2.5 ಲಕ್ಷ ಸರ್ಕಾರಿ ಹುದ್ದೆ ಭರ್ತಿ: ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

  • 2.5 ಲಕ್ಷ ಸರ್ಕಾರಿ ಹುದ್ದೆ ಭರ್ತಿ: ಸಿಎಂ
  • 2 ವರ್ಷಗಳಲ್ಲಿ ನೇಮಕಾತಿ
  • ಈ ವರ್ಷವೇ 1 ಲಕ್ಷ ನೌಕರರ ನೇಮಕ
  • ಎಲ್ಲೆಡೆ ಕನ್ನಡ ಬಳಕೆ ಕಡ್ಡಾಯ, ಡಿಸೆಂಬರಲ್ಲಿ ಮಸೂದೆ: ಬೊಮ್ಮಾಯಿ
  • ರಾಜ್ಯೋತ್ಸವ ಪ್ರಶಸ್ತಿಗೆ 60 ವರ್ಷ ಮಿತಿ ರದ್ದು
2.5 Lakh Government Vacancies CM Basavaraj Bommai Announcement rav

ಬೆಂಗಳೂರು (ನ.2) : ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದು ಎರಡು ವರ್ಷದಲ್ಲಿ ಭರ್ತಿ ಮಾಡಲಾಗುವುದು. ಇದರಲ್ಲಿ ಪ್ರಸಕ್ತ ವರ್ಷವೇ ಒಂದು ಲಕ್ಷ ಹುದ್ದೆ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಕೇಂದ್ರ ಸರ್ಕಾರ ಇತ್ತೀಚೆಗೆ 10 ಲಕ್ಷ ಉದ್ಯೋಗ ಸೃಷ್ಟಿಗೆ ಚಾಲನೆ ನೀಡಿದ ಬೆನ್ನಲ್ಲೇ ರಾಜ್ಯದಿಂದಲೂ ಈ ಘೋಷಣೆ ಹೊರಬಿದ್ದಿದೆ.

ವಿಜೃಂಭಣೆಯ ಕನ್ನಡ ರಾಜ್ಯೋತ್ಸವ ಮುಂದೆ ಠುಸ್ ಎಂದ ಎಂಎನ್ಎಸ್ ಕರಾಳ ದಿನಾಚರಣೆ

ಶಿಕ್ಷಣ ಇಲಾಖೆಯಿಂದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಖಾಲಿ ಇರುವ 2.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಎರಡು ವರ್ಷದಲ್ಲೇ ಭರ್ತಿ ಮಾಡುವುದರಿಂದ ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿ ಆರ್ಥಿಕವಾಗಿ ಸಬಲರಾಗುತ್ತಾರೆ. ಇದು ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ರಾಂತಿಗೂ ನಾಂದಿ ಹಾಡಲಿದೆ’ ಎಂದು ಬಣ್ಣಿಸಿದರು.

‘ನಮ್ಮ ನಾಡು ಪುಣ್ಯದ ಬೀಡಾಗಿದ್ದು 8 ಜ್ಞಾನಪೀಠ ಪ್ರಶಸ್ತಿ ಸಂದಿರುವುದು ಹೆಗ್ಗಳಿಕೆಯಾಗಿದೆ. ಕನ್ನಡದ ಸ್ವಾಭಿಮಾನ, ಅಸ್ಮಿತೆಯನ್ನು ಪ್ರತಿಯೊಬ್ಬರೂ ಎತ್ತಿ ಹಿಡಿಯಬೇಕು. ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ ಎನ್ನುವಂತೆ ನಾವೆಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು. ಜಗ್ಗದೆ, ಕುಗ್ಗದೆ ಮುನ್ನಡೆಯುವುದು ಕನ್ನಡಿಗರ ಮೂಲ ಮಂತ್ರವಾಗಬೇಕು. ನಮ್ಮ ಮಕ್ಕಳು ವಿಶ್ವಮಟ್ಟದಲ್ಲಿ ಸಾಧನೆ ಮಾಡಬೇಕು’ ಎಂದು ಆಶಿಸಿದರು.

