Asianet Suvarna News Asianet Suvarna News

‘ಕನ್ನಡಕ್ಕಾಗಿ ನಾವು’ : 20 ಲಕ್ಷ ಕಂಠಗಳಲ್ಲಿ ಮೊಳಗಿತು ಕನ್ನಡ ಡಿಂಡಿಮ!

* ನಿತ್ಯ ಕನ್ನಡದಲ್ಲೇ ವ್ಯವಹರಿಸುವ ಪಣ

* 20 ಲಕ್ಷ ಕಂಠಗಳಲ್ಲಿ ಮೊಳಗಿತು ಕನ್ನಡ ಡಿಂಡಿಮ

* ‘ಕನ್ನಡಕ್ಕಾಗಿ ನಾವು’ ಅಭಿಯಾನದ ಅಂಗವಾಗಿ 447 ಸ್ಥಳಗಳಲ್ಲಿ ಏಕಕಾಲಕ್ಕೆ ಕನ್ನಡ ಗೀತೆ ಹಾಡಿ ದಾಖಲೆ

* ಕನ್ನಡ-ಸಂಸ್ಕೃತಿ ಇಲಾಖೆ ಕಾರ‍್ಯಕ್ರಮಕ್ಕೆ ಅಭೂತ ಯಶಸ್ಸು

* ವಿಧಾನಸೌಧದಿಂದ ಹಿಡಿದು ಪಾರಂಪರಿಕ ತಾಣಗಳವರೆಗೆ ರಾಜ್ಯದೆಲ್ಲೆಡೆ, ಜಗತ್ತಿನ ಹಲವೆಡೆ ಕನ್ನಡಿಗರಿಂದ ಗೀತ ಗಾಯನ

 

Kannadakkaagi Naavu 20 lakh sing Kannada songs to spread love for language pod
Author
Bangalore, First Published Oct 29, 2021, 7:19 AM IST
  • Facebook
  • Twitter
  • Whatsapp

ಬೆಂಗಳೂರು(ಅ.29): ರಾಜ್ಯಾದ್ಯಂತ ‘ಕನ್ನಡಕ್ಕಾಗಿ ನಾವು’ (kannadakkaagi Naavu) ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಲಕ್ಷ ಕಂಠ ಕನ್ನಡ ಗೀತಗಾಯನ ಕಾರ್ಯಕ್ರಮ (Kannada Musical Campaign) ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ರಾಜ್ಯದ ವಿವಿಧೆಡೆಯ 447 ಸ್ಥಳಗಳಲ್ಲಿ ಬರೋಬ್ಬರಿ 20.49 ಲಕ್ಷ ಮಂದಿ ಏಕಕಾಲಕ್ಕೆ ಕನ್ನಡದ ಗೀತೆಗಳನ್ನು (kannada Songs) ಹಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಗುರುವಾರ ರಾಜ್ಯದ ಅಷ್ಟದಿಕ್ಕುಗಳಲ್ಲೂ ಕನ್ನಡ (Kannada) ಬಳಕೆ ಬಗೆಗಿನ ಸಂಕಲ್ಪದ ಧ್ವನಿ ಹಾಗೂ ಕನ್ನಡದ ಗೀತಗಾಯನದ ಉದ್ಘೋಷ ಮೊಳಗಿತು. ‘ಮಾತಾಡ್‌ ಮಾತಾಡ್‌ ಕನ್ನಡ’ ಘೋಷವಾಕ್ಯದಡಿ ‘ಬಾರಿಸು ಕನ್ನಡ ಡಿಂಡಿಮವ’, ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳ ಗಾಯನದ ಮೂಲಕ ಕನ್ನಡಾಭಿಮಾನ ಮೆರೆಯುವ ಜತೆಗೆ ಕನ್ನಡ ತಾಯಿಗೆ ನಿತ್ಯೋತ್ಸವ ಮಾಡಲಾಯಿತು.

ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ವಿಧಾನಸೌಧದ ಮೆಟ್ಟಿಲ ಮೇಲೆ ನೂರಾರು ಮಂದಿ ಐಎಎಸ್‌, ಐಪಿಎಸ್‌, ಕೆಎಎಸ್‌ ಹಾಗೂ ಸಚಿವಾಲಯದ ಸಿಬ್ಬಂದಿ ಕನ್ನಡ ಗೀತೆಗಳ ಗಾಯನ ಮಾಡಿದರು. ಇದೇ ವೇಳೆ ಹುಬ್ಬಳ್ಳಿಯ ಕನ್ನಡ ಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡ ಗೀತೆಗಳ ಗಾಯನ ನಡೆಸಿದ್ದು, ಕನ್ನಡದ ಬಾವುಟ ಹಿಡಿದು ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂದು ಉತ್ಸಾಹದಿಂದ ಹಾಡಿದರು.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಣ್ಣ ಬಣ್ಣದ ಉಡುಗೆ-ತೊಡುಗೆ ತೊಟ್ಟಪುರುಷರು, ಮಹಿಳೆಯರು, ಐಎಎಸ್‌ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಆರಕ್ಷಕ ಅಧಿಕಾರಿಗಳು, ಸಿಬ್ಬಂದಿ ಯಾವ ಭೇದ ಭಾವಗಳಿಲ್ಲದೆ, ಶಿಷ್ಟಾಚಾರಗಳ ಹಂಗಿಲ್ಲದೆ ಒಟ್ಟಿಗೆ ನಿಂತು ಕನ್ನಡದ ಗೀತೆಗಳನ್ನು ಹಾಡುವ ಮೂಲಕ ‘ಕನ್ನಡಕ್ಕಾಗಿ ನಾವು’ ಅಭಿಯಾನ ಕನ್ನಡಾಭಿಮಾನಿಗಳ ಮನಸೆಳೆಯುವಂತೆ ಮಾಡಿದರು.

