ಶಿಕ್ಷಕರ ಅರ್ಹತಾ ಪರೀಕ್ಷೆ ಅರ್ಹತಾ ಅಂಕ ಕಡಿಮೆಗೆ ಸರ್ಕಾರ ನಕಾರ
* ಎನ್‌ಇಟಿಸಿ ನಿಯಮಾವಳಿಯಂತೆ ಕ್ರಮ: ಸಚಿವ ನಾಗೇಶ್
* ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ ಎಸ್.ವಿ. ಸಂಕನೂರು
* ಸದ್ಯ 1-5 ಹಾಗೂ 6-8ನೇ ತರಗತಿಗಳಿಗೆ ಬೋಧನೆ ಮಾಡಲು ಶಿಕ್ಷಕರ ಕೊರತೆ
ಬೆಂಗಳೂರು(ಸೆ.18): ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ನಿಗದಿಪಡಿಸಿರುವ ಶೇಕಡಾವಾರು ಅರ್ಹತಾ ಅಂಕಗಳನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ನಿರಾಕರಿಸಿದ್ದು, ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ (ಎನ್‌ಸಿಟಿಇ) ರೂಪಿಸಿರುವ ನಿಯಮಾವಳಿಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.
ಬಿಜೆಪಿ ಎಸ್.ವಿ. ಸಂಕನೂರು ಅವರು ಶೂನ್ಯವೇಳೆಯಲ್ಲಿ ಮಾಡಿದ ಪ್ರಸ್ತಾಪಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ನೀಡಿರುವ ಉತ್ತರದಲ್ಲಿ, ಆರ್‌ಟಿಇ ಕಾಯ್ದೆ-2009ರ ಪ್ರಕಾರ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಉತ್ತಮ ಗುಣಮಟ್ಟದ ಅರ್ಹ ಶಿಕ್ಷಕರನ್ನು ನೇಮಿಸಲು ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ರೂಪಿಸಿರುವ ನಿಯಮಾವಳಿ ಪ್ರಕಾರವೇ ಅರ್ಹತಾ ಪರೀಕ್ಷೆ ನಡೆಸಲಾಗುತ್ತದೆ.
ಟಿಇಟಿಯಲ್ಲಿ 45000 ಶಿಕ್ಷಕರು ಪಾಸ್
ಇದರ ಅನ್ವಯ ಸಾಮಾನ್ಯ ವರ್ಗ/2ಎ, ಎ2ಬಿ, 3ಎ ಮತ್ತು 3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಶೇ. 60 ಅಥವಾ ಶೇ. 60ಕ್ಕಿಂತ ಹೆಚ್ಚು ಅಂಕ ಹಾಗೂ ಎಸ್‌ಸಿ,ಎಸ್‌ಟಿ, ಪ್ರವರ್ಗ-1 ಹಾಗೂ ಅಂಗವಿಕಲರು ಕನಿಷ್ಠ ಶೇ. 55 ಅಂಕ ಗಳಿಸಬೇಕು. ಆದರೆ 6-8ನೇ ತರಗತಿಗೆ ಬೋಧಿಸಲು ಆಯ್ಕೆಯಾಗುವ ಶಿಕ್ಷಕರು ಆಯಾ ಬೋಧನಾ ವಿಷಯದಲ್ಲಿ ಶೇ. 50ರಷ್ಟು ಅಂಕ ಗಳಿಸಬೇಕು ಎಂಬ ನಿಯಮ ಜಾರಿಯಲ್ಲಿರುತ್ತದೆ. ಅದರಂತೆ ಸರ್ಕಾರ ಕ್ರಮ ವಹಿಸುತ್ತಿದೆ ಎಂದು ವಿವರಿಸಲಾಗಿದೆ.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ ಎಸ್.ವಿ. ಸಂಕನೂರು 2021ನೇ ಸಾಲಿನಲ್ಲಿ ನಡೆದ ಅರ್ಹತಾ ಪರೀಕ್ಷೆಗೆ 2,31,886 ಅಭ್ಯರ್ಥಿಗಳು ಹಾಜರಾಗಿದ್ದು, ಈ ಪೈಕಿ 45,074 ಅಭ್ಯರ್ಥಿಗಳು ಮಾತ್ರ ಅರ್ಹರಾಗಿದ್ದಾರೆ. ಸದ್ಯ 1-5 ಹಾಗೂ 6-8ನೇ ತರಗತಿಗಳಿಗೆ ಬೋಧನೆ ಮಾಡಲು ಶಿಕ್ಷಕರ ಕೊರತೆ ಇರುವ ಹಿನ್ನೆಲೆಯಲ್ಲಿ ಅರ್ಹತೆ ಪಡೆಯಲು ನಿಗದಿಪಡಿಸಿರುವ ಶೇಕಡವಾರು ಅಂಕ ಕಡಿಮೆ ಮಾಡುವಂತೆ ಆಗ್ರಹಿಸಿದ್ದರು.