ಬೆಂಗಳೂರು (ಮಾ. 10):  ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ವೆಬ್‌ಸೈಟ್‌ ಕಾರ್ಯನಿರ್ವಹಿಸದ ಪರಿಣಾಮ ಪ್ರಥಮ ದರ್ಜೆ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಗುಮಾಸ್ತ (ಎಸ್‌ಡಿಎ) ಹುದ್ದೆಗಳ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕ ವಿಸ್ತರಿಸಲು ನಿರ್ಧರಿಸಿದೆ.

ವೆಬ್‌ಸೈಟ್‌ ಸಮಸ್ಯೆಯಿಂದಾಗಿ ಪ್ರಥಮ ದರ್ಜೆ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಗುಮಾಸ್ತ (ಎಸ್‌ಡಿಎ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದಂತಾಗಿದ್ದು, ಕೆಪಿಎಸ್‌ಸಿಗೆ ದೂರುಗಳು ಬರಲಾರಂಭಿಸಿವೆ. ಆದ್ದರಿಂದ ಅರ್ಜಿಗಳನ್ನು ಸಲ್ಲಿಸಲು ಆಗುತ್ತಿರುವ ಎಲ್ಲ ಸಮಸ್ಯೆಗಳು ಪರಿಹಾರವಾಗುವವರೆಗೂ ಅವಧಿ ವಿಸ್ತರಿಸುವುದಾಗಿ ಕೆಪಿಎಸ್‌ಸಿ ಕಾರ್ಯದರ್ಶಿ ಆರ್‌.ಆರ್‌.ಜನ್ನು ತಿಳಿಸಿದ್ದಾರೆ. ಅರ್ಜಿ ಸಲ್ಲಿಕೆಗೆ ಮಾ.12 ಅಂತಿಮ ದಿನವಾಗಿತ್ತು.

ಮಾ.12 ಅಂತಿಮ ದಿನಾಂಕವಾಗಿತ್ತು:

ಎಫ್‌ಡಿಎ ಮತ್ತು ಎಸ್‌ಡಿಎಗೆ ಅರ್ಜಿಗಳನ್ನು ಸಲ್ಲಿಸಲು ಮಾ.12 ಅಂತಿಮ ದಿನಾಂಕವಾಗಿತ್ತು. ವೆಬ್‌ಸೈಟ್‌ ಕಾರ್ಯನಿರ್ವಹಿಸದ ಪರಿಣಾಮ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಿದ್ದರು. ಪ್ರಸಕ್ತ ಅವಧಿಯಿಂದ ಒಮ್ಮೆ ಲಾಗಿನ್‌ ಆದ ಬಳಿಕ ಮುಂದಿನ ಪರೀಕ್ಷೆಗಳಿಗೆ ಮತ್ತೊಮ್ಮೆ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಕೆಪಿಎಸ್‌ಸಿ ತಿಳಿಸಿದೆ.

ಇದೇ ಕಾರಣದಿಂದ ಅರ್ಹರಿರುವ ಎಲ್ಲ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಆದರೆ, ವೆಬ್‌ಸೈಟ್‌ ಕಾರ್ಯ ನಿರ್ವಹಿಸದಂತಾಗಿದೆ. ಅಲ್ಲದೆ, ಲಾಗ್‌ ಇನ್‌ ಆಗಿರುವವರು ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗದಂತಾಗಿದೆ ಎಂದು ಅಭ್ಯರ್ಥಿಗಳಿಂದ ದೂರುಗಳು ಬಂದ್ದಿದವು.