ಕನ್ನಡಕ್ಕೆ ಕಾನೂನು ಮಾನ್ಯತೆ:

‘ಎಲ್ಲ ರಂಗಗಳಲ್ಲೂ ಕನ್ನಡ ಬಳಕೆಗೆ ಮಾನ್ಯತೆ ನೀಡಲು ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ‘ಕನ್ನಡ ಬಳಕೆ ಕಡ್ಡಾಯ ವಿಧೇಯಕ’ಕ್ಕೆ ಒಪ್ಪಿಗೆ ಪಡೆದು ಕಾನೂನು ಮಾಡಲಾಗುವುದು. ಕನ್ನಡಕ್ಕೆ ಕಾನೂನು ಕವಚ ನೀಡಿರುವ ಪ್ರಥಮ ಸರ್ಕಾರ ನಮ್ಮದು. ಇದರ ಬಗ್ಗೆ ಮುಕ್ತ ಚರ್ಚೆಯಾಗಲಿ. ಎಲ್ಲರ ಸಲಹೆಯನ್ನೂ ಮುಕ್ತವಾಗಿ ಸ್ವೀಕರಿಸಲಾಗುವುದು. ಕಾನೂನು ಮಾಡುವುದು ಒಂದು ಹಂತವಾದರೆ, ಮತ್ತೊಂದೆಡೆ ಕನ್ನಡಕ್ಕಾಗಿ ಬದುಕಬೇಕೆಂಬ ಭಾವ ಹೃದಯಾಂತರಾಳದಿಂದ ಹೊರಹೊಮ್ಮಬೇಕು’ ಎಂದು ಅಭಿಪ್ರಾಯಪಟ್ಟರು.

‘ನಮ್ಮ ನಾಡಿನಲ್ಲಿ ಯಾವುದಕ್ಕೂ ಕೊರತೆಯಿಲ್ಲ, ಸಂಪದ್ಭರಿತವಾಗಿದೆ. ಕರ್ನಾಕದ ಏಕೀಕರಣಕ್ಕೆ ಆಲೂರು ವೆಂಕಟರಾಯರು ಸೇರಿದಂತೆ ಹಲವು ಮಹನೀಯರು ದುಡಿದರು. ರಾಷ್ಟ್ರಕವಿ ಕುವೆಂಪು ಅವರು ಇದಕ್ಕೆ ಕೀರಿಟ ನೀಡಿದರು. ಕರುನಾಡು ಏಕೀಕರಣವಾಗಿ ಆರು ದಶಕ ಕಳೆದಿವೆ. ನಾಡಿಗಾಗಿ ಏನು ನೀಡಿದ್ದೇವೆ ಎಂದು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಭಾರತದ ಭವಿಷ್ಯ ಬರೆಯುವ ಶಕ್ತಿ ಕರುನಾಡಿಗೆ ಮಾತ್ರ ಇದ್ದು ಕರ್ನಾಟಕದ ಮೂಲಕ ಭವ್ಯ ಭಾರತ ನಿರ್ಮಿಸೋಣ’ ಎಂದು ಕರೆ ನೀಡಿದರು.

8 ಸಾವಿರ ಶಾಲಾ ಕೊಠಡಿ ನಿರ್ಮಾಣ:

ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮಾತನಾಡಿ, :ಕೊರೋನಾದಿಂದಾಗಿ ಕಳೆದ ಎರಡು ವರ್ಷ ಸರಳವಾಗಿ ಶಾಲೆಗಳಲ್ಲಿ ರಾಜ್ಯೋತ್ಸವ ಆಚರಿಸಲಾಗಿತ್ತು. ಈಗ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ನಾಡು-ನುಡಿ ಉಳಿಸಿ ಬೆಳೆಸಲು ಪೋಷಕರು ಮುಂದಾಗಬೇಕು. ರಾಜ್ಯ ಸರ್ಕಾರ 8 ಸಾವಿರ ಶಾಲಾ ಕೊಠಡಿ ನಿರ್ಮಾಣ ಮಾಡಿರುವುದು ಇತಿಹಾಸದಲ್ಲಿ ದಾಖಲೆಯಾಗಿದೆ’ ಎಂದು ಹೇಳಿದರು.

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಳವಡಿಸಿಕೊಂಡು ಸಮರ್ಥವಾಗಿ ಅನುಷ್ಠಾನ ಮಾಡುತ್ತಿದ್ದು ಕನ್ನಡಕ್ಕೆ ಆದ್ಯತೆ ನೀಡಲಾಗುತ್ತಿದೆ. ಶಿಕ್ಷಣ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲರಿಗೂ ಕನ್ನಡ ಕಲಿಸುವ, ನಾಡಿನ ಪರಂಪರೆ ಪರಿಚಯಿಸುವ ಕೆಲಸವನ್ನು ನಾವು ಮಾಡಬೇಕಿದೆ’ ಎಂದು ತಿಳಿಸಿದರು.

Kannada Rajyotsava awrds: ಯಾವುದೇ ಪ್ರಶಸ್ತಿಯ ಹಿಂದೆ ದೊಡ್ಡ ಸಾಧನೆ, ಪ್ರಯತ್ನ ಇರುತ್ತದೆ: ಸಿಎಂ

ವಿದ್ಯಾರ್ಥಿಗಳು ನಡೆಸಿಕೊಟ್ಟಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು. ಸಂಸದ ಪಿ.ಸಿ.ಮೋಹನ್‌, ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios