ತ್ರಿಕೋನ ಏಕದಿನ ಸರಣಿ ಬಹಿಷ್ಕರಿಸಲು ಜಿಂಬಾಬ್ವೆ ನಿರ್ಧರಿಸಿದ್ದೇಕೆ?

First Published 5, Jun 2018, 10:09 AM IST
Zimbabwe players likely to boycott upcoming tri-series against Pakistan, Australia
Highlights

ಜಿಂಬಾಬ್ವೆ ಕ್ರಿಕೆಟಿಗರು ಹಾಗೂ ಜಿಂಬಾಬ್ವೆ ಕ್ರಿಕೆಟ್ ಮಂಡಳಿ ನಡುವಿನ ಜಟಾಪಟಿ ಇಂದು ನಿನ್ನೆಯದಲ್ಲ. ವೇತನ ನೀಡದೆ ಸತಾಯಿಸುತ್ತಿರುವ ಕ್ರಿಕೆಟ್ ಮಂಡಳಿ ವಿರುದ್ದ ಇದೀಗ ಕ್ರಿಕೆಟಿಗರು ಗರಂ ಆಗಿದ್ದಾರೆ. ಹೀಗಾಗಿ ತ್ರಿಕೋನ ಸರಣಿ ಬಹಿಷ್ಕರಿಸಲು ಕ್ರಿಕೆಟಿಗರು ಮುಂದಾಗಿದ್ದಾರೆ.

ಜಿಂಬಾಬ್ವೆ(ಜೂನ್.5) ಜಿಂಬಾಬ್ವೆ ಕ್ರಿಕೆಟಿಗರು ಹಾಗೂ ಮಂಡಳಿ ವಿರುದ್ಧದ ವೇತನ ಬಡಿದಾಟ ಕೊನೆಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ 3 ತಿಂಗಳಿನಿಂದ ಕ್ರಿಕೆಟಿಗರ ವೇತನ ಹಾಗೂ ಭತ್ಯೆ ನೀಡದ ಮಂಡಳಿ ವಿರುದ್ಧ ಕ್ರಿಕೆಟಿಗರು ಧರಣಿ ಆರಂಭಿಸಿದ್ದಾರೆ. 

ಮಂಡಳಿ ಸ್ಯಾಲರಿ ನೀಡದ ಕಾರಣ ಮುಂಬರುವ ಆಸ್ಟ್ರೇಲಿಯಾ,ಪಾಕಿಸ್ತಾನ ವಿರುದ್ಧದ ತ್ರಿಕೋನ ಏಕದಿನ ಸರಣಿ ಬಹಿಷ್ಕರಿಸಲು ಜಿಂಬಾಬ್ವೆ ಕ್ರಿಕೆಟಿಗರು ನಿರ್ಧರಿಸಿದ್ದಾರೆ. ಜುಲೈ 1 ರಿಂದ ಜಿಂಬಾಬ್ವೆ ತ್ರಿಕೋನ ಏಕದಿನ ಸರಣಿ ಆಯೋಜಿಸಲಿದೆ. ಹೀಗಾಗಿ ಜೂನ್ 25ರೊಳಗೆ ವೇತನ ನೀಡದಿದ್ದರೆ, ಟೂರ್ನಿಯಿಂದ ಹಿಂದೆ ಸರಿಯೋದಾಗಿ ಜಿಂಬಾಬ್ವೆ ಕ್ರಿಕೆಟಿಗರು ಎಚ್ಚರಿಸಿದ್ದಾರೆ. 

ಕ್ರಿಕೆಟಿಗರು ಹಾಗೂ ಜಿಂಬಾಬ್ವೆ ಕ್ರಿಕೆಟ್ ಮಂಡಳಿಯ ಜಟಾಪಟಿ ನೂತನ ಕೋಚ್ ಆಗಿ ಆಯ್ಕೆಯಾಗಿರುವ ಭಾರತದ ಲಾಲ್‌ಚಂದ್ ರಜಪೂತ್‌ಗೆ ತಲೆನೋವಾಗಿ ಪರಿಣಮಿಸಿದೆ. ಕೋಚ್ ಲಾಲ್‌ಚಂದ್ ರಜಪೂತ್ ಕರ್ತ್ಯವಕ್ಕೆ ಹಾಜರಾಗಿದ್ದಾರೆ. ಆದರೆ ಕ್ರಿಕೆಟಿಗರು ಕ್ಯಾಂಪ್ ಹಾಗೂ ಅಭ್ಯಾಸಕ್ಕೂ ಗೈರಾಗಿದ್ದಾರೆ. 

ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಹಾಗೂ ಕ್ರಿಕೆಟಿಗರ ನಡುವಿನ ವೇತನ ಹಗ್ಗಜಗ್ಗಾಟ ಇಂದು ನಿನ್ನೆಯದಲ್ಲ. ಕಳೆದ 7 ವರ್ಷಗಳಿಂದ ವೇತನ ಸಮಸ್ಯೆ ತೀವ್ರವಾಗಿದೆ. ಹೀಗಾಗಿ ಹಲವು ಜಿಂಬಾಬ್ವೆ ಕ್ರಿಕೆಟಿಗರು ತಂಡವನ್ನ ತೊರೆದು ಕೌಂಟಿ ಕ್ರಿಕೆಟ್‌ಗೂ ಕಾಲಿಟ್ಟಿದ್ದಾರೆ. ಆದರೆ ಇದುವರೆಗೂ ಜಿಂಬಾಬ್ವೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಇದೀಗ ಜಿಂಬಾಬ್ವೆ ಕ್ರಿಕೆಟ್ ಮಂಡಳಿ, ಐಸಿಸಿ ಮೊರೆ ಹೋಗಿದೆ. ವೇತನ ಸಮಸ್ಯೆ ಪರಿಹರಿಸಲು ಐಸಿಸಿ ಮಧ್ಯಪ್ರವೇಶಸಬೇಕು ಎಂದು ಕೋರಿದೆ.
 

loader