ಮಂಗಳವಾರ ಡೆಲ್ಲಿ ಡೇರ್'ಡೆವಿಲ್ಸ್ ಮತ್ತು ಸನ್'ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಯುವಿ ಎಷ್ಟು ಡೌನ್ ಟು ಅರ್ಥ್ ಅನ್ನೋದನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಬೆಂಗಳೂರು(ಮೇ.03): ಯುವರಾಜ್ ಸಿಂಗ್ ಭಾರತ ಕ್ರಿಕೆಟ್ ಕಂಡಂತಹ ಅದ್ಭುತ ಪ್ರತಿಭೆ. ಟೀಂ ಇಂಡಿಯಾ ಪಾಲಿಗೆ ಹಲವಾರು ಸ್ಮರಣೀಯ ಗೆಲುವು ತಂದುಕೊಟ್ಟ ಎಡಗೈ ಆಟಗಾರ ಕ್ಯಾನ್ಸರ್'ನೊಂದಿಗೆ ಸೆಣಸಿ ಯಶಸ್ವಿಯಾದ ಗಟ್ಟಿಗ.
ಪ್ರಸ್ತುತ ಸನ್'ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ಯುವಿ ಐಪಿಎಲ್'ನಲ್ಲಿ ಆಡುತ್ತಿರುವ ಹಿರಿಯ ಅನುಭವಿ ಆಟಗಾರರಲ್ಲಿ ಒಬ್ಬರು. ಮೈದಾನದಲ್ಲಿ ಎದುರಾಳಿ ಬೌಲರ್'ಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಈ ಎಡಗೈ ಬ್ಯಾಟ್ಸ್'ಮನ್, ಕ್ರೀಡಾಸ್ಫೂರ್ತಿ ವಿಚಾರದಲ್ಲೂ ಸೈ ಎನಿಸಿಕೊಂಡಿದ್ದಾರೆ.
ಮಂಗಳವಾರ ಡೆಲ್ಲಿ ಡೇರ್'ಡೆವಿಲ್ಸ್ ಮತ್ತು ಸನ್'ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಯುವಿ ಎಷ್ಟು ಡೌನ್ ಟು ಅರ್ಥ್ ಅನ್ನೋದನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಡೆಲ್ಲಿ ಬ್ಯಾಟ್ಸ್'ಮನ್ ರಿಷಭ್ ಪಂತ್ ಬ್ಯಾಟಿಂಗ್ ನಡೆಸುವ ವೇಳೆ ಅವರ ಎಡಗಾಲಿನ ಶೂ ಲೇಸ್ ಬಿಚ್ಚಿ ಹೋಗಿತ್ತು. ಆಗ ಅಲ್ಲೇ ಹತ್ತಿರದಲ್ಲಿದ್ದ ಯುವರಾಜ್ ಸಿಂಗ್ ಅದನ್ನು ನೋಡಿ ಯಾವುದೇ ಸಂಕೋಚವಿಲ್ಲದೇ ಶೂ ಲೇಸ್ ಕಟ್ಟಿ ಕ್ರೀಡಾಸ್ಫೂರ್ತಿ ಮೆರೆದರು.

ರಿಷಬ್ ಪಂತ್'ಗಿಂತ 15 ವರ್ಷ ಅನುಭವಿ ಆಟಗಾರ ಯುವಿ ಇಷ್ಟೊಂದು ಸರಳ ರೀತಿಯಲ್ಲಿ ಪಂತ್'ಗೆ ಸಹಾಯ ಮಾಡಿದ್ದು ಕ್ರಿಕೆಟ್ ಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿ ಈ ದೃಶ್ಯ ಹರಿದಾಡುತ್ತಿದೆ.
ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರ ಸ್ಪೋಟಕ ಬ್ಯಾಟಿಂಗ್ ಹೊರತಾಗಿಯೂ ಡೆಲ್ಲಿ ಡೇರ್'ಡೆವಿಲ್ಸ್ ತಂಡವು ತೋರಿದ ಸಂಘಟಿತ ಪ್ರದರ್ಶನದಿಂದ ಜಯದ ನಗೆ ಬೀರಿತು.
