ಕಿರಿಯರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದಿನಗೂಲಿ ಕಾರ್ಮಿಕನ ಪುತ್ರ ಪ್ರವೀಣ್ ಚಿತ್ರವೇಲ್  ಕಂಚಿನ ಪದಕ ಗೆಲ್ಲೋ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕಡು ಬಡತನದಲ್ಲಿ ಬೆಳೆದಿರುವ  ಪದಕ ಬೇಟೆಯಾಡಿರುವ ಪ್ರವೀಣ್ ಸಾಹಸ ಪಯಣ ಇಲ್ಲಿದೆ.

ಬ್ಯೂನಸ್‌ ಏರಿಸ್‌(ಅ.18): ತಮಿಳುನಾಡಿನ ತಂಜಾವೂರು ಜಿಲ್ಲೆಯ ಸಣ್ಣ ಗ್ರಾಮದ ದಿನಗೂಲಿ ಕಾರ್ಮಿಕನ ಪುತ್ರ ಪ್ರವೀಣ್‌ ಚಿತ್ರವೇಲ್‌, ಇಲ್ಲಿ ನಡೆಯುತ್ತಿರುವ ಕಿರಿಯರ ಒಲಿಂಪಿಕ್ಸ್‌ನ ಟ್ರಿಪಲ್‌ ಜಂಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 17 ವರ್ಷದ ಪ್ರವೀಣ್‌, ಸ್ಟೇಜ್‌ 2 ಸ್ಪರ್ಧೆಯಲ್ಲಿ 15.68 ಮೀ. ಜಿಗಿದು 5ನೇ ಸ್ಥಾನದಲ್ಲಿದ್ದರು. ಆದರೆ ಸ್ಟೇಜ್‌ 1 ಸ್ಪರ್ಧೆಯಲ್ಲಿ 15.84 ಮೀ. ಜಿಗಿಯುವ ಮೂಲಕ ಒಟ್ಟಾರೆ 31.52 ಮೀ.ನೊಂದಿಗೆ 3ನೇ ಸ್ಥಾನ ಪಡೆದರು.

ನೂತನ ಮಾದರಿಯಂತೆ ಟ್ರ್ಯಾಕ್‌ ಅಂಡ್‌ ಫೀಲ್ಡ್‌ ಸ್ಪರ್ಧೆಯಲ್ಲಿ ಫೈನಲ್‌ ಇರುವುದಿಲ್ಲ. ಕಿರಿಯರ ಒಲಿಂಪಿಕ್ಸ್‌ನಲ್ಲಿ ಪ್ರತಿ ಸ್ಪರ್ಧೆಯು 2 ಬಾರಿ ನಡೆಯಲಿದ್ದು, ಒಟ್ಟಾರೆ ಫಲಿತಾಂಶವನ್ನು ಪರಿಗಣಿಸಿ ಪದಕ ನೀಡಲಾಗುತ್ತದೆ. ಈ ಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕಿದು 2ನೇ ಪದಕ, ಒಟ್ಟಾರೆ 12 ಪದಕ.

ತಮಿಳುನಾಡಿನ ನಾಗರಕೂವಿಲ್‌ನಲ್ಲಿ ಅಭ್ಯಾಸ ನಡೆಸುವ ಪ್ರವೀಣ್‌, ಕ್ರೀಡಾ ಕೋಟಾದಡಿ ಮಂಗಳೂರಿನ ಕಾಲೇಜಿನಲ್ಲಿ ಮೊದಲ ವರ್ಷ ಬಿ.ಎ ವ್ಯಾಸಂಗ ಮಾಡುತ್ತಿದ್ದಾರೆ. ಇದೇ ವರ್ಷ ನಡೆದಿದ್ದ ಚೊಚ್ಚಲ ಖೇಲೋ ಇಂಡಿಯಾ ಶಾಲಾ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದರು.