ಟಿಇಟಿ: ಎರಡು ಲಕ್ಷ ಅಭ್ಯರ್ಥಿಗಳಲ್ಲಿ 8000 ಪಾಸ್..!
ಶಿಕ್ಷಕರ ಅರ್ಹತಾ ಪರೀಕ್ಷೆ ಫಲಿತಾಂಶ ಪ್ರಕಟ| ಉತ್ತೀರ್ಣ ಪ್ರಮಾಣ ಕಳೆದ ಬಾರಿಗಿಂತ ಶೇ.9 ಕುಸಿತ| ಕಳೆದ ಬಾರಿ ಪತ್ರಿಕೆ ಸುಲಭವಾಗತ್ತು ಜೊತೆಗೆ ಕೆಲವು ಪ್ರಶ್ನೆಗಳಿಗೆ ಕೃಪಾಂಕ ನೀಡಿದ ಪರಿಣಾಮ ಫಲಿತಾಂಶ ಹೆಚ್ಚಳ| ಈ ಬಾರಿ ಬಹಳ ಕಟ್ಟುನಿಟ್ಟಾಗಿ ಪರೀಕ್ಷೆ|
ಬೆಂಗಳೂರು(ನ.22): ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ್ದ 2019ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದ್ದು ಪರೀಕ್ಷೆಗೆ ಹಾಜರಾಗಿದ್ದ 2,02,991 ಅಭ್ಯರ್ಥಿಗಳ ಪೈಕಿ 7,980 ಅಭ್ಯರ್ಥಿಗಳು (ಶೇ.3.93) ಮಾತ್ರ ಉತ್ತೀರ್ಣರಾಗಿದ್ದಾರೆ. ಟಿಇಟಿಯಲ್ಲಿ ಉತ್ತೀರ್ಣರಾದವರು ಮಾತ್ರ ಶಿಕ್ಷಕರಾಗಲು ಅರ್ಹತೆ ಪಡೆದಿದ್ದಾರೆ.
2018ನೇ ಸಾಲಿನಲ್ಲಿ 12.6ರಷ್ಟು ಫಲಿತಾಂಶ ಬಂದಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಟಿಇಟಿ ಫಲಿತಾಂಶ ಸುಮಾರು ಶೇ.9ರಷ್ಟು ಕುಸಿತವಾಗಿದೆ. ಕಳೆದ ಬಾರಿ ಪತ್ರಿಕೆ ಸುಲಭವಾಗತ್ತು ಜೊತೆಗೆ ಕೆಲವು ಪ್ರಶ್ನೆಗಳಿಗೆ ಕೃಪಾಂಕ ನೀಡಿದ ಪರಿಣಾಮ ಫಲಿತಾಂಶ ಹೆಚ್ಚಳವಾಗಿತ್ತು. ಈ ಬಾರಿ ಬಹಳ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2014ರಿಂದ ಜಾರಿಯಾಗಿರುವ ಟಿಇಟಿಯಲ್ಲಿ ಶಿಕ್ಷಕ ಹುದ್ದೆಗೆ ಅರ್ಹತೆ ಗಳಿಸಲು ಸಾಮಾನ್ಯ ವರ್ಗದವರಿಗೆ ಶೇ.60 ಮತ್ತು ಹಿಂದುಳಿದ ಮತ್ತು ಪ.ಜಾ ಮತ್ತು ಪ.ಪಂ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶೇ.55 ಅರ್ಹತಾ ಅಂಕಗಳನ್ನು ನಿಗದಿ ಪಡಿಸಲಾಗಿದೆ. 2019ರ ಅಕ್ಟೋಬರ್‌ನಲ್ಲಿ ನಡೆದಿದ್ದ ಪರೀಕ್ಷಾ ಫಲಿತಾಂಶ ಈಗ ಪ್ರಕಟವಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಯ ಅರ್ಹತೆಗೆ ಪತ್ರಿಕೆ-1, ಪ್ರೌಢಶಾಲಾ ಶಿಕ್ಷಕ ಹುದ್ದೆಗೆ ಪರೀಕ್ಷೆ ಬರೆಯಲು ಪತ್ರಿಕೆ 2ರಲ್ಲಿ ಉತ್ತೀರ್ಣರಾಗಬೇಕು. ಅದರಂತೆ ಪತ್ರಿಕೆ 1ಕ್ಕೆ ಪರೀಕ್ಷೆ ಬರೆದವರಲ್ಲಿ ರಲ್ಲಿ 1,342 ಮಂದಿ ಮತ್ತು ಪತ್ರಿಕೆ-2ರಲ್ಲಿ ಪರೀಕ್ಷೆ ಬರೆದವರಲ್ಲಿ 6,638 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
'TET ಪರೀಕ್ಷೆಯಲ್ಲಿ SOP ಕಡ್ಡಾಯವಾಗಿ ಅನುಸರಿಸಿಬೇಕು'
ಅರ್ಹತೆ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳಿಗೆ ಗಣಕೀಕೃತ ಅಂಕಪಟ್ಟಿಯನ್ನು ಇಲಾಖೆಯು ವಿತರಿಸಲಿದ್ದು, ಯಾವುದೇ ಮುದ್ರಿತ ಅಂಕಪಟ್ಟಿವಿತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಭ್ಯರ್ಥಿಗಳೇ ಇಲಾಖೆ ವೆಬ್‌ಸೈಟ್‌ಗೆ ಹೋಗಿ ನೋಂದಣಿ ಸಂಖ್ಯೆ ನೀಡಿ ಅಂಕಪಟ್ಟಿಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
2019ರಲ್ಲಿ ಟಿಇಟಿಗೆ ಅರ್ಜಿ ಆಹ್ವಾನಿಸಲಾಗಿತ್ತು, ಮಾರ್ಚ್‌ನಲ್ಲಿ ಪರೀಕ್ಷೆ ಆಯೋಜಿಸಲು ಉದ್ದೇಶಿಸಲಾಗಿತ್ತು. ಕೊರೋನಾ ಬಂದ ಹಿನ್ನೆಲೆಯಲ್ಲಿ ಅಕ್ಟೋಬರ್‌ನಲ್ಲಿ ಪರೀಕ್ಷೆ ನಡೆಸಿತ್ತು. ಒಟ್ಟಾರೆ ಪರೀಕ್ಷೆ ನಡೆಸಿದ 45 ದಿನದೊಳಗೆ ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿ ಪ್ರಶ್ನೆಗಳಿಗೆ 1,039 ಆಕ್ಷೇಪಣೆ ಬಂದಿದ್ದವು. ಎಲ್ಲವನ್ನೂ ತಜ್ಞರ ಸಮಿತಿ ಪರಿಶೀಲಿಸಿ ಯಾವುದೇ ಕೃಪಾಂಕ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಉತ್ತರಗಳನ್ನು ಬಿಡುಗಡೆ ಮಾಡಿ, ಇದೀಗ ಫಲಿತಾಂಶವನ್ನು ಸಹ ಬಿಡುಗಡೆ ಮಾಡಿದೆ.