಹಿತಿ ನೀಡಿದರು.
ಮುಂದುವರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಡಾ ಕೇಸಿನ ಬಗ್ಗೆ ಮಾತನಾಡಿದ ಅವರು, ಮುಡಾ ಕೇಸನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ ಎಂದು ಲೋಕಾಯುಕ್ತ ಕೋರ್ಟ್ ಹೇಳಿದೆ. ಮುಡಾ ನಿವೇಶನ ಹಂಚಿಕೆ ಬಗ್ಗೆ ಅನವಶ್ಯಕವಾಗಿ ಪ್ರಕರಣ ದಾಖಲಾಗಿತ್ತು. 13 ವರ್ಷಗಳ ಹಿಂದಿನ ಪ್ರಕರಣದಲ್ಲಿ ಸಿಎಂ ಪಾತ್ರ ಇಲ್ಲ ಎಂಬುದು ಸಾಬೀತಾಗಿದೆ. ಸುಪ್ರೀಂ ಕೋರ್ಟ್ ಗೆ ಹೋಗುವವರನ್ನು ಹೋಗಬೇಡಿ ಎಂದು ಹೇಳೋಕೆ ಆಗೊಲ್ಲ. ಕಾನೂನಿನಲ್ಲಿ ಅದಕ್ಕೆ ಅವರಿಗೆ ಅವಕಾಶ ಇದೆ. ಅನವಶ್ಯಕವಾಗಿ ಪ್ರಕರಣ ದಾಖಲಿಸಿರುವುದನ್ನು ಲೋಕಾಯುಕ್ತ ಕೋರ್ಟ್ ಎತ್ತಿಹಿಡಿದಿದೆ. ಮುಂದಿನ ತನಿಖೆಗಳು ಕಾನೂನುಬದ್ದವಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ಇದನ್ನೂ ಓದಿ: ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಏರಿಕೆ ಖಚಿತ: ಸಚಿವ ಮಧು ಬಂಗಾರಪ್ಪ
ನಮಗೆ ನ್ಯಾಯಾಂಗದ ಮೇಲೆ ವಿಶ್ವಾಸವಿದೆ. ಇವತ್ತು ಅದಕ್ಕೆ ಉದಾಹರಣೆ ತೋರಿಸಿದ್ದಾರೆ. ವೈಯಕ್ತಿಕವಾಗಿ ಹಿಂದುಳಿದ ನಾಯಕನಿಗೆ ತೊಂದರೆ ಕೊಡಬೇಕು ಎನ್ನುವ ಚಿಂತನೆ ಮಾಡಿದ್ದರು. ಇವತ್ತು ಆ ತರದ್ದು ನಡೆಯೋದಿಲ್ಲ ಎಂದು ಹೈಕೋರ್ಟ್ ತೋರಿಸಿಕೊಟ್ಟಿದೆ. ಬಿಜೆಪಿಯವರು ಹೇಳಿದ ಪ್ರಶ್ನೆಗೆ ನಾನು ಉತ್ತರ ಕೊಡುವುದಿಲ್ಲ. ನ್ಯಾಯಾಲಯ ವಿಷಯಕ್ಕೆ ಮಾತ್ರ ನಾನು ಉತ್ತರ ಕೊಟ್ಟಿದ್ದೀನಿ ಅಷ್ಟು ಸಾಕು. ಅವರು ಸುಪ್ರೀಂ ಕೋರ್ಟ್ ಹೋಗೋದಾದರೆ, ನಾವು ಸುಪ್ರೀಂ ಕೋರ್ಟ್‌ಗೆ ಹೋಗ್ತೀವಿ. ಇವತ್ತಿನ ವಿಚಾರಕ್ಕೆ ಅದು ಗೆಲುವು ಅಂತ ಹೇಳಿ ಪ್ರಶ್ನೆ ಅಲ್ಲ. ಈ ಕೇಸಿನಲ್ಲಿ ಸಿದ್ದರಾಮಯ್ಯಗೆ ತೊಂದರೆ ಕೊಡಬೇಕು ಎಂದೇ ರಾಜಕಾರಣ ಮಾಡ್ತಿದ್ದಾರೆ ಎಂದು ಹೇಳಿದರು.