ವಿಧಾನಸೌಧದ ಎದುರು 11 ಗಂಟೆಗೆ ಸ್ವಾಗತ ನುಡಿ, ಬಳಿಕ ನಾಡಗೀತೆಯಿಂದ ಶುರುವಾದ ಕಾರ್ಯಕ್ರಮ ರಮ್ಯಾ ವಸಿಷ್ಠ ಅವರ ತಂಡದಿಂದ ಮೂರು ಗೀತೆಗಳ ಗಾಯನದೊಂದಿಗೆ ಕೊನೆಗೊಂಡಿತು. ಸಾಂಪ್ರದಾಯಿಕ ಭಾಷಣಗಳಿಲ್ಲದೆ ಕೇವಲ 30 ನಿಮಿಷಗಳ ಕಾಲ ರಾಜ್ಯಾದ್ಯಂತ ನಡೆದ ಕಾರ್ಯಕ್ರಮ ಕೋಟ್ಯಂತರ ಹೃದಯಗಳನ್ನು ಗೆಲ್ಲಲು ಯಶಸ್ವಿಯಾಯಿತು.

ಕಾರ್ಯಕ್ರಮದ ಬಳಿಕ ಸಚಿವ ಸುನಿಲ್‌ಕುಮಾರ್‌ ಅವರು ಹೈಕೋರ್ಟ್‌ ಎದುರು ಪೊಲೀಸರಿಗೆ ‘ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ಕನ್ನಡದಲ್ಲೇ ನಿತ್ಯ ವ್ಯವಹಾರ ಮಾಡುವುದಾಗಿ ಪಣ ತೊಡುತ್ತೇನೆ. ಹೊರ ರಾಜ್ಯದವರಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇವೆ’ ಎಂದು ಸಂಕಲ್ಪ ಮಾಡಿಸಿದರು. ಬಳಿಕ ಜಯನಗರದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಗೀತಗಾಯನದಲ್ಲಿ ಭಾಗವಹಿಸಿ ಹೆಜ್ಜೆ ಹಾಕಿದರು.

ರಾಜ್ಯಾದ್ಯಂತ 20 ಲಕ್ಷಕ್ಕೂ ಹೆಚ್ಚು ಮಂದಿ ಭಾಗಿ:

ಕೇವಲ ಬೆಂಗಳೂರು ಮಾತ್ರವಲ್ಲದೆ ಇಡೀ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳ ಆವರಣದಲ್ಲಿ ಗೀತಗಾಯನ ಕಾರ್ಯಕ್ರಮ ಉತ್ಸಾಹ ಹಾಗೂ ಸಡಗರ, ಸಂಭ್ರಮದಿಂದ ನೆರವೇರಿತು.

ಬೆಂಗಳೂರಿನ ಬಿಬಿಎಂಪಿ ಆವರಣ, ರವೀಂದ್ರ ಕಲಾಕ್ಷೇತ್ರ ಮುಂಭಾಗ, ಹೈಕೋರ್ಟ್‌ ಮುಂಭಾಗ ಸೇರಿದಂತೆ ಪ್ರತಿ ವಿಧಾನಸಭಾ ಕ್ಷೇತ್ರ ಹಾಗೂ ವಾರ್ಡ್‌ನಲ್ಲೂ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಗಾಯಕರು, ಕಲಾವಿದರು, ಸಾಹಿತಿಗಳು ಮಾತ್ರವಲ್ಲದೆ ವಿದ್ಯಾರ್ಥಿಗಳು, ಜನಸಾಮಾನ್ಯರು ಹೆಚ್ಚು ಉತ್ಸಾಹದಿಂದ ಭಾಗವಹಿಸಿದ್ದರು.

