ಬಾಲಿವುಡ್ ಸ್ಟೈಲ್‌ನಲ್ಲಿ ಎಟಿಎಂ ದರೋಡೆ; ₹2 ಕೋಟಿ ಕಳ್ಳರ ಪ್ಲ್ಯಾನ್ ನೋಡಿ ಬೆಚ್ಚಿಬಿದ್ದ ಪೊಲೀಸರು!
ಬೆಂಗಳೂರು ಸೇರಿ ಹಲವೆಡೆ ಎಟಿಎಂ ದರೋಡೆ ಮಾಡಿದ ಗ್ಯಾಂಗ್‌ನ ಹಾಲಿವುಡ್ ಶೈಲಿಯ ಪ್ಲ್ಯಾನ್ ಬಯಲಾಗಿದೆ. ಕಂಟೇನರ್‌ನಲ್ಲಿ ಕಾರು ತಂದು ಎಟಿಎಂ ದೋಚಿ 2 ಕೋಟಿ ರೂ.ಗೂ ಹೆಚ್ಚು ಹಣ ದೋಚಿದ್ದಾರೆ.

ಬೆಂಗಳೂರು (ಮಾ.05): ಕರ್ನಾಟಕ ಬೆಂಗಳೂರು, ಬೆಳಗಾವಿ ಸೇರಿ ದಕ್ಷಿಣ ಭಾರತದ ನಾಲ್ಕೈದು ಕಡೆಗಳಲ್ಲಿ ನಾಲ್ಕೈದು ಎಟಿಎಂಗಳನ್ನು ದರೋಡೆ ಮಾಡಿ 2 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಕದ್ದ ಗ್ಯಾಂಗ್‌ನ ಹಾಲಿವುಡ್, ಬಾಲಿವುಡ್ ಸ್ಟೈಲ್‌ನ ಪ್ಲ್ಯಾನ್ ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಹೌದು, ಈ ಘಟನೆ ಸೂಲಿಬೆಲೆಯ ಎಟಿಎಂನಲ್ಲಿ ಹಣ ದರೋಡೆ ಮಾಡಿಕೊಂಡು ಹೋದ ನಂತರ ಬಯಲಿಗೆ ಬಂದಿದೆ. ಹಾಲಿವುಡ್, ಬಾಲಿವುಡ್ ಸಿನಿಮಾ ರೇಂಜ್‌ನಲ್ಲಿ ಎಟಿಎಂ ದರೋಡೆಗೆ ಕಳ್ಳರು ಪ್ಲ್ಯಾನ್ ಮಾಡಿರುವುದು ಪತ್ತೆಯಾಗಿದೆ. ಕಾರಿನಲ್ಲಿ ಬಂದು ಸುತ್ತಲೂ ಸಿಸಿಟಿವಿ ಕ್ಯಾಮೆರಾ ಇದ್ದರೂ ಅದಕ್ಕೆ ತಮ್ಮ ಸುಳಿವೂ ಸಿಗದಂತೆ ಬೆಡ್‌ಶೀಟ್ ಹಾಕಿಕೊಂಡು ಬಂದು ಎಟಿಎಂ ಅನ್ನು ದರೋಡೆ ಮಾಡಿಕೊಂಡು ಹೋಗಿರುವುದು ಪತ್ತೆಯಾಗಿದೆ. ಇದೇನಿದು ಬೆಡ್‌ಶೀಟ್ ಹೊದ್ದುಕೊಂಡು ಬರುವುದು ನಮ್ಮ ಲೋಕಲ್ ಕಳ್ಳರ ಹಳೆಯ ಅಭ್ಯಾಸವಲ್ಲವೇ ಎಂದು ನೀವು ಹೇಳಬಹುದು. ಆದರೆ, ಕಳ್ಳರು ಕಾರಿನಲ್ಲಿ ಬರುವುದಕ್ಕೂ ಮುನ್ನ ಮಾಡಿದ್ದ ಪ್ಲ್ಯಾನ್ ಬಾಲಿವುಡ್ ಸಿನಿಮಾವನ್ನೂ ಮೀರಿಸುವಂತಿದೆ ನೋಡಿ..
ಹಾಗಾದರೆ ದರೋಡೆಕೋರರು ಎಟಿಎಂ ದೋಚಿದ್ದು ಹೇಗೆ ಗೊತ್ತಾ. ಒಂದು ಕಾರಿನಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಎಟಿಎಂ ದೋಚುವ ಮುನ್ನ ತಮ್ಮ ಸುಳಿವು ಯಾರಿಗೂ ಸಿಗದಂತೆ ಹಾಗೂ ಕಾರು ಎಲ್ಲಿಂದ ಬಂದಿದೆ ಎಂಬ ಮಾಹಿತಿಯೂ ಲಭ್ಯವಾಗದಂತೆ ಪ್ಲ್ಯಾನ್ ಮಾಡಿದ್ದಾರೆ. ತಾವು ಕಳ್ಳತನಕ್ಕೆ ಹೋಗುವ ಕಾರನ್ನು ದೊಡ್ಡ ಟ್ರಕ್ ಕಂಟೇನರ್‌ನಲ್ಲಿ ಇಟ್ಟುಕೊಂಡು ಬಂದಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಬಳಿ ಕಂಟೇನರ್ ನಿಲ್ಲಿಸಿ ಅಲ್ಲಿ ಕಾರನ್ನು ಕೆಳಗಿಳಿಸಿ, ಎಟಿಎಂ ಬಳಿಗೆ ಕಾರನ್ನು ತಂದಿದ್ದಾರೆ. ನಂತರ ಕಾರಿನಲ್ಲಿ ತಂದಿದ್ದ ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರವನ್ನು ತುಂಡರಿಸಿ ಅದರೊಳಗಿದ್ದ 30 ಲಕ್ಷ ರೂ. ಹಣ ದರೋಡೆ ಮಾಡಿದ್ದಾರೆ. ಹಣ ದರೋಡೆ ಬಳಿಕ ಪುನಃ ಕಾರನ್ನ ಲಾರಿ ಕಂಟೇನರ್‌ಗೆ ಪ್ಯಾಕ್ ಮಾಡಿ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ಮೈಸೂರಲ್ಲಿ ಜನನ, ಪ್ಯಾರಿಸ್‌ನಲ್ಲಿ ಪ್ರೇಮ; ಬೆಂಜ್ ಕಾರು ಕೊಡಿಸದ್ದಕ್ಕೆ ತಾಳಿ ಕಟ್ಟದೆ ಓಡಿಹೋದ ಅಳಿಮಯ್ಯ!
