ಪ್ರವಾಸೋದ್ಯಮದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ: ಯೋಗೇಶ್ವರ್
‘ನಿಗ್ಲಿ’ ಕಿರುಚಿತ್ರ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ವಿತರಣೆ| ಪ್ರವಾಸೋದ್ಯಮ ಕ್ಷೇತ್ರದಲ್ಲಿ ರಾಜ್ಯದ ಜಿಎಸ್‌ಡಿಪಿ ಪ್ರಸ್ತುತ ಶೇ.14.8ರಷ್ಟು ಕೊಡುಗೆ| ಮುಂದಿನ ಐದು ವರ್ಷಗಳಲ್ಲಿ ಶೇ.20ಕ್ಕೆ ಏರಿಸುವ ಗುರಿ ನಮ್ಮದಾಗಿದೆ| 5 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒತ್ತು: ಯೋಗೇಶ್ವರ್|
ಬೆಂಗಳೂರು(ಮಾ.01): ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮುಂದಿನ ಐದು ವರ್ಷಗಳಲ್ಲಿ 5 ಸಾವಿರ ಕೋಟಿ ನೇರ ಬಂಡವಾಳ ಹೂಡಿಕೆಗೆ ಒತ್ತು ನೀಡುವುದು ಮತ್ತು ಅಂದಾಜು ಹತ್ತು ಲಕ್ಷಕ್ಕೂ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ಭಾನುವಾರ ಪ್ರವಾಸೋದ್ಯಮ ಹಾಗೂ ನಿಗ್ಲಿ ಜಾಹೀರಾತು ಸಂಸ್ಥೆ ಸಹಯೋಗದಲ್ಲಿ ನಗರದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ನಿಗ್ಲಿ’ ಕಿರುಚಿತ್ರ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ರಾಜ್ಯದ ಜಿಎಸ್‌ಡಿಪಿ ಪ್ರಸ್ತುತ ಶೇ.14.8ರಷ್ಟು ಕೊಡುಗೆ ನೀಡುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಶೇ.20ಕ್ಕೆ ಏರಿಸುವ ಗುರಿ ನಮ್ಮದಾಗಿದೆ ಎಂದರು.
89 ನಾನಾ ಹುದ್ದೆಗೆ UPSC ನೇಮಕಾತಿ, ಅರ್ಜಿ ಸಲ್ಲಿಸಲು ಮಾ.18 ಕೊನೆ ದಿನ
ರಾಜ್ಯದಲ್ಲಿರುವ 5 ರಾಷ್ಟ್ರೀಯ ಉದ್ಯಾನವನಗಳು, 17 ಗಿರಿಧಾಮಗಳು, 40 ನೈಸರ್ಗಿಕ ಜಲಪಾತಗಳು, 320 ಕಿಮೀ ಉದ್ದದ ಕಡಲ ಕಿನಾರೆ, 30ಕ್ಕೂ ಹೆಚ್ಚಿನ ವನ್ಯಜೀವಿ ಅಭಯಾರಣ್ಯ ಹುಲಿ ಅಭಯಾರಣ್ಯ ವಿಪುಲ ಸಸ್ಯ ಹಾಗೂ ಪ್ರಾಣಿ ಸಂಪತ್ತನ್ನು ಹೊಂದಿದೆ. ಜಿಲ್ಲಾ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ರಚಿಸುವುದು. ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಕರ್ನಾಟಕವನ್ನು ಅತ್ಯಾಕರ್ಷಕ ಪ್ರವಾಸಿ ತಾಣವನ್ನಾಗಿ ನೆಲೆಗೊಳಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ನಿಗ್ಲಿ ಜಾಹೀರಾತು ಸಂಸ್ಥೆ ಮುಖ್ಯಸ್ಥ ಐವಾನ್ ನಿಗ್ಲಿ ಅವರು ಕಳೆದ 25 ವರ್ಷಗಳಿಂದ ಕಿರುಚಿತ್ರಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಈ ಬಾರಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಿರುಚಿತ್ರ ಸ್ಪರ್ಧೆ ಹಮ್ಮಿಕೊಂಡಿದೆ. ರಾಜ್ಯದ 65 ಕಾಲೇಜುಗಳ ಸುಮಾರು 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಂತಿಮವಾಗಿ 64 ಕಿರುಚಿತ್ರಗಳ ಪೈಕಿ 20 ಚಿತ್ರಗಳನ್ನು ತೀರ್ಪುಗಾರರು ಆಯ್ಕೆ ಮಾಡಿದ್ದಾರೆ. ಪ್ರಥಮ ಬಹುಮಾನ 25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನ 10 ಸಾವಿರ ಹಾಗೂ ತೃತೀಯ ಬಹುಮಾನಕ್ಕೆ ಸಾವಿರ ಹಾಗೂ ಪ್ರಶಸ್ತಿ ಪತ್ರ ನೀಡಲಾಗಿದೆ ಎಂದರು. ತೀರ್ಪುಗಾರರಾಗಿ ನಟ ಜೈಜಗದೀಶ್, ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾಗೂ ಪತ್ರಕರ್ತೆ ಸರಸ್ವತಿ ಜಾನೀದಾರ್ ಪಾಲ್ಗೊಂಡಿದ್ದರು.