ಬೆಳಗಾವಿಯ ಸುವರ್ಣಸೌಧದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ, ವಿಶ್ವವಿಖ್ಯಾತ ಗೋಳ ಗುಮ್ಮಟ ಮುಂಭಾಗದಲ್ಲಿ 50 ಕಲಾತಂಡಗಳ 250 ಕಲಾವಿದರು, ತುಮಕೂರಿನ ಸಿದ್ಧಗಂಗಾ ಮಠದಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಮಂಡ್ಯದ ಸರ್‌ ಎಂವಿ ಕ್ರೀಡಾಂಗಣದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ, ಜೋಗ ಜಲಪಾತ, ಉಡುಪಿಯ ಕೃಷ್ಣದೇಗುಲದ ಮುಂಭಾಗ ಮತ್ತು ಹಂಪಿಯ ಐತಿಹಾಸಿಕ ಸ್ಮಾರಕಗಳ ಮುಂದೆ ಅಭೂತಪೂರ್ವ ಕನ್ನಡ ಗೀತೆಗಳು ಮಾರ್ದನಿಸಿದವು.

ನಾಲ್ಕೂ ವಿಭಾಗಗಳಲ್ಲೂ ಉತ್ತಮ ಪ್ರತಿಕ್ರಿಯೆ:

ಬೆಂಗಳೂರು ವಿಭಾಗದ 125 ಸ್ಥಳಗಳಲ್ಲಿ 1,61,232 ಮಂದಿ ಕನ್ನಡ ಗೀತೆಗಳಿಗೆ ತಮ್ಮ ದನಿಗೂಡಿಸಿದರು. ಮೈಸೂರು ವಿಭಾಗದಲ್ಲಿ 96 ಸ್ಥಳಗಳಲ್ಲಿ 5,41,365 ಮಂದಿ, ಬೆಳಗಾವಿ ವಿಭಾಗದ 105 ಸ್ಥಳಗಳಲ್ಲಿ 10,74,418 ಮಂದಿ, ಕಲಬುರಗಿ ವಿಭಾಗದ 60 ಸ್ಥಳಗಳಲ್ಲಿ 77125 ಜನ ಈ ಗೀತ ಗಾಯನದ ಮಾಧುರ್ಯಕ್ಕೆ ಜೊತೆಯಾದರು. ದೆಹಲಿ, ಮುಂಬೈ, ಕಾಸರಗೋಡು ಮತ್ತು ಪುಣೆ ಹೀಗೆ ಹೊರರಾಜ್ಯಗಳಿಂದ 31 ಸ್ಥಳಗಳಲ್ಲಿ 350 ಮಂದಿ ಈ ಗೀತಗಾಯನದ ಸಂಭ್ರಮಕ್ಕೆ ಜೊತೆಯಾಗಿದ್ದರು.

ಕನ್ನಡದ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ

- ಹುಬ್ಬಳ್ಳಿಯಲ್ಲಿ ಮಾತಾಡ್‌ ಮಾತಾಡ್‌ ಕನ್ನಡ ಅಭಿಯಾನಕ್ಕೆ ಬೊಮ್ಮಾಯಿ ಚಾಲನೆ

- ಕನ್ನಡ ಭಾಷೆಗೆ ಉಜ್ವಲ ಭವಿಷ್ಯ ನೀಡಲು ಸರ್ಕಾರ ಸದಾ ಬದ್ಧ ಎಂದು ಭರವಸೆ

- ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ನೀಡಲು ಶೀಘ್ರದಲ್ಲೇ ಕ್ರಮ

- ಕನ್ನಡದ ಅಭಿವೃದ್ಧಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡುವ ಎಲ್ಲ ಶಿಫಾರಸು ಜಾರಿ

ಜಿಲ್ಲಾವಾರು ಭಾಗವಹಿಸಿದ್ದವರ ಸಂಖ್ಯೆ

ಬೆಂಗಳೂರು ನಗರ 94,630, ಬೆಂಗಳೂರು ಗ್ರಾಮಾಂತರ 900, ಕೋಲಾರ 15,800, ರಾಮನಗರ 7,150, ತುಮಕೂರು 28,332, ಶಿವಮೊಗ್ಗ 11,500, ಚಿತ್ರದುರ್ಗ 15,000, ದಾವಣಗೆರೆ 8200, ಚಿಕ್ಕಬಳ್ಳಾಪುರ 16,600, ಮೈಸೂರು 7,500, ಮಂಡ್ಯ 1,57,800, ಹಾಸನ 18,800, ಚಾಮರಾಜನಗರ 23,250, ದಕ್ಷಿಣ ಕನ್ನಡ 1,90,600, ಉಡುಪಿ 63,745, ಚಿಕ್ಕಮಗಳೂರು 13,460, ಮಡಿಕೇರಿ 66,810, ಬೆಳಗಾವಿ 5,88,341, ಗದಗ 35,695, ವಿಜಯಪುರ 37,000, ಬಾಗಲಕೋಟೆ 18,200, ಉತ್ತರ ಕನ್ನಡ 46,832, ಹಾವೇರಿ 96,115, ಧಾರವಾಡ 2,54,735, ಕಲಬುರಗಿ 42,425, ಯಾದಗಿರಿ 21,000, ರಾಯಚೂರು 24,500, ಕೊಪ್ಪಳ 10,050, ಬಳ್ಳಾರಿ 37,228, ಬೀದರ್‌ 5,500, ವಿಜಯನಗರ 91,695.

Follow Us:
Download App:
  • android
  • ios