ಇನ್ನು ಎಟಿಎಂ ದರೋಡೆ ಆಗಿದ್ದರ ಬಗ್ಗೆ ಬ್ಯಾಂಕ್ ಸಿಬ್ಬಂದಿ ಕೊಟ್ಟ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರಿಗೆ ತನಿಖೆ ವೇಳೆ ದರೋಡೆ ಗ್ಯಾಂಗ್‌ನ ಮಾಸ್ಟರ್ ಪ್ಲಾನ್ ರಿವೀಲ್ ಆಗಿದೆ. ದರೋಡೆ ಗ್ಯಾಂಗ್ ತಮ್ಮ ಸುಳಿವು ಸಿಗದಂತೆ ಮಾಡುವುದಕ್ಕೆ ಹೀಗೆ ಯೋಜನೆ ಮಾಡಿದ್ದಾರೆ. ಎಲ್ಲೆಡೆಯೂ ಎಟಿಎಂ ದರೋಡೆಗೆ ಬಂದ ಕಾರಿನ ಮಾಹಿತಿ ಲಭ್ಯವಾಗಿದೆ. ಆದರೆ, ಕಳ್ಳರ ಕಾರು ಹೆದ್ದಾರಿಗೆ ಬಂದ ನಂತರ ಯಾವ ದಿಕ್ಕಿಗೆ ಹೋಗಿದೆ ಎಂಬುದರ ಸುಳಿವೇ ಸಿಗುತ್ತಿರಲಿಲ್ಲ. ಇದರಿಂದ ಪೊಲೀಸರು ತಲೆ ಕೆಡಿಸಿಕೊಂಡಿದ್ದರು. ಕಳೆದ ಒಂದೂವರೆ ತಿಂಗಳಲ್ಲಿ ನಾಲ್ಕೈದು ಕಡೆಗಳಲ್ಲಿ ಇದೇ ರೀತಿ ಎಟಿಎಂ ದರೋಡೆ ಮಾಡಿ ಪರಾರಿ ಆಗಿದ್ದರು, ಈ ಕೇಸಿನ ಬಗ್ಗೆ ವಿವರವಾಗಿ ತನಿಖೆ ಮಾಡಿದಾಗ ಕಂಟೇನರ್‌ನಲ್ಲಿ ಕಾರು ತಂದು ದರೋಡೆ ಮಾಡಿಕೊಂಡು ಹೋಗುತ್ತಿದ್ದದು ಪತ್ತೆಯಾಗಿದೆ.
ಕರ್ನಾಟಕದ ಬೆಂಗಳೂರು ಹೊರವಲಯ ಸೂಲಿಬೆಲೆ, ಬೆಳಗಾವಿ ಸೇರಿ ಹೊರ ರಾಜ್ಯಗಳೂ ಒಳಗೊಂಡಂತೆ ಕೇವಲ ಒಂದೂವರೆ ತಿಂಗಳಲ್ಲಿ 2 ಕೋಟಿ ಹಣ ದರೋಡೆ ಮಾಡಿರುವ ಶಂಕೆಯಿದೆ. ಪೊಲೀಸರು ಹಳೆಯ ಪ್ರಕರಣಗಳ ಮಾಹಿತಿ ಸಂಗ್ರಹಿಸಿ ತನಿಖೆ ಮಾಡುತ್ತಿದ್ದಾರೆ. ಹೊಸಕೋಟೆ ಪೊಲೀಸರಿಂದ ಎಟಿಎಂ ದರೋಡೆಕೋರರ ಪತ್ತೆಗೆ ಬಲೆ ಬೀಸಲಾಗಿದೆ. ಆರೋಪಿಗಳ ಬೆನ್ನತ್ತಿ ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ಎಲ್ಲ ಕಡೆಯೂ ಕಂಟೇನರ್ ಮೂಲಕ ಕಾರು ಡಂಪ್ ಮಾಡಿ ದರೋಡೆ ಮಾಡುತ್ತಿರುವುದು ಕಂಡುಬಂದಿದೆ. ಇದೀಗ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಇದನ್ನೂ ಓದಿ: ನಮ್ಮಜ್ಜಿ ಅಕೌಂಟ್‌ನಲ್ಲಿ ₹80 ಲಕ್ಷ ಇದೆ ಎಂದಿದ್ದಷ್ಟೇ..! ಅಜ್ಜಿ ಹಣ, ಬಾಲಕಿ ಮಾನ ಎರಡೂ ಹೋಯ್ತು!